ಸಾರಾಂಶ
ಬೆಂಗಳೂರು : ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಯೋಜನೆಯಡಿ ಕಾರ್ಯನಿರ್ವಹಿಸುವ ವೈದ್ಯರ ಹಾಗೂ ಶುಶ್ರೂಷಕರ ವೇತನವನ್ನು ಆರೋಗ್ಯ ಇಲಾಖೆ ಪರಿಷ್ಕರಿಸಿದ್ದು, ಈ ಪರಿಷ್ಕರಣೆ ಹೊಸ ನೇಮಕಾತಿಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಎನ್‌ಎಚ್‌ಎಂ ಯೋಜನೆಯಡಿ ಮಂಜೂರಾಗಿದ್ದ 899 ತಜ್ಞ ವೈದ್ಯರ ಹುದ್ದೆಗಳಲ್ಲಿ 305 ಹುದ್ದೆಗಳು, 1,398 ಎಂಬಿಬಿಎಸ್ ವೈದ್ಯರ ಹುದ್ದೆಗಳಲ್ಲಿ 579 ಹುದ್ದೆಗಳು, 9041 ಶುಶ್ರೂಷಕರ ಹುದ್ದೆಗಳಲ್ಲಿ 936 ಹುದ್ದೆಗಳು ಖಾಲಿ ಉಳಿದಿವೆ. ವೇತನ ಕಡಿಮೆ ಎಂಬ ಕಾರಣಕ್ಕೆ ಸೇವೆಗೆ ಯಾರೂ ಬರುತ್ತಿಲ್ಲ. ಹೀಗಾಗಿ ವೇತನ ಪರಿಷ್ಕರಿಸಿ, ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಪ್ರಸ್ತುತ ತಜ್ಞ ವೈದ್ಯರ ವೇತನ 1.10 ಲಕ್ಷದಿಂದ 1.30 ಲಕ್ಷವಿದ್ದು, ಅದನ್ನು 1.40 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಎಂಬಿಬಿಎಸ್ ವೈದ್ಯರಿಗಿರುವ 46,895-50,000 ಗಳಷ್ಟಿದ್ದ ವೇತನವನ್ನು 60,000 ರು.ಗಳಿಗೆ ಏರಿಕೆ ಮಾಡಲಾಗಿದೆ. ಶುಶ್ರೂಷಕರ ವೇತನ ಕನಿಷ್ಠ 14,186 ಹಾಗೂ ಗರಿಷ್ಠ 18,774 ರು.ಗಳಿಂದ 22,000 ರು.ಗೆ ಹೆಚ್ಚಳ ಮಾಡಲಾಗಿದೆ. ಅನುಭವಿ ತಜ್ಞರು ಆಯ್ಕೆಯಾದಲ್ಲಿ ಪ್ರತಿ ವರ್ಷ ಶೇ. 2.5 ರಷ್ಟು ಹೆಚ್ಚುವರಿ ವೇತನ ನೀಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಹೊಸ ನೇಮಕಾತಿಗೆ ಮಾತ್ರ ಅನ್ವಯ:
ಇದು ಎಲ್ಲ ಎನ್‌ಎಚ್‌ಎಂ ನೌಕರರಿಗೂ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಈ ಪರಿಷ್ಕೃತ ವೇತನ ಹೊಸ ನೇಮಕಾತಿಗೆ ಮಾತ್ರವೇ ಅನ್ವಯ ಆಗುವುದರಿಂದ ಹಾಲಿ ಸೇವೆ ಸಲ್ಲಿಸುತ್ತಿರುವವರು ಹೆಚ್ಚಿನ ವೇತನಕ್ಕಾಗಿ ರಾಜೀನಾಮೆ ಸಲ್ಲಿಸಿ, ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅವರಿಗೆ ಸೇವಾ ಅನುಭವದ ಆಧಾರದ ಮೇಲೆ (ವರ್ಷಕ್ಕೆ 2 ಅಂಕಗಳು) ಆದ್ಯತೆ ನೀಡಲಾಗುವುದು. ಅವರಿಗೆ ಕೆಲಸ ಸಿಗಲೂಬಹುದು, ಸಿಗದೆಯೂ ಇರಬಹುದು ಎಂದು ಹೇಳಿದರು.
ಇದು ತಾರತಮ್ಯ ಅಲ್ಲವೇ ಎಂಬ ಪ್ರಶ್ನೆಗೆ, ಕೇಂದ್ರದ ನಿಯಮಾವಳಿ ಇರುವುದೇ ಹಾಗೆ. ನಾವು ಅವರಿಗೂ ಪ್ರತಿ ವರ್ಷ ಶೇ.5 ರಷ್ಟು ವೇತನ ಪರಿಷ್ಕರಣೆ ಮಾಡುತ್ತೇವೆ. ಇದೀಗ ಶೇ.25ಕ್ಕಿಂತ ಹೆಚ್ಚಾಗುತ್ತದೆ. ಹೀಗಾಗಿ ಕೇಂದ್ರದ ನಿಯಮಾವಳಿ ಪಾಲಿಸಬೇಕು.
ಅನಗತ್ಯ ಹುದ್ದೆ ರದ್ದು, ನಾವು
ಉದ್ಯೋಗದಾತ ಸಂಸ್ಥೆಯಲ್ಲ
ಅನೇಕ ಕಡೆ ಹುದ್ದೆ ಕಡಿತಗೊಳಿಸಿ ಕೆಲಸದಿಂದ ತೆಗೆಯಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಅನೇಕ ಕಡೆ ಅಗತ್ಯವಿಲ್ಲದಿದ್ದರೂ ಹುದ್ದೆಗಳನ್ನು ಸೃಜಿಸಲಾಗಿದೆ. ಆ ರೀತಿ ಅನಗತ್ಯವಾಗಿ ನಿಯೋಜಿಸಿರುವ ಸಿಬ್ಬಂದಿಯನ್ನು ಸೂಕ್ತ ಕಡೆಗೆ ವರ್ಗಾವಣೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ. ಅದಕ್ಕಾಗಿ ಅವರ ಕಾರ್ಯನಿರ್ವಹಣೆಯ ಮೌಲ್ಯಮಾಪನ ಮಾಡುತ್ತಿದ್ದೇವೆ. ಅನಗತ್ಯವಾಗಿರುವ ಹುದ್ದೆಗಳನ್ನು ರದ್ದುಗೊಳಿಸುತ್ತೇವೆ. ಯಾಕೆಂದರೆ ನಾವು ಉದ್ಯೋಗ ನೀಡುವ ಸಂಸ್ಥೆಯಲ್ಲ ಎಂದು ಸ್ಪಷ್ಟಪಡಿಸಿದರು.
ರಕ್ತನಿಧಿ ಕೇಂದ್ರಗಳಲ್ಲಿ ವ್ಯಾಪಕ ದುರ್ಬಳಕೆ ಪತ್ತೆ: ಗುಂಡೂರಾವ್
ರಾಜ್ಯದ ಹಲವು ಕಡೆ ರಕ್ತನಿಧಿ ಕೇಂದ್ರಗಳಲ್ಲಿ ವ್ಯಾಪಕ ದುರ್ಬಳಕೆ ಆಗಿದೆ. ಈವರೆಗೆ ಯಾರೂ ರಕ್ತನಿಧಿ ಕೇಂದ್ರಗಳ ತಪಾಸಣೆ ಮಾಡಿರಲಿಲ್ಲ. ನಾವು ಮೊದಲ ಬಾರಿಗೆ ತಪಾಸಣೆ ನಡೆಸಿ ಎರಡು ಕಡೆ ಶೋಕಾಸ್ ನೋಟಿಸ್ ನೀಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಲೋಪದೋಷ ಪತ್ತೆಯಾಗಿರುವ ಕಡೆ ನೋಟಿಸ್ ನೀಡಿ ವಿವರಣೆ ಕೇಳಿದ್ದೇವೆ. ಬಳಿಕ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಆಯುಷ್ ಇಲಾಖೆಯಲ್ಲಿ ಔಷಧ ಖರೀದಿ ಅಕ್ರಮದ ಬಗ್ಗೆ ಮಾತನಾಡಿ, ‘ನಾವೇ ಅಕ್ರಮವನ್ನು ಪತ್ತೆ ಹಚ್ಚಿ ಇಬ್ಬರನ್ನು ಅಮಾನತು ಮಾಡಿದ್ದೇವೆ. ಇದನ್ನು ಬೇರೆ ಯಾರೋ ನಮಗೆ ಹೇಳಿರುವುದಲ್ಲ. ನಾವೇ ಅಕ್ರಮವನ್ನು ಪತ್ತೆ ಮಾಡಿರುವುದು. ಇದು ನಾವು ಅಕ್ರಮಗಳನ್ನು ಸಹಿಸುವುದಿಲ್ಲ ಎಂಬುದಕ್ಕೆ ಸಾಕ್ಷಿ ಎಂದರು.