ಸಾರಾಂಶ
ಮಳಿಗೆಗಳ ಮಾಲೀಕರಾದ ಶಂಕ್ರಪ್ಪ ಸಂಗಪ್ಪ ಅಂಗಡಿ ಹಾಗೂ ಪ್ರಕಾಶ ಸಿದ್ದಪ್ಪ ಗುರುಸಿದ್ದಪ್ಪನವರ ಎಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಾನಗಲ್ಲ: ರೈತರಿಗೆ ಕಳಪೆ ಡಿಎಪಿ ರಸಗೊಬ್ಬರ ಮಾರಾಟ ಮಾಡಿದ್ದ ಆರೋಪದಡಿ ತಾಲೂಕಿನ ಮಾಸನಕಟ್ಟಿ ಗ್ರಾಮದ ಶ್ರೀ ಉಳವಿ ಚನ್ನಬಸವೇಶ್ವರ ಟ್ರೇಡಿಂಗ್ ಕಂಪನಿ ಹಾಗೂ ಶ್ರೀ ಹೊನ್ನಮ್ಮದೇವಿ ಟ್ರೇಡರ್ಸ್ ಮಳಿಗೆಗಳ ಮಾಲೀಕರ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ದೂರು ದಾಖಲಿಸಿದ್ದಾರೆ.ಮಳಿಗೆಗಳ ಮಾಲೀಕರಾದ ಶಂಕ್ರಪ್ಪ ಸಂಗಪ್ಪ ಅಂಗಡಿ ಹಾಗೂ ಪ್ರಕಾಶ ಸಿದ್ದಪ್ಪ ಗುರುಸಿದ್ದಪ್ಪನವರ ಎಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಳಿಗೆಗಳಿಗೆ ಹೋಗಿ ಮಹಜರು ಮಾಡಲಾಗಿದೆ. ಅಂಗಡಿಗಳಲ್ಲಿ ಯಾವುದೇ ಗೊಬ್ಬರ ಸಿಕ್ಕಿಲ್ಲ. ಮೇ ಹಾಗೂ ಜೂನ್ ತಿಂಗಳಿನ ಆರಂಭದಲ್ಲಿಯೇ ಆರೋಪಿಗಳು ರೈತರಿಗೆ ಕಳಪೆ ಡಿಎಪಿ ರಸಗೊಬ್ಬರ ಮಾರಾಟ ಮಾಡಿ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಾರುತಿ ಅಂಗಾರಗಟ್ಟಿ ತಿಳಿಸಿದ್ದಾರೆ.
ಪರವಾನಗಿ ಪಡೆಯದೇ ಮಾರಾಟ: ಆರೋಪಿ ಶಂಕ್ರಪ್ಪ ಸಂಗಪ್ಪ ಅಂಗಡಿ ಮಾಸನಕಟ್ಟಿ ಗ್ರಾಮದಲ್ಲಿ ಶ್ರೀ ಉಳವಿ ಚನ್ನಬಸವೇಶ್ವರ ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಬಿತ್ತನೆ ಬೀಜ ಮಳಿಗೆಗೆ ಮಾತ್ರ ಪರವಾನಗಿ ಪಡೆದಿದ್ದಾರೆ. ಇನ್ನೊಬ್ಬ ಆರೋಪಿ ಪ್ರಕಾಶ ಸಿದ್ದಪ್ಪ ಗುರುಸಿದ್ದಪ್ಪನವರ ಅವರು ಮಾಸನಕಟ್ಟಿ ಗ್ರಾಮದಲ್ಲಿ ಶ್ರೀ ಹೊನ್ನಮ್ಮದೇವಿ ಟ್ರೇಡರ್ಸ್ ಹೆಸರಿನಲ್ಲಿ ಬಿತ್ತನೆ ಬೀಜ ಹಾಗೂ ಕೀಟನಾಶಕ ಮಳಿಗೆಗೆ ಮಾತ್ರ ಪರವಾನಗಿ ಇದೆ. ಇಬ್ಬರೂ ರಸಗೊಬ್ಬರ ಮಾರಾಟ ಪರವಾನಗಿ ಪಡೆಯದೇ ಅನಧಿಕೃತವಾಗಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಮಾಸನಕಟ್ಟಿ ರೈತರಿಗೆ ಕಳಪೆ ಡಿಎಪಿ ರಸಗೊಬ್ಬರ ಮಾರಾಟ ಮಾಡಿದ್ದರು. ಸುಮಾರು 28 ರೈತರು ಕಳಪೆ ಡಿಎಪಿ ಗೊಬ್ಬರವನ್ನು ಜಮೀನಿಗೆ ಹಾಕಿದ್ದರು. ಬೆಳೆಗಳು ಸಂಪೂರ್ಣವಾಗಿ ನಷ್ಟ ಹೊಂದಿದ ಕಾರಣ ರೈತರು ಕೃಷಿ ಇಲಾಖೆಗೆ ನೀಡಿದ್ದ ದೂರು ಪರಿಶೀಲಿಸಿ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆರೋಪಿ ಶಂಕ್ರಪ್ಪ ಅಂಗಡಿ 22 ರೈತರಿಂದ ₹2.46 ಲಕ್ಷಗಳನ್ನು ಪಡೆದು 176 ಚೀಲ ಕಳಪೆ ಡಿಎಪಿ ರಸಗೊಬ್ಬರ ಮಾರಾಟ ಮಾಡಿದ್ದಾರೆ. ಇನ್ನೊಬ್ಬ ಆರೋಪಿ ಪ್ರಕಾಶ ಸಿದ್ದಪ್ಪ ಗುರುಸಿದ್ದಪ್ಪನವರ 6 ರೈತರಿಂದ ₹68600 ಪಡೆದು 49 ಚೀಲ ಕಳಪೆ ಡಿಎಪಿ ರಸಗೊಬ್ಬರ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.