ರೈತರ ಉದ್ಧಾರವೇ ದೇಶದ ಪ್ರಗತಿ

| Published : May 28 2024, 01:14 AM IST

ಸಾರಾಂಶ

ಕೃಷಿ ಇಲಾಖೆ ವತಿಯಿಂದ ಸಿಗುವ ಸೌಲಭ್ಯ ಪಡೆದು ಆರ್ಥಿಕವಾಗಿ ರೈತರು ಮುಂದುವರೆದಾಗ ಮಾತ್ರ ದೇಶವು ಪ್ರಗತಿ ಕಾಣಲು ಸಾಧ್ಯ

ಶಿರಹಟ್ಟಿ: ತಾಲೂಕಿನಾದ್ಯಂತ ಹದಭರಿತ ಮುಂಗಾರು ಪೂರ್ವ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆ ಗರಿಗೆದರಿದ್ದು. ರೈತರು ಎತ್ತು ಮತ್ತು ಟ್ರ್ಯಾಕ್ಟರ್‌ ನಿಂದ ರಂಟೆ-ಕುಂಟೆ ಹೊಡೆದು ಬಿತ್ತನೆಗೆ ಭೂಮಿ ಹಸನುಗೊಳಿಸಿದ್ದು, ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಕೊಡುತ್ತಿದ್ದು, ರೈತರು ಪಡೆದುಕೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಕರೆ ನೀಡಿದರು.

ಸೋಮವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ಹೆಸರು, ತೊಗರಿ, ಶೇಂಗಾ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಸಧ್ಯ ೪.೬೮೦ ಕ್ವಿಂಟಲ್ ಹೆಸರು, ೫೦೪ ಕ್ವಿಂಟಲ್ ತೊಗರಿ, ೯೦೦ ಕ್ವಿಂಟಲ್ ಶೇಂಗಾ ದಾಸ್ತಾನಿದ್ದು, ಬೇಡಿಕೆಗೆ ಅನುಗುಣವಾಗಿ ರೈತರಿಗೆ ಸಕಾಲದಲ್ಲಿ ತರಿಸಿ ಕೊಡಲಾಗುವುದು ಎಂದು ಹೇಳಿದರು.

ಸಾಮಾನ್ಯ ರೈತರಿಗೆ ೫ ಕೆಜಿ ಹೆಸರು ಬಿತ್ತನೆ ಬೀಜಕ್ಕೆ ₹೭೮೫, ತೊಗರಿ ₹ ೭೬೫, ಶೇಂಗಾ ೩೦ ಕೆಜಿ ಬೀಜಕ್ಕೆ ₹೨.೨೦೦ ಕೊಟ್ಟು ಪಡೆದುಕೊಳ್ಳಬಹುದು. ಅದೇ ರೀತಿ ಎಸ್ಸಿ, ಎಸ್ಟಿ ರೈತರಿಗೆ ಹೆಸರು ಬೀಜ ₹ ೭೨೫, ತೊಗರಿ ₹೭೦೨.೫, ಶೇಂಗಾ ₹೨೦೭೦ ನೀಡಿ ಪಡೆದುಕೊಳ್ಳಬೇಕು ಎಂದು ರೈತರಿಗೆ ಮನವರಿಕೆ ಮಾಡಿದರು.

ಕೃಷಿ ಇಲಾಖೆ ವತಿಯಿಂದ ಸಿಗುವ ಸೌಲಭ್ಯ ಪಡೆದು ಆರ್ಥಿಕವಾಗಿ ರೈತರು ಮುಂದುವರೆದಾಗ ಮಾತ್ರ ದೇಶವು ಪ್ರಗತಿ ಕಾಣಲು ಸಾಧ್ಯ. ಕೃಷಿ ಇಲಾಖೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಕಷ್ಟು ಸೌಲಭ್ಯ ಸರ್ಕಾರ ನೀಡುತ್ತಿದೆ. ರೈತರು ಇಲಾಖೆ ವತಿಯಿಂದ ವಿತರಣೆಯಾಗುವ ಪ್ರತಿಯೊಂದ ಸಹಾಯಧನದ ವಸ್ತುಗಳನ್ನು ಬೇಕಾದ ರೈತರು ಮಾತ್ರ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸುಧಾರಣೆ ಹೊಂದಬೇಕು ಎಂದು ಹೇಳಿದರು.

ಸತತ ೨-೩ ವರ್ಷಗಳಿಂದ ಅತಿವೃಷ್ಟಿ, ಈ ವರ್ಷ ಬರಗಾಲದಿಂದ ತತ್ತರಿಸಿದ ರೈತರು ಆರ್ಥಿಕ ನಷ್ಟ ಅನುಭವಿಸಿದ್ದರು. ಈ ಬಾರಿ ಹವಾಮಾನ ಇಲಾಖೆ ಮಾಹಿತಿಯಂತೆ ಹದವರ್ತಿ ಮಳೆಯಾಗುವ ಮುನ್ಸೂಚನೆ ಇದೆ. ಕೃಷಿ ಇಲಾಖೆಯಲ್ಲಿ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ತಾಲೂಕಿನ ಪ್ರತಿ ರೈತರು ಕೂಡ ಸೂಕ್ತ ದಾಖಲೆ ನೀಡಿ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯ ಪಡೆದು ಮಾದರಿ ರೈತರಾಗಬೇಕು ಎಂದು ಕರೆ ನೀಡಿದರು.

ಪ್ರಸಕ್ತ ವರ್ಷದ ಮುಂಗಾರು ಕೃಷಿ ಚಟುವಟಿಕೆಗಳಿಗೆ ರೈತರು ಮುಂದಾಗಿದ್ದು, ಯಾವ ಬೀಜ ಬೆಳೆಯಬೇಕು ಎಂದು ಚರ್ಚೆ ನಡೆಸಿದ್ದಾರೆ. ಯಾವ ಬೆಳೆಗೆ ತೇಜಿ ಮಂದಿ ಆಗಬಹುದು ಎಷ್ಟು ಇಳುವರಿ ತೆಗೆಯಬಹುದು ಎಂದು ತಮ್ಮೊಳಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ರಸಗೊಬ್ಬರ ಮತ್ತು ಕೃಷಿ ಪರಿಕರಗಳ ಮಾರಾಟಗಾರರು ಈ ವರ್ಷಕ್ಕೆ ಬೇಕಾಗುವಷ್ಟು ಬಿತ್ತನೆ ಬೀಜ ರಸಗೊಬ್ಬರ ತರಿಸಿಕೊಂಡು ರೈತರ ಆಗಮನಕ್ಕೆ ಕಾಯುತ್ತಿದ್ದಾರೆ.

ಮಳೆಯಾಶ್ರಿತ ಭೂ ಪ್ರದೇಶ ಹೊಂದಿರುವ ರೈತರ ಸಂಖ್ಯೆ ತಾಲೂಕಿನಲ್ಲಿ ಹೆಚ್ಚಾಗಿದೆ.ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು, ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ತಾಲೂಕಿನಲ್ಲಿ ಬೆಳೆಯಲಾಗುತ್ತಿದೆ. ಸೂಕ್ತ ದಾಖಲೆಗಳನ್ನು ನೀಡಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಬಹುದಾಗಿದೆ. ಯಾವುದೇ ಕಾರಣಕ್ಕೂ ಬಿತ್ತನೆ ಬೀಜದ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಇಲಾಖೆ ಕೈಗೊಂಡಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್.ಬಿ. ಲಮಾಣಿ, ಶೋಭಾ ಧರಣಿ ಸೇರಿ ಇತರ ಸಿಬ್ಬಂದಿ ಹಾಗೂ ಬಿತ್ತನೆ ಬೀಜ ಪಡಯಲು ಬಂದ ರೈತರು ಹಾಜರಿದ್ದರು.