ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪುರಸಭೆಯ ಕೆಲವು ಕಟ್ಟಡಗಳ ಹರಾಜು ಮಾಡಲು ಪುರಸಭೆ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್ ಹೇಳಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಯೊಳಗೆ ೧೨ ವರ್ಷ ಅವಧಿ ಮುಗಿದಿರುವ ಮಳಿಗೆಗಳು, ಆಜಾದ್ ರಸ್ತೆಯಲ್ಲಿರುವ ಮೀನು ಹಾಗೂ ಕೋಳಿ ಮಾಂಸದ ಮಳಿಗೆಗಳು ಹಾಗೂ ಹಳೇ ಬಸ್ ನಿಲ್ದಾಣದಲ್ಲಿರುವ ಪುರಸಭೆಯ ನೂತನ ಕಟ್ಟಡವನ್ನು ಬಾಡಿಗೆಗಾಗಿ ಹರಾಜು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎಸ್.ಎಸ್.ಪಿ ಅನುದಾನ, ಮುಕ್ತ ನಿಧಿ, ೧೫ನೇ ಹಣಕಾಸು ಯೋಜನೆ ಅನುದಾನಗಳು ೨೦೧೯-೨೦,೨೦೨೪-೨೫ ಸಾಲಿನಲ್ಲಿ ಬಿಡುಗಡೆಯಾಗಿದ್ದು, ಇದರಲ್ಲಿ ಕುಡಿಯುವ ನೀರಿನ ವಿವಿಧ ಯೋಜನೆಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹರಾಜು ಮಾಡಲಾಗುತ್ತಿದ್ದು, ಇದರ ದರ ಅನುಮೋದನೆಗೆ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದರು.
ಸಕಲೇಶ್ವರಸ್ವಾಮಿ ರಥೋತ್ಸವ ಹತ್ತಿರ ಬರುತ್ತಿದ್ದು, ಜಾತ್ರೆ ನಡೆಸಲು ಸ್ಥಳದ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಸದಸ್ಯರ ಅಭಿಪ್ರಾಯದಂತೆ ಶಾಸಕರ ಬಳಿ ಸ್ಥಳದ ಕುರಿತು ಚರ್ಚೆ ಮಾಡಿ ಮುಂದಿನ ಸಭೆಯಲ್ಲಿ ಜಾತ್ರೆ ಸ್ಥಳದ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ. ಹಾಗೂ ಬೀದಿ ಬದಿಯ ವ್ಯಾಪಾರಿಗಳ ಪ್ರಕರಣ ನ್ಯಾಯಾಲಯದಲ್ಲಿದ್ದು ಎಲ್ಲಾ ಸದಸ್ಯರ ಸಹಕಾರದಿಂದ ಸ್ವಚ್ಛ ಸಕಲೇಶಪುರ ನಗರ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.ಕಸದಿಂದ ಕೆಲವರಿಗೆ ರಸ: ಪಟ್ಟಣದ ಜಾತ್ರೆ ಮೈದಾನದಲ್ಲಿರುವ ಕಸದಿಂದ ಕೆಲವರಿಗೆ ರಸ ಸಿಗುತ್ತಿದೆ. ಕಸ ವಿಲೇವಾರಿ ಹೆಸರಿನಲ್ಲಿ ಆಗಾಗ ವಿನಾಕಾರಣ ಹಣ ವಿನಿಯೋಗಿಸಲಾಗುತ್ತಿದೆ. ಆದರೆ ಕಸ ವಿಲೇವಾರಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಜಾತ್ರೆ ಮೈದಾನದಲ್ಲಿರುವ ಕಸದ ವಿಲೇವಾರಿಗೆ ಈಗಾಗಲೇ ೩ ಬಾರಿ ಟೆಂಡರ್ ಮಾಡಲಾಗಿದೆ. ಆದರೆ ಸಿಂಗಲ್ ಟೆಂಡರ್ ಆಗಿರುವ ಕಾರಣ ಟೆಂಡರ್ ರದ್ದಾಗಿದೆ. ತರಾತುರಿಯಲ್ಲಿ ಟೆಂಡರ್ ಮಾಡಲು ಅಸಾಧ್ಯವಾಗಿದ್ದು ಈ ಬಾರಿಯು ಸಹ ಜಾತ್ರೆ ಮಾಡಲು ಬೇರೆ ಜಾಗವನ್ನು ಹುಡುಕಲಾಗುವುದು ಎಂದರು.ಮಾಸ್ಟರ್ ಪ್ಲಾನ್ ಅವೈಜ್ಞಾನಿಕ:
ನಗರಾಭಿವೃದ್ಧಿ ಇಲಾಖೆ ವತಿಯಿಂದ ಮಾಡಿರುವ ನಗರ ಯೋಜನಾ ನಕ್ಷೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಹಲವು ಅಮಾಯಕರ ಮನೆಗಳನ್ನು ಒಡೆದು ಪುನರ್ ನಿರ್ಮಾಣ ಮಾಡಲು ಮುಂದಾಗಿದ್ದು, ಇಂತಹವರಿಗೆ ಪುರಸಭೆಯಿಂದ ಕಟ್ಟಡ ಕಟ್ಟಲು ಪರವಾನಿಗೆ ದೊರಕುತ್ತಿಲ್ಲ. ಅಧಿಕಾರಿಗಳು ಕಾನೂನು ಬದಿಗಿಟ್ಟು ಜನ ಸಾಮಾನ್ಯರ ಕೆಲಸ ಮಾಡಿಕೊಡಲು ಮುಂದಾಗಬೇಕಾಗಿದೆ. ನಗರ ಯೋಜನಾ ನಕ್ಷೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಸರ್ಕಾರದಿಂದಲೇ ಇದನ್ನು ಬದಲಾವಣೆ ಮಾಡಿಸಿಕೊಂಡು ಬರಲು ಸಮಯವಾಗುತ್ತದೆ. ಈ ನಿಟ್ಟಿನಲ್ಲಿ ಈ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಕೂಡಲೇ ಈ ಕುರಿತು ನಗರಾಭಿವೃದ್ಧಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದರು.ಹಲವು ಗುತ್ತಿಗೆದಾರರು ಸುಲಭದ ಕೆಲಸಗಳನ್ನು ಮೊದಲು ಮಾಡಿ ಬಿಲ್ ಪಡೆದುಕೊಳ್ಳುತ್ತಿದ್ದಾರೆ. ಕಷ್ಟದ ಕಾಮಗಾರಿಗಳನ್ನು ಮಾಡಲು ಮುಂದಾಗದಿರುವುದರಿಂದ ಹಲವು ಅಭಿವೃದ್ಧಿ ಕೆಲಸಗಳು ನಡೆಯದಂತಾಗಿದೆ. ಈ ಕುರಿತು ಅಧಿಕಾರಿಗಳು ಗಮನಹರಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಅಧಕ್ಷೆ ಯಾವ ಯಾವ ಕೆಲಸಗಳು ಬಾಕಿ ಎಂದು ಪಟ್ಟಿ ಮಾಡಿ. ಕೂಡಲೇ ಗುತ್ತಿಗೆದಾರರಿಗೆ ಕಾಮಗಾರಿ ಮಾಡಲು ಆದೇಶಿಸುತ್ತೇನೆ, ಇಲ್ಲದಿದ್ದಲ್ಲಿ ಕಪ್ಪು ಪಟ್ಟಿಗೆ ಗುತ್ತಿಗೆದಾರರನ್ನು ಸೇರಿಸಲಾಗುವುದು ಎಂದರು.
ಬೀದಿಬದಿಯ ವ್ಯಾಪಾರಸ್ಥರ ಪ್ರಕರಣ ನ್ಯಾಯಾಲಯದಲ್ಲಿದ್ದು ಕೆಲವರು ತಪ್ಪು ಮಾಹಿತಿ ನೀಡಿ ಪ್ರಕರಣವನ್ನು ನ್ಯಾಯಾಲಯದ ಮೆಟ್ಟಿಲಿಗೆ ತೆಗೆದುಕೊಂಡಿದ್ದಾರೆ. ಎಲ್ಲಾ ಸದಸ್ಯರ ನೆರವಿನಿಂದ ಬೀದಿ ಬದಿಯ ವ್ಯಾಪಾರಸ್ಥರನ್ನು ಒಕ್ಕೆಲೆಬ್ಬಿಸಲಾಗುವುದು ಹಾಗೂ ಫೂಟ್ಪಾತ್ ಒತ್ತುವರಿ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪುರಸಭಾ ಅಧಕ್ಷೆ ಜ್ಯೋತಿ ಆದೇಶಿಸಿದರು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಹೇಶ್ವರಪ್ಪ, ಪುರಸಭಾ ಅಭಿಯಂತರೆ ಸುಜಾತ, ಪುರಸಭಾ ಉಪಾಧ್ಯಕ್ಷೆ ಜರೀನಾ, ಸದಸ್ಯರಾದ ಕಾಡಪ್ಪ, ಆದರ್ಶ, ಪ್ರಜ್ವಲ್, ಪ್ರದೀಪ್, ಅಣ್ಣಪ್ಪ, ಇಸ್ರಾರ್, ಮೋಹನ್, ವನಜಾಕ್ಷಿ, ಅನ್ನಪೂರ್ಣ, ವರಲಕ್ಷ್ಮೀ, ವಿದ್ಯಾ, ಸರಿತಾ ಮತ್ತಿತರರು ಹಾಜರಿದ್ದರು.