ರಾಜ್ಯದಲ್ಲಿ ಗೊಬ್ಬರ ಕಾಳಸಂತೇಲಿ ಮಾರಾಟ: ಬಿವೈವಿ

| Published : Jul 30 2025, 12:46 AM IST

ರಾಜ್ಯದಲ್ಲಿ ಗೊಬ್ಬರ ಕಾಳಸಂತೇಲಿ ಮಾರಾಟ: ಬಿವೈವಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ರಸಗೊಬ್ಬರ ರೈತರಿಗೆ ಹಂಚಿಕೆ ಮಾಡದೆ ದಲ್ಲಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ, ವಿಜಯೇಂದ್ರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ರಸಗೊಬ್ಬರ ರೈತರಿಗೆ ಹಂಚಿಕೆ ಮಾಡದೆ ದಲ್ಲಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ, ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರ ಗೊಬ್ಬರಕ್ಕಾಗಿ ದಿನ ಬೆಳಗ್ಗೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಸೃಷ್ಟಿಸಿ ರೈತರನ್ನು ಬೀದಿಪಾಲು ಮಾಡಿದೆ. ರೈತರ ಕಣ್ಣಲ್ಲಿ ನೀರು ತರಿಸುವ ಯಾವುದೇ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರೈತ ಮೋರ್ಚಾ ನೇತೃತ್ವದ ಪ್ರತಿಭಟನೆ ಅಂಗವಾಗಿ ಮಂಗಳವಾರ ನಗರದ ಬಿಜಿಎಸ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಜಿಲ್ಲಾಧಿಕಾರಿ ಕಚೇರಿ ಬಳಿ ಮಾತನಾಡಿದ ವಿಜಯೇಂದ್ರ, ಈ ಬಾರಿ ಮುಂಗಾರು ಉತ್ತಮವಾಗಿದೆ ಎಂದು ಹವಾಮಾನ ಇಲಾಖೆ ಮೂರು ತಿಂಗಳ ಮೊದಲೇ ಮುನ್ಸೂಚನೆ ನೀಡಿದೆ. ರೈತರಿಗೆ ಗೊಬ್ಬರದ ಬೇಡಿಕೆ ಹೆಚ್ಚಾಗುತ್ತದೆ ಎಂದು ಪೂರಕ ಪೂರ್ವ ಸಿದ್ಧತೆ ಮಾಡಿಕೊಂಡು ಗೊಬ್ಬರ ದಾಸ್ತಾನು ಮಾಡದೆ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿ ಅವರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿಗೆ ತಂದಿದೆ ಎಂದು ದೂರಿದರು.

ರಾಜ್ಯಕ್ಕೆ ಯೂರಿಯಾ ಗೊಬ್ಬರವು 6.30 ಲಕ್ಷ ಟನ್‌ ಅವಶ್ಯಕತೆ ಇದ್ದು, ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚಾಗಿ ಕರ್ನಾಟಕಕ್ಕೆ ನೀಡಿದೆ. ಈ ಗೊಬ್ಬರವನ್ನು ರೈತರಿಗೆ ನೀಡದೆ ದಲ್ಲಾಳಿಗಳಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇರುವ ಕಡೆ ದಲ್ಲಾಳಿಗಳು, ಕಾಳಸಂತೆಕೋರರು ತುಂಬಿರುತ್ತಾರೆ. ಆದರೆ ರೈತರು ದುಪ್ಪಟ್ಟು ಹಣ ಕೊಟ್ಟು ಗೊಬ್ಬರ ಕೊಳ್ಳುವಂತಾಗಿದೆ ಎಂದು ಆರೋಪಿಸಿದರು.

ಮಂಡ್ಯ, ಬೆಂಗಳೂರು ಬಿಟ್ಟು ಕೃಷಿ ಮಂತ್ರಿ ಜಿಲ್ಲೆಗಳ ಪ್ರವಾಸ ಮಾಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿಲ್ಲ. ಮುಖ್ಯಮಂತ್ರಿ ಕೂಡಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ರೈತರ ಸ್ಥಿತಿಗತಿ ಪರಿಶೀಲಿಸಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು.ರಾತ್ರಿಯಿಡೀ ಅಂಗಡಿ ಮುಂದೆ ಮಲಗಿದರೂ ಗೊಬ್ಬರ ಸಿಗ್ತಿಲ್ಲ:ಬೆಂಗಳೂರು: ಯೂರಿಯಾಕ್ಕಾಗಿ ಗೊಬ್ಬರ ಅಂಗಡಿಗಳಿಗೆ, ಕೃಷಿ ಸೊಸೈಟಿಗಳಿಗೆ ಸುತ್ತಿದರು. ರಾತ್ರಿಯಿಡೀ ನಿದ್ದೆಗೆಟ್ಟು ಅಂಗಡಿ ಮುಂದೆ ಮಲಗಿದ್ದರೂ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಕೊಪ್ಪಳ, ಹಾವೇರಿ, ಗದಗ, ವಿಜಯನಗರ ಜಿಲ್ಲೆಗಳಲ್ಲಿ ರೈತರ ಗೋಳು ಕೇಳುವವರಿಲ್ಲ. ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯಲ್ಲಿ ರೈತರು ರಾತ್ರಿಯಿಡೀ ಸೊಸೈಟಿಯ ಎದುರು ಮಲಗಿ ಮುಂಜಾನೆ ಗೊಬ್ಬರ ಪಡೆದರೆ, ಗದಗ ತಾಲೂಕಿನ ಮುಳಗುಂದದಲ್ಲಿ ರಾತ್ರಿ 3 ಗಂಟೆಗೇ ರೈತರು ಸರದಿಯಲ್ಲಿ ನಿಂತು ಮುಂಜಾನೆ ಗೊಬ್ಬರ ಪಡೆದರು. ವಿಜಯನಗರ, ಹಾವೇರಿ ಜಿಲ್ಲೆಗಳಲ್ಲೂ ಗೊಬ್ಬರ ಗಲಾಟೆ ಮುಂದುವರಿದಿದೆ.