ಇಂದಿನಿಂದಲೇ ಮೈಷುಗರ್ ಪ್ರೌಢಶಾಲಾ ಶಿಕ್ಷಕರ ವೇತನ ಪಾವತಿ

| Published : Nov 03 2025, 01:30 AM IST

ಸಾರಾಂಶ

ಮೈಷುಗರ್ ಪ್ರೌಢಶಾಲಾ ಶಿಕ್ಷಕರ ವೇತನಕ್ಕೆ ಸಂಬಂಧಿಸಿದಂತೆ ಕಳೆದ ಐದು ತಿಂಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹಗ್ಗ-ಜಗ್ಗಾಟಕ್ಕೆ ಕೊನೆಗೂ ಅಂತಿಮ ತೆರೆ ಬಿದ್ದಿದೆ. ಕೇಂದ್ರ ಸಚಿವರು ಹಣ ಬಿಡುಗಡೆ ಮಾಡುವ ಮುನ್ನವೇ ಕಾಂಗ್ರೆಸ್ ವೇತನ ಪಾವತಿಗೆ ಕ್ರಮ ವಹಿಸಿ ಅದರಿಂದ ಉಂಟಾಗಬಹುದಾಗಿದ್ದ ಮುಜುಗರದಿಂದ ತಪ್ಪಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಪ್ರೌಢಶಾಲಾ ಶಿಕ್ಷಕರ ವೇತನಕ್ಕೆ ಸಂಬಂಧಿಸಿದಂತೆ ಕಳೆದ ಐದು ತಿಂಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹಗ್ಗ-ಜಗ್ಗಾಟಕ್ಕೆ ಕೊನೆಗೂ ಅಂತಿಮ ತೆರೆ ಬಿದ್ದಿದೆ. ಶಿಕ್ಷಕರ ಹತ್ತು ತಿಂಗಳ ವೇತನ ಪಾವತಿಸುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದ್ದು, ಇದರಿಂದ ಸಂಸದ ಹಾಗೂ ಕೇಂದ್ರ ಸಚಿವರು ಹಣ ಬಿಡುಗಡೆ ಮಾಡುವ ಮುನ್ನವೇ ಕಾಂಗ್ರೆಸ್ ವೇತನ ಪಾವತಿಗೆ ಕ್ರಮ ವಹಿಸಿ ಅದರಿಂದ ಉಂಟಾಗಬಹುದಾಗಿದ್ದ ಮುಜುಗರದಿಂದ ತಪ್ಪಿಸಿಕೊಂಡಿದೆ.

ವೇತನ ಪಾವತಿಸದೆ ಕಳೆದ ಜುಲೈನಿಂದ ಮೊಂಡು ಹಠ ಹಿಡಿದಿದ್ದ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಇದೀಗ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ಬಳಿಕ ಮೆತ್ತಗಾಗಿದ್ದಾರೆ. ಶಿಕ್ಷಕರಿಗೆ ನೀಡಬೇಕಾದ ಹತ್ತು ತಿಂಗಳ ವೇತನವನ್ನು ಹಂತ ಹಂತವಾಗಿ ಪಾವತಿಸುವುದಾಗಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಪ್ರೌಢಶಾಲಾ ಶಿಕ್ಷಕರ ವೇತನಕ್ಕೆ ಪ್ರತಿ ತಿಂಗಳು ೪೮ ಸಾವಿರ ರು. ಖರ್ಚಾಗುತ್ತಿದ್ದು, ಹತ್ತು ತಿಂಗಳಿಗೆ ೪.೮೦ ಲಕ್ಷ ರು.ಗಳಾಗಿದೆ. ಈ ಹಣಕ್ಕಾಗಿ ಕಳೆದ ಐದು ತಿಂಗಳಿಂದ ಶಿಕ್ಷಕರ ಪರದಾಟ ಹೇಳತೀರದಾಗಿತ್ತು. ಮೈಷುಗರ್ ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಹಣ ಬಿಡುಗಡೆಗೊಳಿಸದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಳಿಗೆ ಹೋಗುವಂತೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಕಟುವಾಗಿ ಹೇಳಿದ್ದರು.

ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿ ಗುತ್ತಿಗೆಗೆ ನೀಡಲು ಸಜ್ಜಾಗಿದ್ದ ಕಾಂಗ್ರೆಸ್ ಪ್ರಯತ್ನಕ್ಕೆ ಜೆಡಿಎಸ್ ಅಡ್ಡಗಾಲಾಗಿದ್ದೇ ಈ ಎಲ್ಲಾ ಬೆಳವಣಿಗೆಗಳಿಗೆ ಮೂಲ ಕಾರಣವಾಗಿತ್ತು. ಕಾರ್ಖಾನೆಯಿಂದ ಶಾಲೆಯನ್ನು ನಡೆಸಲು ಸಾಧ್ಯವಾಗದ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಯನ್ನು ಖಾಸಗಿಗುತ್ತಿಗೆ ನೀಡುವುದಕ್ಕೆ ನಿರ್ಧರಿಸಿ ಕಾಂಗ್ರೆಸ್ ನಾಯಕರು ಪ್ರಕ್ರಿಯೆ ಮುಂದುವರೆಸಿದ್ದರು.

ಕಳೆದ ಜುಲೈ ತಿಂಗಳಲ್ಲಿ ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವಕ್ಕೆ ಆಗಮಿಸಿದ್ದ ಎಚ್.ಡಿ.ಕುಮಾರಸ್ವಾಮಿ ಶಾಲೆಯನ್ನು ಖಾಸಗಿ ಗುತ್ತಿಗೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಜೊತೆಗೆ ಶಾಲೆಯ ಪುನಶ್ಚೇತನಕ್ಕೆ ೫ ಕೋಟಿ ರು. ಹಣ ನೀಡುವುದಾಗಿ ಭರವಸೆ ನೀಡಿದರು. ಅಂದು ಕುಮಾರಸ್ವಾಮಿ ಹೇಳಿದ ಮಾತು ಇಂದಿಗೂ ಮಾತಾಗಷ್ಟೇ ಉಳಿದುಕೊಂಡಿದೆ. ಖಾಸಗಿ ಗುತ್ತಿಗೆ ನೀಡುವುದಕ್ಕೆ ತಡೆಯೊಡ್ಡಿದ್ದರಿಂದ ಆಕ್ರೋಶಗೊಂಡ ಅಧ್ಯಕ್ಷ ಸಿ.ಡಿ.ಗಂಗಾಧರ್ ವೇತನ ಪಾವತಿ ತಡೆಹಿಡಿದರು. ಶಾಲೆಯ ಪುನಶ್ಚೇತನಕ್ಕೆ ಹಣ ಬಿಡುಗಡೆ ಮಾಡುವಂತೆ ಕುಮಾರಸ್ವಾಮಿ ಅವರಿಗೂ ಪತ್ರ ಬರೆದರು.

ತರಕಾರಿ ಮಾರುಕಟ್ಟೆ ಉದ್ಘಾಟನೆಗೆ ಆಗಮಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಶೀಘ್ರವೇ ಮೈಷುಗರ್ ಪ್ರೌಢಶಾಲಾ ಶಿಕ್ಷಕರ ವೇತನಕ್ಕಾಗಿ ೧೦ ಕೋಟಿ ರು. ಹಣ ನೀಡುವುದಾಗಿ ಘೋಷಿಸಿದರು. ಅದೂ ಕೂಡ ಈವರೆಗೆ ಬಿಡುಗಡೆಯಾಗಿಲ್ಲ. ಪರಿಣಾಮ ಕಾಂಗ್ರೆಸ್-ಜೆಡಿಎಸ್‌ನವರ ತಿಕ್ಕಾಟದಲ್ಲಿ ವೇತನವಿಲ್ಲದೆ ಶಿಕ್ಷಕರ ಪಾಡು ಹೇಳತೀರದಾಗಿತ್ತು.

ಇದರ ನಡುವೆಯೇ ಶಿಕ್ಷಕರ ಬಾಕಿ ವೇತನ ಪಾವತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡುವ ಮೂಲಕ ಶಿಕ್ಷಕರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಸೋಮವಾರದಿಂದ ವೇತನ ಬಿಡುಗಡೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆದರೆ, ಕುಮಾರಸ್ವಾಮಿ ಘೋಷಿಸಿರುವ ೧೦ ಕೋಟಿ ರು. ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.ಸಚಿವರ ಸೂಚನೆಯಂತೆ ಸೋಮವಾರದಿಂದ ವೇತನ ಪಾವತಿಗೆ ಕ್ರಮ ವಹಿಸಲಾಗುವುದು. ಶಿಕ್ಷಕರ ಹತ್ತು ತಿಂಗಳ ವೇತನ ಬಾಕಿ ಇದೆ. ತಿಂಗಳಿಗೆ 48 ಸಾವಿರ ರು.ಗಳಂತೆ ಪಾವತಿ ಮಾಡಬೇಕಿದೆ. ಏಕಕಾಲಕ್ಕೆ ಅಷ್ಟು ಹಣ ಪಾವತಿಸಲಾಗದು. ಹಂತ ಹಂತವಾಗಿ ವೇತನ ಪಾವತಿಸುತ್ತೇವೆ. ವೇತನವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದ ಶಿಕ್ಷಕರಿಗೆ ಮಾನವೀಯತೆ ದೃಷ್ಟಿಯಿಂದ ಕ್ರಮ ವಹಿಸಲಾಗಿದೆ.

- ಸಿ.ಡಿ.ಗಂಗಾಧರ್‌, ಅಧ್ಯಕ್ಷರು, ಮೈಷುಗರ್‌ ಕಾರ್ಖಾನೆ