ಸತ್ತ ವ್ಯಕ್ತಿ ಹೆಸರಿನಲ್ಲಿನ 13 ಎಕರೆ ಜಮೀನು ಮಾರಾಟ

| Published : Jan 27 2025, 12:47 AM IST

ಸಾರಾಂಶ

ದಶಕಗಳ ಹಿಂದೆ ಮೃತಪಟ್ಟ ವ್ಯಕ್ತಿ ಜೀವಂತ ಇದ್ದಾನೆ ಎಂದು ಬಿಂಬಿಸಿ ಅವನ ಹೆಸರಿನಲ್ಲಿದ್ದ ಸುಮಾರು 13 ಎಕರೆ ಜಮೀನು ಮಾರಾಟ ಮಾಡಿದ ಪ್ರಕರಣ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡ

ದಶಕಗಳ ಹಿಂದೆ ಮೃತಪಟ್ಟ ವ್ಯಕ್ತಿ ಜೀವಂತ ಇದ್ದಾನೆ ಎಂದು ಬಿಂಬಿಸಿ ಅವನ ಹೆಸರಿನಲ್ಲಿದ್ದ ಸುಮಾರು 13 ಎಕರೆ ಜಮೀನು ಮಾರಾಟ ಮಾಡಿದ ಪ್ರಕರಣ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಶಿವಪ್ಪ ರಾಯಪ್ಪ ಚಿನಿವಾರ ಎಂಬುವವರು 1980ರ ಜನವರಿ 30ರಂದು ಮೃತಪಟ್ಟಿದ್ದಾರೆ. ಆದರೆ, ಈತ ಬದುಕಿದ್ದಾನೆಂದು ನಕಲಿ ವ್ಯಕ್ತಿ, ನಕಲಿ ದಾಖಲೆ ಸೃಷ್ಟಿಸಿ ಈತನಿಗೆ ಸೇರಿದ ಸುಮಾರು 13 ಎಕರೆ 30 ಗುಂಟೆ ಜಮೀನನ್ನು ಮಹಾರಾಷ್ಟ್ರದ ವ್ಯಕ್ತಿಗೆ ಮಾರಾಟ ಮಾಡಲಾಗಿದ್ದು, ಶಿವಪ್ಪ ಚಿನಿವಾರ ಅವರ ಮೊಮ್ಮಗ ನ್ಯಾಯ ಕೊಡಿಸುವಂತೆ ಅಧಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಘಟನೆ ವಿವರ:

ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅನಂತಪೂರ ಗ್ರಾಮದ ಶಿವಪ್ಪ ರಾಯಪ್ಪ ಚಿನಿವಾರ 1980ರಲ್ಲಿ ಮೃತಪಟ್ಟಿದ್ದರು. ಪತ್ನಿ 1951ರಲ್ಲೇ ಸಾವಿಗೀಡಾಗಿದ್ದರೆ, ಮಗ ವಿಶ್ವನಾಥ 1984ರಲ್ಲಿ ನಿಧನರಾಗಿದ್ದ. ಮೃತ ಶಿವಪ್ಪನಿಗೆ 13.30 ಎಕರೆ ಜಮೀನಿದ್ದು, ಹಣದಾಸೆಗೆ ಮಧ್ಯವರ್ತಿಗಳು, ಕಂದಾಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಶಿವಪ್ಪ ಬದುಕಿದ್ದು, ಇವರೇ ಶಿವಪ್ಪ ಎಂದು ಗೂರಗಾಂವ್ ಗ್ರಾಮದ ವ್ಯಕ್ತಿಯನ್ನು ತೋರಿಸಿ, ನಕಲಿ ದಾಖಲೆ ಸೃಷ್ಟಿಸಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವ ತಾಲೂಕಿನ ಡೊಂಗರಸೋನೆ ಗ್ರಾಮದ ಅಶೋಕ ರಾಣಪ್ಪ ಮಾನೆ ಎಂಬವರಿಗೆ ಮಾರಾಟ ಮಾಡಿದ್ದಾರೆ.

ಖರೀದಿ ಪತ್ರಕ್ಕೆ ಡೊಂಗರಸೋನೆ ಗ್ರಾಮದ ಸಂತೋಷ ಪ್ರತಾಪ ಜಂತ್ರೆ ಮತ್ತು ಪಂಕಜ ರಾಜಾರಾಮ್ ಪಾಟೀಲ ಅವರನ್ನು ಸಾಕ್ಷಿದಾರರ ಸಹಿಯೊಂದಿಗೆ ಅಥಣಿಯ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಖರೀದಿ ನೋಂದಣಿ ಮಾಡಿಸಲಾಗಿದೆ.

ಕಕಮರಿ ಗ್ರಾಮದ ಕಲ್ಮೇಶ ಗಿರಿಮಲ್ಲಪ್ಪ ಬಾಳಿಕಾಯಿ ದಸ್ತು ಬರಹಗಾರ ಮತ್ತು ಕೆಲ ಏಜಂಟರು ಶಾಮಿಲಾಗಿ ಬೆಲೆಬಾಳುವ ನಮ್ಮ ಆಸ್ತಿಯನ್ನು ಕಾನೂನು ಬಾಹಿರಾವಾಗಿ ಮಾರಾಟ ಮಾಡಿದ್ದಾರೆ ಎಂದು ದಿ.ಶಿವಪ್ಪ ಚಿನಿವಾರ ಅವರ ಮೊಮ್ಮಗ ಸಂತೋಷ ವಿಶ್ವನಾಥ ಚಿನಿವಾರ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಥಣಿ ಪೊಲೀಸರು ಐಪಿಸಿ ಸೆಕ್ಸೆನ್ 419, 420, 465, 471, ಮತ್ತು 468 ಅಡಿ ಐವರ ಮೇಲೆ ಎಫ್ ಐ.ಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ರಾಷ್ಟ್ರಪತಿ, ಪ್ರಧಾನಿಗೂ ದೂರು: ಆಸ್ತಿ ಕಬಳಿಸಿರುವ ದುಷ್ಕರ್ಮಿಗಳ ವಿರುದ್ಧ ಸಂತೋಷ ಚಿನಿವಾರ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಜತೆಗೆ ನ್ಯಾಯ ಒದಗಿಸಿಕೊಡುವಂತೆ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರಿಗೆ, ಮುಖ್ಯಮಂತ್ರಿ, ಕಂದಾಯ ಸಚಿವರು, ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದು, ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.