ಸಾರಾಂಶ
- ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಮಳಿಗೆ ಸ್ಥಾಪನೆ: ದಿನೇಶ ಕೆ. ಶೆಟ್ಟಿ ಮಾಹಿತಿ
- - -- ಸರ್ಕಾರ-ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಪಾಲನೆ ಕಡ್ಡಾಯ
- ಜಿಲ್ಲಾ ಸಚಿವ ಮಲ್ಲಿಕಾರ್ಜುನ್ ಸೂಚನೆಯಂತೆ ಪಟಾಕಿಗಳ ಮಾರಾಟಕ್ಕೆ ವ್ಯವಸ್ಥೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ದೀಪಾವಳಿ ಹಬ್ಬದ ಹಿನ್ನೆಲೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಅ.30ರಿಂದ ನ.2 ರವರೆಗೆ ಪಟಾಕಿ ಮಾರಾಟಕ್ಕೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಪ್ರಕಾರ ಅಗತ್ಯ ಸುರಕ್ಷತಾ ಕ್ರಮ ಸೇರಿದಂತೆ ಸಕಲ ವ್ಯವಸ್ಥೆಗಳೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.ನಗರದ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಕಡೆ ಉತ್ತಮ ಮಳೆ, ಬೆಳೆಯಾಗಿದೆ. ಕೆರೆ- ಕಟ್ಟೆಗಳೆಲ್ಲಾ ತುಂಬಿವೆ. ದೀಪಾವಳಿ ಹಬ್ಬವು ಎಲ್ಲ ಕಡೆ ಅದ್ಧೂರಿಯಾಗಿ ಬೆಳಕಿನ ಹಬ್ಬವಾಗಿ ಆಚರಿಸಲ್ಪಡಲಿದೆ ಎಂದರು.
ಹೈಸ್ಕೂಲ್ ಮೈದಾನದಲ್ಲಿ 73ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರದ ಎಲ್ಲ ಕಾನೂನು, ನೀತಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಟಾಕಿ ವರ್ತಕರು ಪಾಲಿಸುವಂತೆ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸೂಚನೆಯಂತೆ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ದಿನೇಶ್ ಹೇಳಿದರು.ಪಟಾಕಿ ಮಾರಾಟಗಾರರು ವರ್ಷವಿಡೀ ಪಟಾಕಿ ಗೋದಾಮಿನಲ್ಲಿ ದಾಸ್ತಾನು ಮಾಡಿ, ತೆರಿಗೆ ಪಾವತಿಸುತ್ತ, ದೀಪಾವಳಿ ಹಬ್ಬದಲ್ಲಿ ಮಾರಾಟಕ್ಕೆ ಕಾಯುತ್ತಿರುತ್ತಾರೆ. ಹಬ್ಬದ ಸಂದರ್ಭ ಮಳೆ ಬಾರದಿರಲಿ. ಪಟಾಕಿ ಮಾರಾಟಗಾರರು, ಗ್ರಾಹಕರಿಗೂ ಅನುಕೂಲ ಆಗಲಿ. ಹೊಸೂರು ಇತರೆ ಕಡೆ ನಡೆದ ಪಟಾಕಿ ಬೆಂಕಿ ಅವಘಡಗಳ ಹಿನ್ನೆಲೆ ರಾಜ್ಯ ಸರ್ಕಾರ ಹಸಿರು ಪಟಾಕಿಗೆ ಮಾತ್ರವೇ ಅವಕಾಶ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಸಂಘದ ಅಧ್ಯಕ್ಷ ಪಿ.ಸಿ. ಶ್ರೀನಿವಾಸ ಭಟ್ ಮಾತನಾಡಿ, ಅ.30ರಿಂದ ನ.2 ರವರೆಗೆ ಪಟಾಕಿ ಮಾರಾಟ ನಡೆಯಲಿದೆ. ಕಳೆದ ವರ್ಷ 66 ಮಳಿಗೆ ಇದ್ದು, ಈ ಸಲ 73ಕ್ಕೂ ಹೆಚ್ಚು ಮಳಿಗೆಗಳಿವೆ. ಎಲ್ಲ ಮಳಿಗೆಗಳಲ್ಲಿ ಹಸಿರು ಪಟಾಕಿ ಮತ್ತು ಕ್ಯೂಆರ್ ಕೋಡ್ ಲಭ್ಯವಿರಲಿದೆ. ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಪಟಾಕಿ ಮಳಿಗೆ, ಮಾರಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರಿಗೆ ಸಂಘದಿಂದ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.ದೇಶದಲ್ಲಿ 1500ಕ್ಕೂ ಹೆಚ್ಚು ಪಟಾಕಿ ತಯಾರಿಕಾ ಘಟಕಗಳಿವೆ. ಒಂದೊಂದರಲ್ಲೂ ಒಂದೊಂದು ಬಗೆಯ ಪಟಾಕಿಗಳನ್ನು ತಯಾರಿಸಲಾಗುತ್ತದೆ. ಕೋವಿಡ್ ಹಾವಳಿ ನಂತರ ಹಸಿರು ಪಟಾಕಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಯಾವುದೇ ಕಡಿಮೆ ಹೊಗೆ ಮತ್ತು ಕಡಿಮೆ ಡೆಸಿಬಲ್‌ನಲ್ಲಿ ಧ್ವನಿ ಹೊರ ಹಾಕುತ್ತದೋ ಅದನ್ನು ಹಸಿರು ಪಟಾಕಿ ಎಂದು ಕರೆಯಲ್ಪಡುತ್ತದೆ. ಇದರಿಂದ ಪರಿಸರ ಮಾಲಿನ್ಯ, ಶಬ್ಧಮಾಲಿನ್ಯ ಆಗುವುದಿಲ್ಲ. ಆದ್ದರಿಂದ ಗ್ರಾಹಕರು ಹಸಿರು ಪಟಾಕಿಗಳನ್ನೇ ಖರೀದಿಸಬೇಕು ಎಂದು ಮನವಿ ಮಾಡಿದರು.
ಸಂಘದ ಡಿ.ಎಸ್.ಸಿದ್ದಪ್ಪ, ನಾಗಣ್ಣ, ಭವಾನಿ ರಾಘವೇಂದ್ರ, ಜಗನ್ನಾಥ, ರಮೇಶ, ಹಾಲೇಶಪ್ಪ, ಸಿದ್ದಣ್ಣ, ಶಿವು ಅಯ್ಯನಹಳ್ಳಿ, ಕಾರ್ತಿಕ್ ಮೋದಿ ಇತರರು ಇದ್ದರು.- - -
ಬಾಕ್ಸ್ * ತಾತ್ಕಾಲಿಕ ಸರ್ಕಾರಿ ಬಸ್ ನಿಲ್ದಾಣ ಶೀಘ್ರ ತೆರವು ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸರ್ಕಾರಿ ಬಸ್ ನಿಲ್ದಾಣವನ್ನು ಸಂಪೂರ್ಣ ತೆರವು ಮಾಡಲಾಗುವುದು. ಖಾಸಗಿ ಬಸ್ ನಿಲ್ದಾಣದ ಶೌಚಾಲಯ ಇತರೆ ಅಗತ್ಯ ಮಳಿಗೆಗಳನ್ನು ಇಟ್ಟುಕೊಂಡು, ತೆರವು ಕಾರ್ಯ ಕೈಗೊಳ್ಳಲಾಗುವುದು. ದೀಪಾವಳಿಯಂದು ರೈಲ್ವೆ ನಿಲ್ದಾಣ, ಪಾಲಿಕೆ ಸೇರಿದಂತೆ ರಸ್ತೆ ಬದಿ ಹೂವು, ಹಣ್ಣು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಇಲ್ಲಿ ಅವಕಾಶ ನೀಡಲಾಗುವುದು. ಅನಂತರ ಹೈಸ್ಕೂಲ್ ಮೈದಾನವನ್ನು ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ಜಿಲ್ಲಾ ಕ್ರೀಡಾಪಟುಗಳ ಸಂಧ ಅಧ್ಯಕ್ಷರೂ ಆಗಿರುವ ದಿನೇಶ ಕೆ. ಶೆಟ್ಟಿ ತಿಳಿಸಿದರು.- - - -28ಕೆಡಿವಿಜಿ7, 8:
ದಾವಣಗೆರೆಯಲ್ಲಿ ಸೋಮವಾರ ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.