ಸಮಾತೆಗೆ ಶ್ರಮಿಸಿದ ಸಂತ ಶ್ರೀ ನಾರಾಯಣ ಗುರು

| Published : Aug 21 2024, 12:35 AM IST

ಸಾರಾಂಶ

ನಾರಾಯಣಗುರುಗಳು ಒಂದೇ ಜಾತಿ, ಒಂದೇ ಧರ್ಮ, ಒಬ್ಬ ಮಾನವ ಎಂಬ ಘೋಷವಾಕ್ಯದೊಂದಿಗೆ ಸಮಾಜವನ್ನು ಪರಿವರ್ತನೆ ಮಾಡಲು ಶ್ರಮಿಸಿದರು. ಆಧ್ಯಾತ್ಮಿಕ ಜ್ಞಾನೋದಯ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೆಜಿಸುವ ಸಲುವಾಗಿ ಚಳವಳಿಯನ್ನು ನಡೆಸಿದರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕಿ ಅರುಂಧತಿ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಜಿಲ್ಲಾ ಆರ್ಯ ಈಡಿಗ ಸಮಾಜದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮ ಶ್ರೀ ನಾರಾಯಣ ಗುರುರವರ 170 ನೇ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸಮಾಜ ಪರಿವರ್ತನೆಗೆ ಹೋರಾಟ

ಸಮಾಜದಲ್ಲಿ ಶೋಷಣೆಯ ವಿರುದ್ಧ ದನಿ ಎತ್ತಿ ಹಾಗೂ ಸಮಾಜದಲ್ಲಿ ಬದಲಾವಣೆ ತರುವಲ್ಲಿ ನಾರಾಯಣಗುರುಗಳ ಪಾತ್ರ ಬಹು ಮುಖ್ಯ. ಒಂದೇ ಜಾತಿ, ಒಂದೇ ಧರ್ಮ, ಒಬ್ಬ ಮಾನವ ಎಂಬ ಘೋಷವಾಕ್ಯದೊಂದಿಗೆ ಸಮಾಜವನ್ನು ಪರಿವರ್ತನೆ ಮಾಡಲು ಶ್ರಮಿಸಿದರು. ಆಧ್ಯಾತ್ಮಿಕ ಜ್ಞಾನೋದಯ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೆಜಿಸುವ ಸಲುವಾಗಿ ಅನ್ಯಾಯದ ವಿರುದ್ದವಾಗಿ ಸುಧಾರಣ ಚಳವಳಿಯನ್ನು ನಡೆಸಿದರು ಎಂದರು.

ನಾರಾಯಣಗುರುಗಳು ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಹಾಗೂ ಮೊದಲಾದ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಶ್ರಮಿಸಿದ್ದರು ಎಂದು ತಿಳಿಸಿದರು.

ಒಂದೇ ಜಾತಿ, ಒಂದೇ ಧರ್ಮ

ಉಪನ್ಯಾಸಕ ಸುದರ್ಶನ್ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುವೆಂಬ ಒಬ್ಬ ಸಮಾಜಕ ಸುಧಾರಕ ಉದಯಿಸಿ ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು ಒಂದೇಜಾತಿ ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯವಾಕ್ಯವನ್ನು ಜಗಕೆ ಸಾರಿದರು ಎಂದರು.

ಅಸ್ಪೃಶ್ಯತೆ ವಿರುದ್ಧ ಸಮರ

ಬ್ರಹ್ಮ ಶ್ರೀ ನಾರಾಯಣ ಗುರುಗಳು ಸಮಸ್ತ ಅಸ್ಪೃಶ್ಯ, ನಿಮ್ನ ವರ್ಗದವರನ್ನು ಎಲ್ಲ ಸ್ತರಗಳಲ್ಲಿ ಮೇಲೆ ತರಲು ಮಾಡಿದ ಪ್ರಯತ್ನವನ್ನು ಅವರ ಬದುಕಿನ ಮಹತ್ಸಾಧನೆ ಎನ್ನಬಹುದು. ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು ಎಂದು ತಿಳಿಸಿದರು.

ಈ ಸಂರ್ದಭದಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ದೇವರಾಜು, ಕಾರ್ಯದರ್ಶಿ ಆರ್. ಲಕ್ಷ್ಮೀ ನಾರಾಯಣ್, ಸಮುದಾಯದ ಮುಖಂಡ ದೇವೇಂದ್ರ ಸ್ವಾಮಿ,ನಿರೂಪಕ ನಾಗೇಂದ್ರ, ಸಮುದಾಯದ ಪದಾಧಿಕಾರಿಗಳು,ಮತ್ತಿತರರು ಇದ್ದರು.