ಸಾರಾಂಶ
- ಹೊನ್ನಾಳಿ ಪುರಸಭೆ ಸಭಾಂಗಣದಲ್ಲಿ ಸೇವಾಲಾಲ್ ಮಹಾರಾಜ್ ಜಯಂತಿಯಲ್ಲಿ ಅಧ್ಯಕ್ಷ ಮೈಲಪ್ಪ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಂತಶ್ರೇಷ್ಠ ಸೇವಾಲಾಲರು ನಮ್ಮ ಹಳೇ ಹೊನ್ನಾಳಿ ತಾಲೂಕಿನಲ್ಲಿ ಜನಿಸಿದವರು ಎಂದು ಹೇಳಿಕೊಳ್ಳಲಿಕ್ಕೆ ಎಲ್ಲರಿಗೂ ಹೆಮ್ಮೆ ಎನ್ನಿಸಬೇಕು. ಇವರ ಕಾರಣದಿಂದಾಗಿ ಇಂದು ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳನ್ನು ಇಡೀ ವಿಶ್ವದಲ್ಲೇ ಗುರುತಿಸುವಂತಾಗಿದೆ. ಅಂತಹ ಶ್ರೇಷ್ಠಸಂತ ಸೇವಾಲಾಲ್ ಆದರ್ಶಗಳನ್ನು ಇಡೀ ಮನುಕುಲ ಅನುಸರಿಸಬೇಕು ಎಂದು ಪುರಸಭೆ ಅಧ್ಯಕ್ಷ ಮೈಲಪ್ಪ ಹೇಳಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಸಂತ ಸೇವಾಲಾಲರ 286 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಂತ ಶ್ರೇಷ್ಠ ಸೇವಲಾಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಬಂಜಾರ ಸಮುದಾಯ ಸ್ವಾಭಿಮಾನಿಗಳಾಗಿ ಪರಿಶ್ರಮದಿಂದ ಜೀವನ ಸಾಗಿಸುತ್ತಾರೆಯೇ ಹೊರತು, ಇನ್ನೊಬ್ಬರ ಬಳಿ ಕೈ ಚಾಚುವುದಿಲ್ಲ. ಇಂತಹ ಸ್ವಾಭಿಮಾನಿ ಸಮಾಜ ನಮ್ಮೆಲ್ಲರಿಗೂ ಆದರ್ಶವಾಗಬೇಕು. ಸೇವಾಲಾಲ್ ಅವರ ಜಯಂತಿಯನ್ನು ನಾಮಕಾವಸ್ತೆಗಾಗಿ ಆಚರಿಸದೇ, ಅವರ ಜೀವನದ ಆದರ್ಶಗಳು, ಸದ್ವಿಚಾರಗಳನ್ನು ಪಾಲಿಸಿ, ಇನ್ನೊಬ್ಬರಿಗೆ ತಿಳಿಸಬೇಕು ಎಂದರು.ಬಂಜಾರ ಸಮುದಾಯದ ಮುಖಂಡ ಅಂಜುನಾಯ್ಕ್ ಮಾತನಾಡಿ, ನಮ್ಮ ಧರ್ಮಗುರು ಸೇವಾಲಾಲ್ ಅವರು ನೊಂದವರ ಕಣ್ಣೀರು ಒರೆಸಿ, ಆತ್ಮಸ್ಥೈರ್ಯ ತುಂಬುತ್ತಿದ್ದರು. ಎಲ್ಲರೂ ಒಂದೇ ಎಂಬ ವಿಶಾಲ ಮನೋಭಾವ ಹೊಂದಿದ್ದ ಅವರು, ಮಾನವೀಯತೆಯ ದೈವಪುರುಷ ಎಂದರು.
ಬಂಜಾರ ಭಾಷೆಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಬೇಕು. ರಾಜ್ಯದಲ್ಲಿರುವ ಶೇ.100ರಷ್ಟು ತಾಂಡ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಮುಖ್ಯವಾಗಿ ತಾಂಡಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಮುಖ್ಯಾಧಿಕಾರಿ ಲೀಲಾವತಿ, ಪುರಸಭೆ ಸದಸ್ಯರಾದ ಬಾಬು ಹೋಬಳದಾರ್, ರಂಗನಾಥ್, ಪ್ರಮುಖರಾದ ಸಂತೋಷ್, ಲಕ್ಷ್ಮ ಣ್ ಮಹೇಶ್ ಹುಡೇದ್, ವಿಜಯೇಂದ್ರಪ್ಪ, ಚಂದ್ರು ಮತ್ತಿತರರು ಉಪಸ್ಥಿತರಿದ್ದರು.
- - - -15ಎಚ್.ಎಲ್.ಐ3.ಜೆಪಿಜಿ:ಸೇವಾಲಾಲ್ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷ ಮೈಲಪ್ಪ ಪುಷ್ಪಾರ್ಚನೆ ಸಲ್ಲಿಸಿದರು. ಸಮುದಾಯದ ಮುಖಂಡ ಅಂಜುನಾಯ್ಕ್, ಮುಖ್ಯಾಧಿಕಾರಿ ಲೀಲಾವತಿ, ಪುರಸಭೆ ಸದಸ್ಯರು ಇದ್ದರು.