ಸಾರಾಂಶ
ಸ್ಮಾರಕಗಳು ಭಾರೀ ಹಳೆಯದಾಗಿರುವ ಹಿನ್ನೆಲೆಯಲ್ಲಿ ಮಳೆಯಲ್ಲಿ ಹಾನಿಗೀಡಾಗುತ್ತಿವೆ.
ಹೊಸಪೇಟೆ: ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯಲ್ಲಿ ಮಳೆಗೆ ಉರುಳಿದ ಸಾಲು ಮಂಟಪಗಳ ಸ್ಥಳಕ್ಕೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರಕಗಳು ಭಾರೀ ಹಳೆಯದಾಗಿರುವ ಹಿನ್ನೆಲೆಯಲ್ಲಿ ಮಳೆಯಲ್ಲಿ ಹಾನಿಗೀಡಾಗುತ್ತಿವೆ. ಭಾರತೀಯ ಪುರಾತತ್ವ ಇಲಾಖೆಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಎಡ ಮತ್ತು ಬಲ ಭಾಗದಲ್ಲಿ ಎಂಟು ಕೋಟಿ ರುಪಾಯಿ ವೆಚ್ಚದಲ್ಲಿ ಸಾಲು ಮಂಟಪಗಳ ಜೀರ್ಣೋದ್ಧಾರ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ. ಒಟ್ಟು ಮೂರು ಹಂತದಲ್ಲಿ ಕಾರ್ಯ ಆರಂಭಿಸಲಾಗಿದೆ. ಎರಡು ಮತ್ತು ಮೂರನೇ ಹಂತದ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಮಂಟಪಗಳನ್ನು ಮೂರನೇ ಹಂತದಲ್ಲಿ ಜೀರ್ಣೋದ್ಧಾರ ಮಾಡಲಾಗುವುದು ಎಂದರು.ಮಳೆಯಲ್ಲಿ ಕುಸಿದ ಮಂಟಪ ಕೂಡ ಜೀರ್ಣೋದ್ಧಾರ ಕಾರ್ಯದಲ್ಲಿದೆ. ಮೊದಲ ಆದ್ಯತೆ ನೀಡಿ ಕ್ರಮ ವಹಿಸಲು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಪುರಾತತ್ವ ಸ್ಮಾರಕಗಳನ್ನು ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕಿದೆ. ಜೀರ್ಣೋದ್ಧಾರ ಕಾರ್ಯ ವಿಳಂಬ ಆಗುತ್ತಿದೆ. ಉಳಿದ 250 ಮೀಟರ್ ಜೀರ್ಣೋದ್ಧಾರ ಕಾರ್ಯ ಇನ್ನೂ 9 ತಿಂಗಳಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಅತಿಹೆಚ್ಚು ಹಾಗೂ ತುರ್ತಾಗಿ ಕಾರ್ಯ ನಡೆಸಬೇಕಾದ ಶಿಥಿಲಗೊಂಡ ಸ್ಮಾರಕಗಳನ್ನು ಆದಷ್ಟು ರಕ್ಷಣೆ ಮಾಡಿ, ನೈಜತೆ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವೆ ಎಂದರು.
ತಹಸೀಲ್ದಾರ್ ಶ್ರುತಿ ಎಂ., ಪಿಎಸ್ಐ ಶಿವಕುಮಾರ್, ಕಂದಾಯ ಇಲಾಖೆಯ ಮಲ್ಲಿಕಾರ್ಜುನಗೌಡ, ಅನಿಲ್ ಕುಮಾರ್ ಮತ್ತಿತರರಿದ್ದರು.