ಸಂತ್ರಸ್ತ ವ್ಯಾಪಾರಸ್ಥರಿಗೆ ಸಿಗದ ವಾಣಿಜ್ಯ ಮಳಿಗೆಗಳು

| Published : Jul 21 2024, 01:18 AM IST

ಸಾರಾಂಶ

೧೯೯೬ ಸೆಪ್ಟಂಬರ್ ತಿಂಗಳಿನಲ್ಲಿ ಗೌರಿಹಬ್ಬಕ್ಕೆ ಮಗಳಿಗೆ ಅರಿಶಿಣ ಕುಂಕುಮ ನೀಡಲು ಬಂದಿದ್ದ ಕೊಡಗಿನ ವ್ಯಕ್ತಿಯೊಬ್ಬರು ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿನ ಶೌಚಗೃಹದ ಬಾಗಿಲಿನಲ್ಲಿ ಬ್ರೇಕ್ ವಿಫಲಗೊಂಡ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದರು. ಗೌರಿ ಹಬ್ಬದ ಸಂತೆಯ ದಿನವಾದ ಗುರುವಾರ ಘಟನೆ ಖಂಡಿಸಿ ಹಾಗೂ ಹೊಸ ಬಸ್ ನಿಲ್ದಾಣಕ್ಕಾಗಿ ಆಗ್ರಹಿಸಿ ನಡೆಸಿದ ಗಲಭೆಯಿಂದ ಹತ್ತಕ್ಕೂ ಅಧಿಕ ಸರ್ಕಾರಿ ಬಸ್‌ಗಳು ಬೆಂಕಿಗಾಹುತಿಯಾದರೆ, ಬಸ್ ನಿಲ್ದಾಣದಲ್ಲಿದ್ದ ಹೋಟೆಲ್ ಸೇರಿದಂತೆ ೨೫ ಗೂಡಂಗಡಿ ಹಾಗೂ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿದ್ದ ಪಟ್ಟಣ ಪೊಲೀಸ್‌ ಠಾಣೆ ಧ್ವಂಸಗೊಂಡಿದ್ದವು.

ಕನ್ನಡಪ್ರಭ ವಾರ್ತೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿನ ೨೫ ಗೂಡಂಗಡಿಗಳು ಉದ್ರಿಕ್ತರ ದಾಳಿಗೆ ಸಿಲುಕಿ ಭಸ್ಮಗೊಂಡು ೨೭ ವರ್ಷ ಕಳೆದರೂ ಸಂತ್ರಸ್ತರಿಗೆ ಬದಲಿ ಅಂಗಡಿ ನೀಡುವ ಭರವಸೆ ಈಡೇರದಾಗಿದೆ. ೧೯೯೬ ಸೆಪ್ಟಂಬರ್ ತಿಂಗಳಿನಲ್ಲಿ ಗೌರಿಹಬ್ಬಕ್ಕೆ ಮಗಳಿಗೆ ಅರಿಶಿಣ ಕುಂಕುಮ ನೀಡಲು ಬಂದಿದ್ದ ಕೊಡಗಿನ ವ್ಯಕ್ತಿಯೊಬ್ಬರು ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿನ ಶೌಚಗೃಹದ ಬಾಗಿಲಿನಲ್ಲಿ ಬ್ರೇಕ್ ವಿಫಲಗೊಂಡ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದರು. ಗೌರಿ ಹಬ್ಬದ ಸಂತೆಯ ದಿನವಾದ ಗುರುವಾರ ಘಟನೆ ಖಂಡಿಸಿ ಹಾಗೂ ಹೊಸ ಬಸ್ ನಿಲ್ದಾಣಕ್ಕಾಗಿ ಆಗ್ರಹಿಸಿ ನಡೆಸಿದ ಗಲಭೆಯಿಂದ ಹತ್ತಕ್ಕೂ ಅಧಿಕ ಸರ್ಕಾರಿ ಬಸ್‌ಗಳು ಬೆಂಕಿಗಾಹುತಿಯಾದರೆ, ಬಸ್ ನಿಲ್ದಾಣದಲ್ಲಿದ್ದ ಹೋಟೆಲ್ ಸೇರಿದಂತೆ ೨೫ ಗೂಡಂಗಡಿ ಹಾಗೂ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿದ್ದ ಪಟ್ಟಣ ಪೊಲೀಸ್‌ ಠಾಣೆ ಧ್ವಂಸಗೊಂಡಿದ್ದವು. ಗಲಭೆ ನಿಯಂತ್ರಿಸಲು ಸ್ಥಳೀಯ ಪೊಲೀಸರು ವಿಫಲರಾದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸವಿತಾ ಹಂಡೆ ನೇತೃತ್ವದಲ್ಲಿ ಪಟ್ಟಣಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ಪಡೆ ಹಾರಿಸಿದ ಗುಂಡಿಗೆ ನಾಲ್ವರು ಮೃತಪಟ್ಟಿದ್ದರು. ಈ ಘಟನೆ ಸಂಬಂಧ ೧೫ಕ್ಕೂ ಅಧಿಕ ಜನರನ್ನು ಬಂಧಿಸಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸುದೀರ್ಘ ವಿಚಾರಣೆ ನಂತರ ೧೫ ಜನರು ಇತ್ತೀಚೆಗೆ ಮೊಕದ್ದಮೆಯಿಂದ ನಿರ್ದೋಷಿಗಳಾಗಿ ಹೊರಬಂದಿದ್ದಾರೆ.

ಮಾನವೀಯತೆ: ಘಟನೆಯಿಂದ ೨೫ ಗೂಡಂಗಡಿ ಮಾಲೀಕರು ಬೆಳಿಗ್ಗೆ ಎದ್ದು ಸಂಜೆ ಆಗುವ ವೇಳೆಗೆ ದುಡಿಮೆಯನ್ನು ಕಳೆದುಕೊಂಡು ಬೀದಿಗೆ ಬಿದಿದ್ದರು. ಇದನ್ನು ಗಮನಿಸಿದ ಪುರಸಭೆ ಆಡಳಿತ ಇನ್ನೊಂದು ವರ್ಷದಲ್ಲಿ ಬದಲಿ ಅಂಗಡಿಗಳನ್ನು ನಿರ್ಮಿಸಿಕೊಡುವುದಾಗಿ ೧೯೯೭ ರ ನವಂಬರ್ ತಿಂಗಳಿನಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಮಾನವೀಯತೆ ಮರೆದಿತ್ತು.

10 ಸಾವಿರ ರು. ಪಡೆದ ಪುರಸಭೆ: ಅಂಗಡಿ ಕಳೆದುಕೊಂಡವರಿಗೆ ಹೊಸದಾಗಿ ಅಂಗಡಿ ನೀಡಬೇಕಾದರೆ ೧೦ ಸಾವಿರ ರು. ಮುಂಗಡ ಹಣ ಪಾವತಿಸಬೇಕು ಎಂಬ ಷರತ್ತು ವಿಧಿಸಿದ್ದ ಪುರಸಭೆ ೨೫ ವರ್ತಕರಿಂದ ೨೬ ವರ್ಷದ ಹಿಂದೆ ತಲಾ ೧೦ ಸಾವಿರ ಹಣ ಪಡೆದು ರಸೀದಿಯನ್ನು ನೀಡಿತ್ತು. ಆದರೆ, ಅಂದಿನಿಂದ ಇಂದಿನವರಗೆ ಅಂಗಡಿಯೂ ಇಲ್ಲ, ಹಣವು ಇಲ್ಲ ಎಂಬ ಪರಿಸ್ಥಿತಿ ಗೂಡಂಗಡಿ ಮಾಲೀಕರದ್ದಾಗಿದೆ.

ಸದ್ಯ ೨೭ ವರ್ಷದ ಹಿಂದೆ ಅಂಗಡಿಗಳನ್ನು ಕಳೆದುಕೊಂಡ ಸಾಕಷ್ಟು ವರ್ತಕರು ಬದಲಿ ಅಂಗಡಿಗಳಿಗಾಗಿ ಸಾಕಷ್ಟು ವರ್ಷ ಪುರಸಭೆಗೆ ಅಲೆದರೂ ಯಾವುದೇ ಪ್ರಯೋಜವಾಗದೆ, ಕುಟುಂಬ ನಿರ್ವಹಣೆಗಾಗಿ ಪಿಗ್ಮಿ ಸಂಗ್ರಹ, ಕೂಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ೨೫ ವರ್ತಕರ ಪೈಕಿ ಈಗಾಗಲೇ ೭ ಜನರು ಮೃತಪಟ್ಟಿದ್ದಾರೆ. ಭೂತಬಂಗಲೆಯಾದ ವಾಣಿಜ್ಯ ಸಂಕೀರ್ಣ: ಅಂಗಡಿ ಕಳೆದುಕೊಂಡವರಿಗೆ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗುವ ವಾಣಿಜ್ಯ ಮಳಿಗೆಯಲ್ಲಿ ಅಂಗಡಿಗಳನ್ನು ನೀಡಲಾಗುವುದು ಎಂದು ೨೦೧೦ರಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದ ವೇಳೆ ಅಂದಿನ ಶಾಸಕರು ಭರವಸೆ ನೀಡಿದ್ದರು. ಆದರೆ, ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿ ಒಂದೂವರೆ ದಶಕಗಳೆ ಕಳೆಯುತ್ತ ಬಂದರೂ ಇದುವರೆಗೆ ವಾಣಿಜ್ಯ ಸಂಕೀರ್ಣ ಕಾಮಗಾರಿ ಮುಗಿಯದಾಗಿದ್ದು ಸದ್ಯ ಈ ವಾಣಿಜ್ಯ ಸಂಕೀರ್ಣ ಮಾದಕ ವ್ಯಸನಿಗಳ, ನಿರ್ವಸತಿಗರ ತಂಗುದಾಣವಾಗಿದೆ.

ಮನವಿಗೆ ಇಲ್ಲ ಬೆಲೆ: ಬದಲಿ ಅಂಗಡಿಗಳನ್ನು ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿ ಸೇರಿದಂತೆ ತಾಲೂಕಿನ ಹಿರಿಯ ಅಧಿಕಾರಿಗಳಿಗೆ ಹಾಗೂ ಕಂಡಕಂಡ ರಾಜಕಾರಣಿಗಳಿಗೆ ನಿರಂತರವಾಗಿ ಮನವಿ ನೀಡಿದರೂ ಅಂಗಡಿ ಕಳೆದುಕೊಂಡವರ ಬಗ್ಗೆ ಪುರಸಭೆ ಆಡಳಿತವಾಗಲಿ ಜಿಲ್ಲಾಡಳಿತವಾಗಲಿ ಕರುಣೆ ತೋರದಾಗಿದೆ.

ಬೀದಿಬದಿ ವ್ಯಾಪಾರಿಗಳ ಹಾವಳಿ: ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪ ಭಾರಿ ಪ್ರಮಾಣದಲ್ಲಿ ಬೀದಿಬದಿ ವ್ಯಾಪಾರ ತಲೆ ಎತ್ತಿದ್ದು ಸ್ವಚ್ಛತೆ ಎಂಬುದು ಗಗನ ಕುಸುಮವಾಗಿದೆ. ಪಾದಚಾರಿ ಸಂಚಾರಕ್ಕೂ ಕುತ್ತು ಬರುವಂತೆ ನಿರ್ಮಿಸಿರುವ ಅಂಗಡಿಗಳನ್ನು ತೆರವುಗೊಳಿಸಬೇಕಿರುವ ಪುರಸಭೆ ಮಾತ್ರ ಮೌನಕ್ಕೆ ಜಾರಿದೆ.

* ಹೇಳಿಕೆ-1

೨೬ ವರ್ಷದ ಹಿಂದೆ ೧೦ ಸಾವಿರ ರು. ಪಡೆದು ವಂಚಿಸಿರುವ ಸ್ಥಳೀಯ ಪುರಸಭೆಯ ವಿರುದ್ಧ ಪೌರಾಡಳಿತ ಸಚಿವರು ಕ್ರಮ ಕೈಗೊಳ್ಳುವ ಮೂಲಕ ನಮಗೆ ನ್ಯಾಯ ಒದಗಿಸಬೇಕು.

ಶ್ರೀನಿವಾಸ್ ಮೂರ್ತಿ, ಅಧ್ಯಕ್ಷರು ಗೂಡಂಗಡಿ ಮಾಲೀಕರ ಸಂಘ * ಹೇಳಿಕೆ-2

ಬದಲಿ ಅಂಗಡಿ ನೀಡುವ ಬಗ್ಗೆ ನನಗೆ ತಿಳಿದಿಲ್ಲ. ಪುರಸಭೆ ಆಡಳಿತ ವರ್ತಕರಿಂದ ೧೦ ಸಾವಿರ ಪಡೆದು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಕಡತಗಳ ಪರಿಶೀಲನೆಯಾಗಬೇಕಿದೆ.

ರಮೇಶ್, ಮುಖ್ಯಾಧಿಕಾರಿ, ಸಕಲೇಶಪುರ ಪುರಸಭೆ