ಕುಂದಾಪುರ: ಇಲ್ಲಿನ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಸಾಲಿಗ್ರಾಮ ಕೂಟ ಮಹಾಜಗತ್ತು ಸಂಸ್ಥೆ ವತಿಯಿಂದ ಗುರುವಾರ ಶ್ರೀ ಗುರು ನರಸಿಂಹ ಜಯಂತಿಯ ಪ್ರಯುಕ್ತ ಬೃಹತ್ ಮಟ್ಟದಲ್ಲಿ ವೈಭವ ಪೂರ್ಣ ರಥಾರತಿ ಆಯೋಜಿಸಲಾಗಿತ್ತು.
ಬೆಳಗ್ಗೆಯಿಂದಲೂ ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಸಂಜೆ 6 ಗಂಟೆಗೆ ಕಾಶಿ ಅಯೋಧ್ಯಾ ಹರಿದ್ವಾರ ಮುಂತಾದ ಪವಿತ್ರ ಕ್ಷೇತ್ರಗಳಲ್ಲಿ ಜರುಗುವ ವೈಭವದ ಗಂಗಾರತಿಯ ಮಾದರಿಯಲ್ಲಿ ಶ್ರೀ ಗುರು ನರಸಿಂಹ ದೇವರಿಗೂ ಈ ವಿಶಿಷ್ಟ ಸೇವೆ ಸಲ್ಲಿಸಲಾಯಿತು.ರಥಾರತಿ ಹಿನ್ನೆಲೆ ರಾಜ್ಯದ ಮೂಲೆ ಮೂಲೆಗಳಿಂದಲೂ ಕೂಡ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಕಾರ್ಯಕ್ರಮವನ್ನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಯುವ ವಿಭಾಗದ ರಾಜ್ಯ ಸಂಚಾಲಕ ಉಮೇಶ್ ಶಾಸ್ತ್ರೀ ಆಯೋಜಿಸಿದ್ದರು. ರಥಾರತಿಯಲ್ಲಿ ಮಹಾಸಭೆಯ ಸದಸ್ಯರು ಸೇರಿದಂತೆ ಭಕ್ತಾದಿಗಳು ಭಾಗಿಯಾಗಿದ್ದರು.