ಬಂಜಾರರ ಅಭಿವೃದ್ಧಿಗೆ ಸಂತ ಸೇವಾಲಾಲರ ಕೊಡುಗೆ ಅಪಾರ: ಮಂಜುನಾಥ್

| Published : Feb 18 2025, 12:32 AM IST

ಬಂಜಾರರ ಅಭಿವೃದ್ಧಿಗೆ ಸಂತ ಸೇವಾಲಾಲರ ಕೊಡುಗೆ ಅಪಾರ: ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಬಂಜಾರ ಸಮಾಜದ ಅಭಿವೃದ್ಧಿಗೆ ಸಂತ ಸೇವಾಲಾಲರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು.

ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಂತ ಸೇವಾಲಾಲರ ಜಯಂತಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕಡೂರು

ಬಂಜಾರ ಸಮಾಜದ ಅಭಿವೃದ್ಧಿಗೆ ಸಂತ ಸೇವಾಲಾಲರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಂತ ಸೇವಾಲಾಲರ ಜಯಂತಿ ಉದ್ಘಾಟಿಸಿ ಮಾತನಾಡಿ, ಗುಡ್ಡ ಗಾಡು ಪ್ರದೇಶಗಳಲ್ಲಿ ವಾಸ ಮಾಡುವ ಬಂಜಾರ ಸಮುದಾಯವಾಗಿದ್ದು ಇತ್ತೀಚಿನ ದಿನಗಳಲ್ಲಿ ಸಮಾಜ ಶೈಕ್ಷಣಿಕ, ಆರ್ಥಿಕವಾಗಿ ಸುಧಾರಣೆ ಹೊಂದಲು ಸಮಾಜದಲ್ಲಿ ಜಾಗೃತಿ ಮತ್ತು ಒಗ್ಗಟ್ಟು ಮೂಡಿದೆ. ಇದಕ್ಕೆ ಸಂತ ಸೇವಾಲಾಲರ ಆದರ್ಶ ತತ್ವಗಳು ಕಾರಣ. ಸಮಾಜದಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡಲು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದು ಹೇಳಿದರು.

ಅಲ್ಲದೆ ಶಿಕ್ಷಣದ ಮೂಲಕ ಅಧಿಕಾರಿಗಳಾಗಿ ಶಿಕ್ಷಕರಾಗಿ ಉನ್ನತ ಹುದ್ದೆ ಅಲಂಕರಿಸುತ್ತಿರುವುದು ಸಂತೋಷದ ಸಂಗತಿ ಎಂದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿಆರ್ ಪ್ರವೀಣ್ ಮಾತನಾಡಿ ಬುಡಕಟ್ಟು ಜನಾಂಗದವರಾಗಿ ಅಲೆಮಾರಿಗಳಾಗಿ ಗ್ರಾಮ ಗಳಿಂದ ದೂರ ಉಳಿದ ಅತ್ಯಂತ ಹಿಂದುಳಿದ ಬಂಜಾರ ಸಮಾಜದ ಅಭಿವೃದ್ಧಿಗೆ ಒಗ್ಗೂಡಿಸಿ ಸಮಾಜಮುಖಿ ಬದಲಾವಣೆ ತಂದವರು ಮಹಾನ್ ಪುರುಷರು ಸೇವಾಲಾಲರು ಎಂದರು. ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಕುಮಾರ್ ನಾಯ್ಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದವರು ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಸಾಕ್ಷರರಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಯುವ ಸಮೂಹ ಮುಂದಾಗಿದೆ. ಸಮಾಜದ ಹಿರಿಯರನ್ನು ಗೌರವಿಸಿ ಸಂತರ ಹಾದಿಯಲ್ಲಿ ಸಾಗಬೇಕೆಂದರು. ಲೋಕೋಪಯೋಗಿ ಇಲಾಖೆ ಎಇಇ ಬಸವರಾಜ್ ನಾಯ್ಕ ಮಾತನಾಡಿ, ಬಂಜಾರ ಸಮುದಾಯ ಇತರೆ ಸಮಾಜಗಳಿಗಿಂತ ವಿಭಿನ್ನವಾಗಿದೆ ಈ ಸಮಾಜದ ಉಡುಗೆ, ಸಂಸ್ಕೃತಿ ಆಚರಣೆ ವಿಶೇಷವಾಗಿವೆ. ಆದರೆ ಸಮಾಜದಿಂದ ಬೆಳೆದ ವ್ಯಕ್ತಿ ಗಳು ತಮ್ಮ ಸಮಾಜದಲ್ಲಿರುವ ಕಂದಾಚಾರ ಗಳನ್ನು ದೂರ ಮಾಡಿ ಇತರೆ ಸಮಾಜಗಳ ಪ್ರೀತಿ ವಿಶ್ವಾಸ ಗಳಿಸುವ ಜೊತೆ ಬುದ್ಧ, ಬಸವ, ಕನಕದಾಸರಂತಹ ಎಲ್ಲ ಸಂತರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಚಿಕ್ಕಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ನಾಯ್ಕ, ಮಾಜಿ ತಾಪಂ ಸದಸ್ಯ ಆನಂದ ನಾಯ್ಕ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಮೋಹನ್ ನಾಯ್ಕ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಬಿ ಟಿ ಗಂಗಾಧರ ನಾಯ್ಕ, ವಕೀಲ ರಾಮಚಂದ್ರಾ ನಾಯ್ಕ, ಸೇರಿದಂತೆ ಸಮಾಜದ ಮುಖಂಡರು ಸರ್ಕಾರಿ ಅಧಿಕಾರಿಗಳು ಮತ್ತು ಸಮಾಜದವರು ಹಾಜರಿದ್ದರು.

17ಕೆಕೆಡಿಯು4 ಕಡೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ ನಡೆಯಿತು