ಸಾರಾಂಶ
ಗಂ.ದಯಾನಂದ ಕುದೂರು
ಕನ್ನಡಪ್ರಭ ವಾರ್ತೆ ಕುದೂರುಮಕ್ಕಳಿಲ್ಲದ ಕೊರಗು ಹೋಗಲಾಡಿಸಲು ಸಾಲು ಗಿಡಗಳನ್ನು ನೆಟ್ಟು ಅವುಗಳಲ್ಲಿ ಮಾತೃತ್ವ ಕಂಡು, ಆ ಮರಗಳಲ್ಲಿ ನೂರಾರು ಹಕ್ಕಿ ಪಕ್ಷಿಗಳು ಗೂಡುಕಟ್ಟಿಕೊಂಡು ವಾಸ ಮಾಡುವಂತೆ ಮಾಡಿದ ಸಾಲುಮರದ ತಿಮ್ಮಕ್ಕನಿಗೇ ಇಂದು ಸುವ್ಯವಸ್ಥೆಯಲ್ಲಿರುವ ಸ್ವಂತಕ್ಕೊಂದು ಮನೆ ಇಲ್ಲದಂತಾಗಿದೆ. ಇದು ನಾಗರೀಕ ಸಮಾಜದ ನಿಜವಾದ ಅಣಕವಾಗಿದೆ.ಮಾಗಡಿ ತಾಲೂಕು ಹುಲಿಕಲ್ಲು ಗ್ರಾಮದಲ್ಲಿ ಗುಡಿಸಲಿನಲ್ಲಿದ್ದ ತಿಮ್ಮಕ್ಕನಿಗೆ ಸ್ಥಳೀಯ ಪಂಚಾಯ್ತಿಯಿಂದ ನಿವೇಶನ ನೀಡಿದ್ದರು. ನಂತರ ಅಲ್ಲೊಂದು ಮನೆ ನಿರ್ಮಾಣವನ್ನು ತಾಲೂಕು ಆಡಳಿತ ಮಾಡಿಕೊಟ್ಟಿತು. ಆದರೆ ಆ ಮನೆಯಲ್ಲಿ ಅಡುಗೆ ಮನೆ ಮತ್ತು ಬಚ್ಚಲು ಮನೆಗೆ ಸರಾಗವಾಗಿ ಓಡಾಡಲು ಆಗದಂತಹ ಇಕ್ಕಟ್ಟಾಗಿ ಕಟ್ಟಿಕೊಡಲಾಗಿದೆ. ಈಗಾಗಲೇ ಬಿದ್ದು ಮೂಳೆಗೆ ಪೆಟ್ಟು ಮಾಡಿಕೊಂಡಿರುವ ತಿಮ್ಮಕ್ಕ ಇದರಿಂದ ಭಯಗೊಂಡು ಕಾಯಿಲೆ ಬಿದ್ದಾಗ ಉನ್ನತ ಚಿಕಿತ್ಸೆ ದೊರಕಲು ಸಾಧ್ಯವಾಗುವುದಿಲ್ಲ ಎಂದು ಸಾಲುಮರದ ನೆರಳಿನಲ್ಲಿದ್ದ ಮನೆಯನ್ನು ಬಿಟ್ಟು ಕಾಂಕ್ರೀಟ್ ಕಾಡಾದ ಬೆಂಗಳೂರಿನಲ್ಲಿ ನೆಲೆಗೊಂಡರು.ತಿಮ್ಮಕ್ಕ ಬೆಂಗಳೂರಿನಲ್ಲಿ ನೆಲೆಗೊಂಡಿದ್ದರು ತಿಂಗಳಿಗೊಮ್ಮೆ ಏನಾದರೂ ನೆಪ ಮಾಡಿಕೊಂಡು ಹುಲಿಕಲ್ಲಿಗೆ ಬಂದು ಸಾಲುಮರಗಳನ್ನು ಪ್ರೀತಿಯಿಂದ ನೋಡಿಕೊಂಡು ಹೋಗುತ್ತಾರೆಯೇ ವಿನಾಃ ಇಕ್ಕಟ್ಟಾದ ಆ ಮನೆಯ ಕಡೆಗೆ ಕಾಲಿಡುವುದಿಲ್ಲ.ಮನೆಯೊಳಗೆ ಮನೆಯೊಡತಿ ಇಲ್ಲ:ಮನೆಯ ಎರಡೂ ಬದಿಯ ಕಾಂಪೌಂಡ್ ಸೀಳುಬಿಟ್ಟಿದ್ದು ಈಗಲೋ ಆಗಲೋ ಉರುಳಿ ಬೀಳುವಂತಿದೆ. ಮುರಿದು ಬಿದ್ದಿರುವ ಗೇಟ್, ಮನೆಯೊಳಗೆ ಹೋಗಲು ಬಾಗಿಲ ಬಳಿ ನಿರ್ಮಾಣ ಮಾಡಿರುವ ಚರಂಡಿ ಮೇಲೆ ಸರಾಗವಾಗಿ ನಡೆಯಲು ಆಗದಂತಹ ಅರೆಬರೆ ಚಪ್ಪಡಿಕಲ್ಲು ಹಾಕಿದ್ದಾರೆ. ಮನೆಯಂಗಳದ ತುಂಬ ಕಸದ ರಾಶಿ, ಮನೆಯ ಕಿಟಕಿಗಳಲ್ಲಿ ಕಡಜದ ಗೂಡುಗಳು. ಒಟ್ಟಾರೆ ತಿಮ್ಮಕ್ಕನ ಮನೆಯನ್ನು ಈಗ ಯಾರು ನೋಡಿದರೂ ಸಂಕಟವಾಗದೇ ಇರಲಾರದು.ನಾಲ್ಕು ಕಿಮೀ ದೂರದವರೆವಿಗೆ ನೆಟ್ಟ ಆಲದ ಮರ:ಕುದೂರು ಗ್ರಾಮದಿಂದ ತುಮಕೂರಿಗೆ ಹೋಗುವ ಮಾರ್ಗದಲ್ಲಿ ಹುಲಿಕಲ್ಲು ಗ್ರಾಮ ಸಿಗುತ್ತದೆ. ಕುದೂರಿನಿಂದ ಹುಲಿಕಲ್ಲಿಗೆ ನಾಲ್ಕು ಕಿಮೀ ದೂರವಾಗುತ್ತದೆ. ಅಷ್ಟು ದೂರದವರೆವಿಗೂ ರಸ್ತೆಯ ಅಕ್ಕಪಕ್ಕದಲ್ಲಿ ಆಲದ ಮರಗಳನ್ನು ಬೆಳೆಸಿದ ತಿಮ್ಮಕ್ಕನಿಗೆ ಸ್ಚಂತಕ್ಕೊಂದು ಸರಿಯಾದ ಮನೆಯಿಲ್ಲ ಎನ್ನುವುದೇ ಈ ಸಮಾಜ ತಲೆತಗ್ಗಿಸುವ ವಿಷಯವಾಗಿದೆ.ಸೋರುವ ಮನೆ:ನಿವೇಶನ ದೊಡ್ಡದಾಗಿದ್ದರು 26- 12 ವಿಸ್ತೀರ್ಣದಲ್ಲಿ ಮೋಲ್ಡ್ ಮನೆ ನಿರ್ಮಾಣ ಮಾಡಿಕೊಡಲಾಯಿತು. ಮನೆಗೆ ಮೋಲ್ಡ್ ಮನೆಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಶೀಟ್ ಹಾಕಿ ಬಚ್ಚಲು ಮನೆ ಮತ್ತು ಅಡುಗೆ ಮನೆ ಕಟ್ಟಿಕೊಡಲಾಗಿದೆ. ಹೀಗೆ ಶೀಟ್ ಹಾಕಿರುವ ಭಾಗ ಸೋರುತ್ತಿರುತ್ತದೆ. ಅದಕ್ಕಾಗಿ ಮನೆಯ ಮೇಲೆ ನೀರು ಒಳಗೆ ಬೀಳದಂತೆ ಟಾರ್ಪಾಲ್ ಹಾಕಿಕೊಂಡು ಜೀವನ ಮಾಡಬೇಕಾಗಿತ್ತು. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ತಿಮ್ಮಕ್ಕರವರ ಆರೋಗ್ಯ ಕ್ಷೀಣಿಸಿದ್ದ ಕಾರಣ ಈಗಿರುವ ಹುಲಿಕಲ್ಲಿನ ಮನೆ ವಾಸಕ್ಕೆ ಯೋಗ್ಯವೆನಿಸಲಿಲ್ಲ. ಅವರು ಹುಲಿಕಲ್ಲು ಬಿಟ್ಟು ಬೆಂಗಳೂರು ಸೇರಲು ಈ ಕಾರಣವೂ ಒಂದು.ಸ್ವಂತದ್ದೆಂದು ಇರುವ ಮನೆ ವಾಸ ಮಾಡಲು ಯೋಗ್ಯವಾಗಿಲ್ಲ. ಬೆಂಗಳೂರಿನ ಮನೆಯೂ ಕೂಡಾ ಬಾಡಿಗೆ ಮನೆ. ಈಗ ಪರಿಸರ ಸಂರಕ್ಷಣೆ ಕುರಿತಾಗಿ ಸರ್ಕಾರದ ರಾಯಭಾರಿಯಾಗಿರುವ ಕಾರಣ ಮನೆಯ ಬಾಡಿಗೆ ವಾಹನದ ಖರ್ಚನ್ನು ಸರ್ಕಾರವೇ ಭರಿಸುತ್ತಿದೆ. ಏನೇ ಮಾಡಿದರೂ ನಾನು ಹಾಕಿದ ಸಾಲುಮರದ ನೆರಳಿನಲ್ಲಿ, ನಾನು ಬಾಳಿ ಬದುಕಿದ ಊರಿನಲ್ಲಿ ಒಂದು ಅಚ್ಚುಕಟ್ಟಾಗ ಮನೆ ಇಲ್ಲದೇ ಇರುವುದು ತಿಮ್ಮಕ್ಕರವರಿಗೆ ನೋವು ಮನೆಮಾಡಿಕೊಂಡಿದೆ. ಆದರೆ ತಿಮ್ಮಕ್ಕರವರ ಮನದ ನೋವಿಗೆ ಜನಪ್ರತಿನಿಧಿಗಳು, ಸರ್ಕಾರ ಜಾಣ ಕಿವುಡು, ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆ.ಮನೆ ಮತ್ತು ಸ್ಮಾರಕ :ತಿಮ್ಮಕ್ಕರವರಿಗೆ ಮನೆ ನಿರ್ಮಾಣ ಮಾಡಲು ತಾಲೂಕು ಆಡಳಿತ ಮತ್ತು ಸರ್ಕಾರ ಮನಸ್ಸು ಮಾಡಿದರೆ ದೂರದೃಷ್ಟಿ ಇಟ್ಟುಕೊಂಡು ಆ ಮನೆ ಮುಂದೊಂದು ದಿನ ತಿಮ್ಮಕ್ಕರವರ ಸ್ಮಾರಕವಾಗಲಿ, ಮುಂದಿನ ತಲೆಮಾರಿಗೆ ಅಜ್ಜಿಯ ಸಾಧನೆಗಳ ಪೂರ್ಣ ಮಾಹಿತಿ ಆ ಸ್ಮಾರಕದ ಮನೆಯಲ್ಲಿ ದೊರಕುವಷ್ಟು, ಅಲ್ಲಿಯೇ ಕುಳಿತು ಆಸಕ್ತ ವಿದ್ಯಾರ್ಥಿಗಳು ಅಧ್ಯಯನ ಮಾಡುವಷ್ಟು ವಿಶಾಲವಾಗಿರಲಿ ಎಂಬುದು ಪರಿಸರ ಪ್ರಿಯರ ಆಶಯವಾಗಿದೆ.ನೂತನ ಮನೆ ಕಟ್ಟಿಕೊಳ್ಳಲು ದಾನಿಗಳ ಕೊಡುಗೆ :ಸಾಲುಮರದ ತಿಮ್ಮಕ್ಕರವರ ಮನೆಯ ದುಃಸ್ಥಿತಿಯನ್ನು ಕಂಡು ಮನೆ ನವೀಕರಣ ಮಾಡಿಕೊಳ್ಳಲೆಂದು ಮಂಗಳೂರಿನ ಎ.ವಿ.ಶೆಟ್ಟಿರವರು 5 ಲಕ್ಷ ರು. ಗಳು, ಕಾಂಟಿನೆಂಟಲ್ ಗ್ರೂಪ್ ವತಿಯಿಂದ 3 ಲಕ್ಷ ರು., ಭಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ 1 ಲಕ್ಷ, ಹೀಗೆ ಒಟ್ಟು 9 ಲಕ್ಷ ರು.ಗಳು ನಮ್ಮ ಬಳಿ ಇದೆ ಆದರೆ ಇಷ್ಟು ಹಣದಲ್ಲಿ ಮನೆ ರೂಪಿಸಲು ಸಾಧ್ಯವಾಗುವುದಿಲ್ಲ ಎಂದು ತಿಮ್ಮಕ್ಕರವರ ಮಗ ಉಮೇಶ್ ಅಳಲು ವ್ಯಕ್ತಪಡಿಸಿದ್ದಾರೆ.
...ಕೋಟ್ ...ಸಾಲುಮರದ ತಿಮ್ಮಕ್ಕರವರು ಆರೋಗ್ಯದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಉನ್ನತ ಚಿಕಿತ್ಸೆಗೆಂದು ವಾಸ ಮಾಡುತ್ತಿದ್ದಾರೆ ಅದಕ್ಕಾಗಿ ಹುಲಿಕಲ್ಲಿನ ಮನೆಯಲ್ಲಿ ವಾಸವಾಗಿಲ್ಲ ಎಂದು ತಿಳಿದಿದ್ದೆ. ಆದರೆ, ನೀವು ಮನೆಯ ಸ್ಥಿತಿ ದುಸ್ಥರವಾಗಿರುವುದು ನನ್ನ ಗಮನಕ್ಕೆ ತಂದಿದ್ದೀರಿ. ನಾಳೆಯೇ ನಾನು ಹುಲಿಕಲ್ಲಿಗೆ ಹೋಗಿ ಸಮಸ್ಯೆಯನ್ನು ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ಯೋಜನೆ ರೂಪಿಸುತ್ತೇನೆ.-ಎಚ್.ಸಿ.ಬಾಲಕೃಷ್ಣ. ಶಾಸಕ ಮಾಗಡಿ
...ಕೋಟ್ ...ನಾ ನೆಟ್ಟ ಸಾಲುಮರದ ಅಡಿಯಲ್ಲಿ ಒಂದು ಮನೆ ನಿರ್ಮಾಣಗೊಳ್ಳಬೇಕು. ಅಲ್ಲಿ ನನ್ನ ಕಡೆಯ ದಿನಗಳು ಕಳೆಯುವಂತಾಗಬೇಕು ಎನ್ನುವ ಆಸೆ. ಈಗಾಗಲೇ ಪುಣ್ಯಾತ್ಮರು ಗುಡಿಸಲಿನಲಿದ್ದ ನನಗೆ ಮನೆಯೊಂದನ್ನು ಕಟ್ಟಿಕೊಟ್ದಿದ್ದಾರೆ. ಅವರಿಗೆ ನಾನು ಋಣಿ, ಆದರೆ ಆ ಮನೆಯಲ್ಲಿ ಅಡುಗೆ ಮನೆ ಬಚ್ಚಲು ಮನೆಗೆ ಸರಾಗವಾಗಿ ಓಡಾಡಲು ಆಗುವುದಿಲ್ಲ. ಇಬ್ಬರು ಏಕಕಾಲಕ್ಕೆ ಹೋಗಲು ಸಾಧ್ಯವೇ ಇಲ್ಲ. ಅದಕ್ಕಾಗಿ ಒಂದು ಸುಸಜ್ಜಿತ ಮನೆ ಕಟ್ಟಿಕೊಟ್ಟರೆ ನನಗೆ ಬಹಳ ಸಂತೋಷವಾಗುತ್ತದೆ.- ಸಾಲುಮರದ ತಿಮ್ಮಕ್ಕ, ಪರಿಸರ ರಾಯಭಾರಿ. ಕರ್ನಾಟಕ ಸರ್ಕಾರ.
----27ಕೆಆರ್ ಎಂಎನ್ 4,5,6,7.ಜೆಪಿಜ
4. ಸಾಲುಮರದ ತಿಮ್ಮಕ್ಕನ ಮನೆಯಲ್ಲಿ ಒಬ್ಬರಷ್ಟೇ ಓಡಾಡಲು ಆಗಬಹುದಾದ ಅಡುಗೆಮನೆಯ ದಾರಿ5,6. ಸಾಲುಮರದ ತಿಮ್ಮಕ್ಕನ ಮನೆಯ ಕಾಂಪೌಂಡ್ ದುಃಸ್ಥಿತಿ
7. ಕಸದ ರಾಶಿ, ಬಿಕೋ ಎನ್ನುತ್ತಿರುವ ನಾಡೋಜ ತಿಮ್ಮಕ್ಕನ ಮನೆಯಂಗಳ