ಮೌಲ್ಯಾಧಾರಿತ ರಾಜಕಾರಣದಿಂದ ದೇಶೋದ್ಧಾರ: ಡಿ.ಎಚ್‌.ಶಂಕರಮೂರ್ತಿ

| Published : Jan 28 2024, 01:15 AM IST

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ, ಈ ಹಿಂದೆ ಸರಕಾರ ನಡೆಸಿದ್ದವರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಬೇರೆ ಯಾರೂ ಮೌಲ್ಯಾಧಾರಿತ ರಾಜಕಾರಣ ಮಾಡಲಿಲ್ಲ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮೌಲ್ಯಾಧಾರಿತ ರಾಜಕಾರಣದಿಂದ ದೇಶದ ಉದ್ಧಾರ ಸಾಧ್ಯ, ದೇಶಕ್ಕೆ ಇದರ ಅಗತ್ಯವಿದೆ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅಭಿಪ್ರಾಯಿಸಿದರು. ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್‌ ಹಾಲ್‌ನಲ್ಲಿ ಶನಿವಾರ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ನಡೆದ ಶ್ರಮದಿಂದ ಸಾರ್ಥಕತೆಯಡೆಗೆ ವಿಚಾರಗೋಷ್ಠಿಯಲ್ಲಿ ಮೌಲ್ಯಾಧಾರಿತ ರಾಜಕಾರಣ ವಿಷಯ ಕುರಿತು ಅವರು ಮಾತನಾಡಿದರು. ಬರೀ ರಾಜಕಾರಣಕ್ಕೂ ಮೌಲ್ಯಾಧಾರಿತ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ಹಣದ ಬಲ ಆಧಾರದ ಮೇಲಿನ ಸರಕಾರದಿಂದ ದೇಶ ಉದ್ಧಾರ ಆಗಿಲ್ಲ. ಇದು ಜನ ಸಾಮಾನ್ಯರಿಗೂ ಗೊತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ, ಈ ಹಿಂದೆ ಸರಕಾರ ನಡೆಸಿದ್ದವರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಬೇರೆ ಯಾರೂ ಮೌಲ್ಯಾಧಾರಿತ ರಾಜಕಾರಣ ಮಾಡಲಿಲ್ಲ, ಬೇರೆಯವರಿಂದ ದೇಶ ಉದ್ಧಾರವಾಗಿಲ್ಲ. ಆಸ್ತಿ ಮಾಡುವುದು, ರಾಜಕೀಯ ಅಧಿಕಾರ ಮಾಡುವುದು ಆಸ್ತಿ ಅಲ್ಲ, ಆ ಶಕ್ತಿ ಸಮಾಜಕ್ಕಾಗಿ ಉಪಯೋಗಬೇಕು, ಅದು ಬಿಟ್ಟು ಮಕ್ಕಳು, ಮೊಮ್ಮಕ್ಕಳಿಗಾಗಿ ಆಸ್ತಿ ಮಾಡುವುದು ಮೌಲ್ಯಧಾರಿತವಲ್ಲ, ಈ ಕುರಿತು ಗಂಭೀರವಾಗಿ ಯೋಚನೆ ಮಾಡಬೇಕು. ಆದರೀಗ ಮೌಲ್ಯಧಾರಿತ ರಾಜಕಾರಣಕ್ಕೆ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಜೀ ಅವರು ತಾಯಿ, ಅಣ್ಣ, ತಮ್ಮ, ತಂಗಿ ಇವರ್ಯ್ರನ್ನೂ ಹತ್ತಿರ ಸೇರಿಸಲಿಲ್ಲ. ದೇಶದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ, ದೇಶ ಪ್ರಗತಿ ಸಾಧಿಸಿದೆ. ಸೋತು ಸುಮ್ಮನಾಗುವ ಬದಲು ಜೀವನದಲ್ಲಿ ಸವಾಲು ಸ್ವೀಕರಿಸಿ ಮುನ್ನಡೆಯಬೇಕು .ಆಗ ಸಾಧನೆ ಸಾಧ್ಯಎಂದು ಹೇಳಿದರು. ರುದ್ರೇಗೌಡರು ರಾಜಕಾರಣಿಯಾಗಿ, ಕೈಗಾರಿಕೋದ್ಯಮಿಯಾಗಿ, ಸಮಾಜ ಸೇವಕರಾಗಿ ನಿಷ್ಕಳಂಕ ವ್ಯಕ್ತಿ. ಜೀವನದಲ್ಲಿ ಉತ್ತಮ ಆದರ್ಶಗಳೊಂದಿಗೆ ಮುನ್ನಡೆದಿದ್ದಾರೆ. ಇಂತಹ ವಿಶೇಷ ವ್ಯಕ್ತಿಯನ್ನು ನಾಗರಿಕರು ಮುಂದೆ ತಂದು ಅಂತಹವರನ್ನು ಹೆಚ್ಚು ಸೃಷ್ಟಿ ಮಾಡಲು ಕಾರಣರಾಗಬೇಕು ಎಂದು ಹೇಳಿದರು.ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಡಾ.ಧನಂಜಯ ಸರ್ಜಿ ಸೇರಿದಂತೆ ಹಲವರಿದ್ದರು.27ಎಸ್‌ಎಂಜಿಕೆಪಿ02: ಶಿವಮೊಗ್ಗದ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್‌ ಹಾಲ್‌ನಲ್ಲಿ ಶನಿವಾರ ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ನಡೆದ ಶ್ರಮದಿಂದ ಸಾರ್ಥಕತೆಯಡೆಗೆ ವಿಚಾರಗೋಷ್ಠಿಯಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮಾತನಾಡಿದರು.