ಅಂಗನವಾಡಿ ನೌಕರರ ಸಂಭಾವನೆ ಹೆಚ್ಚಾಗಬೇಕು: ಡಿ.ಎ.ವಿಜಯಭಾಸ್ಕರ್ ಆಗ್ರಹ

| Published : Jul 22 2024, 01:21 AM IST

ಸಾರಾಂಶ

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಈಗ ನೀಡುತ್ತಿರುವ ಗೌರವಧನದಿಂದ ಗೌರವವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ವೇತನ ಕಾಯಿದೆ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಹಲವಾರು ಕಾಯಿದೆಗಳಿದ್ದರೂ ಈತನಕ ಸಫಲವಾಗಿಲ್ಲ. ಹೀಗಾಗಿ, ದುಡಿಯುವ ವರ್ಗಗಳ ನ್ಯಾಯಪರವಾದ ನೀತಿಯನ್ನು ರೂಪಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಅಂಗನವಾಡಿ ನೌಕರರಿಗೆ ಗೌರವ ಹೆಚ್ಚಾಗಿದಿಯೇ ಹೊರತು ಗೌರವ ಧನ ಹೆಚ್ಚಾಗಿಲ್ಲ. ಹೀಗಾಗಿ, ಅಂಗನವಾಡಿ ನೌಕರರ ಸಂಬಳವನ್ನು ಸರ್ಕಾರ ಹೆಚ್ಚಿಸಬೇಕು ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ್ ಆಗ್ರಹಿಸಿದರು.

ನಗರದ ಶ್ರೀರಾಮ ಸೇವಾ ಅರಸು ಮಂಡಳಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ ಅಂತರ್ಗತ) ಮೈಸೂರು ಜಿಲ್ಲಾ ಸಮಿತಿಯು ಭಾನುವಾರ ಆಯೋಜಿಸಿದ್ದ ಜಿಲ್ಲಾ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಈಗ ನೀಡುತ್ತಿರುವ ಗೌರವಧನದಿಂದ ಗೌರವವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ವೇತನ ಕಾಯಿದೆ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಹಲವಾರು ಕಾಯಿದೆಗಳಿದ್ದರೂ ಈತನಕ ಸಫಲವಾಗಿಲ್ಲ. ಹೀಗಾಗಿ, ದುಡಿಯುವ ವರ್ಗಗಳ ನ್ಯಾಯಪರವಾದ ನೀತಿಯನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನಿಂತು ಕಾಂಗ್ರೆಸ್ ಬೆಂಬಲಿಸುವ ನಿರ್ಣಯ ಮಾಡಿ ಬೆಂಬಲ ಕೊಡಲಾಯಿತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮೌನಕ್ಕೆ ಶರಣಾಗಿದೆ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾಸರಿನಂತೆ ವೇತನ ಹೆಚ್ಚಿಸಿದ ಸರ್ಕಾರವು, ಅಂಗನವಾಡಿ ನೌಕರರ ವೇತನ ಬಗ್ಗೆ ‌ತುಟಿ ಬಿಚ್ಚುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕರಿಗಾಗಿ 6ನೇ ಗ್ಯಾರಂಟಿಯನ್ನು ನೀಡಿದ್ದನ್ನು ರಾಜ್ಯ ಸರ್ಕಾರವು ಜಾರಿಗೊಳಿಸಬೇಕು. ಇಲ್ಲದಿದ್ದರೇ ಬಿಸಿಯೂಟ, ಕಟ್ಟಡ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರನ್ನು ಒಗ್ಗೂಡಿಸಿ ಹೋರಾಟ ಮೂಲಕ ಸರ್ಕಾರದ ಕಣ್ತೆರೆದು ನೋಡುವಂತೆ ಮಾಡಬೇಕಿದೆ ಎಂದು ಅವರು ತಿಳಿಸಿದರು.

ಅಂಗನವಾಡಿ ಸಂಘಟನೆಯ ರಾಜ್ಯಾಧ್ಯಕ್ಷ ಬಿ. ಅಮ್ಜದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ, ಜಿಲ್ಲಾ ಸಂಚಾಲಕ ಜಗನ್ನಾಥ್, ಎಐಟಿಯುಸಿ ಜಿಲ್ಲಾಧ್ಯಕ್ಷ ಎನ್.ಕೆ. ದೇವದಾಸ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸೋಮರಾಜೇ ಅರಸ್, ಜಿಲ್ಲಾ ಉಪ ಪ್ರಧಾನ ಕಾರ್ಯದರ್ಶಿ ಎಚ್.ಬಿ. ರಾಮಕೃಷ್ಣ, ಫೆಡರೇಷನ್ ಪದಾಧಿಕಾರಿಗಳಾದ ಪಿ.ಎಂ. ಸರೋಜಮ್ಮ, ಕಾಂತಮ್ಮ, ಭಾಗ್ಯ, ವೈ. ಮಹದೇವಮ್ಮ, ಪುಟ್ಟಮ್ಮ, ಗಿರಿಜಾ, ಸುಮಾ, ಚಂದ್ರಮ್ಮ, ಭುವನೇಶ್ವರಿ, ಚಂದ್ರಿಕಾ ಮೊದಲಾದವರು ಇದ್ದರು.

ಬೃಹತ್ ಮೆರವಣಿಗೆ:

ಇದಕ್ಕೂ ಮುನ್ನ ಕಾಡಾ ಕಚೇರಿ ಆವರಣದಿಂದ ಶ್ರೀರಾಮ ಸೇವಾ ಅರಸು ಮಂಡಳಿ ಸಭಾಂಗಣದವರೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನೂರಾರು ಮಂದಿ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದರು.

ಕಾಡಾ ಬಳಿಯಿಂದ ಆರಂಭವಾದ ಮೆರವಣಿಗೆಯು ಸಯ್ಯಾಜಿರಾವ್ ರಸ್ತೆ, ಅಗ್ರಹಾರ ವೃತ್ತ, ಸಿದ್ದಪ್ಪ ಚೌಕ, ನಂಜುಮಳಿಗೆ ವೃತ್ತ, ಮಾನಂದವಾಡಿ ರಸ್ತೆಯ ಮೂಲಕ ಶ್ರೀರಾಮ ಸೇವಾ ಅರಸು ಮಂಡಳಿ ಆವರಣಕ್ಕೆ ತಲುಪಿತು.

ಹಕ್ಕೊತ್ತಾಯಗಳು:

ಐಸಿಡಿಎಸ್ ಯೋಜನೆಯನ್ನು ಬಲ ಪಡಿಸಬೇಕು. ನಿವೃತ್ತಿ ಹೊಂದಿದ ಎಲ್ಲಾ ಅಂಗನವಾಡಿ ನೌಕರರಿಗೂ 1972ರ ಗ್ರಾಜ್ಯುಟಿ ಕಾಯ್ದೆಯ ಪ್ರಕಾರ ಗ್ರಾಜ್ಯುಟಿಯನ್ನು ನೀಡಬೇಕು. ಎಲ್ಲಾ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಕೊಡಬೇಕು. ಅಂಗನವಾಡಿ ಕೇಂದ್ರದಿಂದ ಮಗು 1ನೇ ತರಗತಿಗೆ ಹೋಗಲು ವರ್ಗಾವಣೆ ಪತ್ರ ನೀಡಲು ಸರ್ಕಾರ ಕ್ರಮ ವಹಿಸಬೇಕು. ನಿವೃತ್ತಿ ಹೊಂದಿದವರಿಗೆ ಪಿಂಚಣಿ ಜಾರಿಗೊಳಿಸಬೇಕು.