ರಥಸಪ್ತಮಿ ಪ್ರಯುಕ್ತ ಸೂರ್ಯ ನಮನ

| Published : Feb 08 2024, 01:35 AM IST

ಸಾರಾಂಶ

ರಥಸಪ್ತಮಿ ಅಂಗವಾಗಿ ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲೂ ಸೂರ್ಯ ಪಾಸನೆಯ ವಿಧಿ ವಿಧಾನಗಳಂತೆ ನಡೆಯಲಿದ್ದು, 13 ದಿನಗಳ ಕಾಲ ಸೂರ್ಯ ಉಪಾಸನೆ ಜೊತೆಗೆ ಅಗ್ನಿಹೋತ್ರ ಹೋಮ ಮತ್ತು 9 ದಿನಗಳ 108 ಸೂರ್ಯ ನಮಸ್ಕಾರಗಳನ್ನು ಮಾಡಲಾಗುವುದು.

ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 9 ದಿನಗಳ ಕಾಲ 108 ಸೂರ್ಯ ನಮಸ್ಕಾರ । ಯೋಗಪಟುಗಳಿಂದ ಸೂರ್ಯೋಪಾಸನೆಯ ವಿಧಿವಿಧಾನ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಸಕ್ತ ಸಾಲಿನ ರಥಸಪ್ತಮಿ ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಸರ್ ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. 8 ರಿಂದ 16ರ ವರೆಗೆ ಒಂಭತ್ತು ದಿನಗಳ ಕಾಲ 108 ಸೂರ್ಯ ನಮಸ್ಕಾರಗಳ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದು ಉತ್ತರ ವಿವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಯೋಗ ಶಿಕ್ಷಕ ಡಾ. ಎನ್.ಲೋಕನಾಥ್ ತಿಳಿಸಿದರು.

ಬುಧವಾರ ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 108 ಸೂರ್ಯ ನಮಸ್ಕಾರಗಳ ಪೂರ್ವಭಾವಿಯಾಗಿ ನಡೆದ ಯೋಗಾಭ್ಯಾಸದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ, ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ಆಗಿರುವುದರಿಂದ ಇದೇ ಫೆ. 16 ರ ಶುಕ್ರವಾರ ಸೂರ್ಯ ಆರಾಧನೆಯ ರಥ ಸಪ್ತಮಿ ದಿನವೆಂದು ಆಚರಿಸಲಾಗುತ್ತದೆ ಎಂದರು.

ಸೂರ್ಯ ನಮಸ್ಕಾರಗಳನ್ನು ಮಾಡುವ ಅಭ್ಯಾಸದ ಬಗ್ಗೆ ಮತ್ತು ಅದರ ಉಪಯೋಗದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ದಿನಂಪ್ರತಿ ಮುಂಜಾನೆ 5-30ಕ್ಕೆ ಸೂರ್ಯ ನಮಸ್ಕಾರವನ್ನು ಆರಂಭಿಸಲಾಗುವುದು, ರಥಸಪ್ತಮಿ ಅಂಗವಾಗಿ ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲೂ ಸೂರ್ಯ ಪಾಸನೆಯ ವಿಧಿ ವಿಧಾನಗಳಂತೆ ನಡೆಯಲಿದ್ದು, 13 ದಿನಗಳ ಕಾಲ ಸೂರ್ಯ ಉಪಾಸನೆ ಜೊತೆಗೆ ಅಗ್ನಿಹೋತ್ರ ಹೋಮ ಮತ್ತು 9 ದಿನಗಳ 108 ಸೂರ್ಯ ನಮಸ್ಕಾರಗಳನ್ನು ಮಾಡಲಾಗುವುದು. ಫೆ 18 ರಂದು ಈ ಸೂರ್ಯೋಪಾಸನೆ ಕೊನೆಗೊಳ್ಳಲಿದೆ ಎಂದು ತಿಳಿಸಿದರು.

ಸೂರ್ಯ ಮೂಡುತ್ತಿದ್ದಂತೆಯೇ ದೀರ್ಘ ದಂಡ ಹಾಕುವುದರಿಂದ ಅದರ ಕಿರಣಗಳು ದೇಹಕ್ಕೆ ತಾಗಿ ಆರೋಗ್ಯಕ್ಕೆ ಉಪಯೋಗವಾಗುತ್ತದೆ. ನರಗಳಿಗೆ ಶಕ್ತಿ ತುಂಬುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಮಧುಮೇಹ ರೋಗ ನಿಯಂತ್ರಣ, ಮಾನಸಿಕ ಸ್ವಾಸ್ಥ್ಯತೆ, ದೃಷ್ಟಿ ದೋಷ, ರಕ್ತದೊತ್ತಡ ಮತ್ತಿತರ ಕಾಯಿಲೆಗಳಿಗೆ ಉಪಶಮನ ನೀಡಲಿದೆ. ಹಾಗೂ ಪ್ರತಿ ದಿನ ಸೂರ್ಯ ನಮಸ್ಕಾರ ಮಾಡುವುದರಿಂದ ಸಂಪೂರ್ಣ ಆರೋಗ್ಯ ಲಭಿಸಲಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಪತಂಜಲಿ ಮಹಿಳಾ ಜಿಲ್ಲಾ ಸಮಿತಿ ಅಧ್ಯಕ್ಷೆ ವೀಣಾ ಲೋಕನಾಥ್ ಮಾತನಾಡಿ, ಯೋಗ ಕೆಲವರಿಗೆ ಮಾತ್ರ ಸೀಮಿತ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಯೋಗವನ್ನು ಮಾಡುವುದರಿಂದ ದೇಹದ ಆರೋಗ್ಯ ಸ್ಥಿತಿ ಸುಧಾರಣೆಯಾಗುತ್ತದೆ. ಈ ಮಹತ್ವವನ್ನು ತಿಳಿದಿರುವ ಎಲ್ಲರೂ ಯೋಗದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದಾರೆ. ಸೂರ್ಯ ನಮಸ್ಕಾರದಿಂದ ಹಲವು ಕಾಯಿಲೆಗಳನ್ನು ದೂರವಿಡಲು ಸಾಧ್ಯವಿದೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಮೈಯಲ್ಲಿ ನವಚೇತನ ತುಂಬಿದಂತೆನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷಮವಾಗುತ್ತವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಡಿಯಲ್ಲಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಲಾಗಿದೆ ಎಂದರು.

ಯೋಗ ಶಿಕ್ಷಕ ಡ್ಯಾನ್ಸ್ ಶ್ರೀನಿವಾಸ್ ಮಾತನಾಡಿ, ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಯ ಚಟುವಟಿಕೆಗಳೂ ಸೂರ್ಯನಿಂದ ನಡೆಯುತ್ತಿವೆ. ಸೂರ್ಯನಿಲ್ಲದೆ ಜೀವನದ ಅಸ್ತಿತ್ವ ಇರಲು ಸಾಧ್ಯವಿಲ್ಲ. ನಿಯಮ ಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆಯನ್ನು, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ ಉತ್ತರ ದಿಕ್ಕಿನ ಮಾರ್ಗದಲ್ಲಿ ಹೊರಟ ದಿನ. ರಥ ಸಪ್ತಮಿ ದಿವಸ ಉತ್ತಮ ಆರೋಗ್ಯ ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ ಎಂದು ತಿಳಿಸಿದರು.

ನಗರಸಭಾ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ, ಅನುಪಮಾ ಪಂಡಿತ್, ಎನ್.ವೆಂಕಟೇಶ್, ಶೈಲಜಾ ವೆಂಕಟೇಶ್, ಡಾ. ಎಂ.ಶಂಕರ್ , ಉಮಾಶಂಕರ್, ಯೋಗಪಟುಗಳು ಮತ್ತಿತರರು ಇದ್ದರು.

--------

ಚಿಕ್ಕಬಳ್ಳಾಪುರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಯೋಗ ಶಿಕ್ಷಕ ಡಾ. ಎನ್. ಲೋಕನಾಥ್ ಸಾರಥ್ಯದಲ್ಲಿ ಯೋಗಾಭ್ಯಾಸದಲ್ಲಿ ನಿರತರಾಗಿರುವ ಯೋಗಪಟುಗಳು.