ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಸಮಾಜದ ನ್ಯೂನತೆಗಳನ್ನು ಗುರುತಿಸಿ, ಸಮಾಜವನ್ನು ಒಟ್ಗಾಗಿಸುವುದರ ಮೂಲಕ ಶೋಷಿತ ಸಮಾಜಕ್ಕೆ ಸಾಮಾಜಿಕ ಶಕ್ತಿ ನೀಡಿದವರು ಸಂತ ಸೇವಾಲಾಲರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಶನಿವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕೃಷ್ಣನಗರಿ ಶ್ರೀ ಸಂತ ಸೇವಾಲಾಲ್ ಬಂಜಾರ ಸಂಘ ಆಶ್ರಯದಲ್ಲಿ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾನತೆಯ ಬದುಕಿಗೆ ಹೆಚ್ಚು ಮಹತ್ವ ನೀಡಿ ಬಂಜಾರ ಸಮುದಾಯದ ಉನ್ನತಿಗಾಗಿ ಹೋರಾಡಿದ ಮಹಾನ್ ಸಂತ ಸೇವಲಾಲರು. ಅಧೋಗತಿಯಲ್ಲಿರುವ ಸಮಾಜದ ಏಳಿಗೆಗಾಗಿ ಪ್ರತಿಯೊಂದು ಸಮುದಾಯದಲ್ಲೂ ಜನ್ಮ ತಾಳಿದ ಅದೇಷ್ಟೋ ಮಹಾಪುರುಷರ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ. ಸೇವಲಾಲ್ ಕೂಡ ತನ್ನ ಸಮಾಜವನ್ನು ದಾರ್ಶನಿಕರಾಗಿ, ಸಂತರಾಗಿ, ಚಿಂತಕರಾಗಿ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದರು.ಕಾಪುವಿನ ಕಳತ್ತೂರು ಪಿ.ಕೆ.ಎಸ್. ಪ್ರೌಢಶಾಲೆಯ ಮುಖ್ಯಶಿಕ್ಷಕ ಗಂಗಾ ನಾಯ್ಕ್ ಎಲ್., ಸಂತ ಸೇವಾಲಾಲ ಹಾಗೂ ಬಂಜಾರ ಸಮುದಾಯದ ಆಚಾರ-ವಿಚಾರಗಳ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಬಂಜಾರ ಸಂಘ ಅಧ್ಯಕ್ಷ ಕುಮಾರ್ ಕೆ.ಎಂ., ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಲಮಾಣಿ, ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಸೇವಾಲಾಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.