ಹಾವೇರಿ ನಗರದ ಗುತ್ತಲ ರಸ್ತೆಯಲ್ಲಿರುವ ರೈಲ್ವೆ ಬ್ರಿಡ್ಜ್ ಬಳಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹3.17 ಲಕ್ಷ ಮೌಲ್ಯದ 7 ಕೆಜಿಗೂ ಹೆಚ್ಚು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಹಾವೇರಿ: ಹಾವೇರಿ ನಗರದ ಗುತ್ತಲ ರಸ್ತೆಯಲ್ಲಿರುವ ರೈಲ್ವೆ ಬ್ರಿಡ್ಜ್ ಬಳಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹3.17 ಲಕ್ಷ ಮೌಲ್ಯದ 7 ಕೆಜಿಗೂ ಹೆಚ್ಚು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಸವಣೂರಿನ ಅಂಬೇಡ್ಕರ ನಗರದ ನಿವಾಸಿಗಳಾದ ಲೋಹಿತ ಮುನಿಯಪ್ಪನವರ (23), ಮಹೇಶ ಮೈಲಮ್ಮನವರ (23) ಹಾಗೂ ಸವಣೂರಿನ ಹಾವಣಗಿ ಪ್ಲಾಟ್ ನಿವಾಸಿ ಮನೋಜ ಚಾರಿ (21) ಎಂಬುವವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳಿಂದ 3,17,400 ರು. ಕಿಮ್ಮತ್ತಿನ 7,935 ಗ್ರಾಂ ತೂಕದ ಗಾಂಜಾವನ್ನು ಹಾಗೂ 3,370 ರು. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.ಎಸ್‌ಪಿ ಯಶೋದಾ ವಂಟಗೋಡಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್‌ಪಿ ಎಲ್.ವೈ ಶಿರಕೋಳ, ಡಿವೈಎಸ್‌ಪಿ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಕಾರ್ಯಚರಣೆಯ ತಂಡದಲ್ಲಿ ಶಹರ ಪೊಲೀಸ್ ಠಾಣೆ ಸಿಪಿಐ ಮೋತಿಲಾಲ್ ಪವಾರ, ಪಿಎಸ್‌ಐಗಳಾದ ಬಿ.ಜಿ ದೊಡ್ಡಮನಿ, ಎಂ.ಜಿ ವಗ್ಗಣ್ಣನವರ, ಎನ್.ಎನ್ ವಗ್ಗಣ್ಣವರ, ಸಿಬ್ಬಂದಿಯವರಾದ ಯಲ್ಲಪ್ಪ ತಹಸೀಲ್ದಾರ, ಕುಬೇರಪ್ಪ ಲಮಾಣಿ, ಮುತ್ತಪ್ಪ ಲಮಾಣಿ, ಶಂಕರ ಲಮಾಣಿ, ಚನ್ನಬಸಪ್ಪ ಆರ್.ಬಿ., ನೀಲಕಂಠ ಲಿಂಗರಾಜ, ಚಂದ್ರಕಾಂತ ಎಲ್.ಆರ್, ಎಂ.ಎನ್ ಹಿತ್ತಲಮನಿ, ಮಾಲತೇಶ ಕಬ್ಬೂರ, ಪರಶುರಾಮ ಸಕನಳ್ಳಿ, ಬಸವರಾಜ ಶಿಳ್ಳಿಕ್ಯಾತರ, ಮಾರುತಿ ಹಾಲಭಾವಿ, ಸತೀಶ ಮಾರುಕಟ್ಟೆ ಭಾಗವಹಿಸಿದ್ದರು.