ಸಮಾಜದಲ್ಲಿರುವ ಜಾತಿ, ಜಾತಿಗಳ ನಡುವಿನ ಅಂತರವನ್ನು ದೂರ ಮಾಡುವ ಉದ್ದೇಶದಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಸಮುದಾಯದ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾತಿ

ಬೆಳ್ತಂಗಡಿ: ಸಮಾಜದಲ್ಲಿರುವ ಜಾತಿ, ಜಾತಿಗಳ ನಡುವಿನ ಅಂತರವನ್ನು ದೂರ ಮಾಡುವ ಉದ್ದೇಶದಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಸಮುದಾಯದ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾತಿ ಹಬ್ಬನಡೆಯಿತು.ಡಾ.ಬಿ.ಆರ್. ಅಂಬೇಡ್ಕರ್ ಆಶಯದಂತೆ ಸಮ ಸಮಾಜದ ನಿರ್ಮಾಣದ ದೃಷ್ಟಿಯಿಂದ ತಾಲೂಕಿನ ೮೧ ಗ್ರಾಮಗಳ ದಲಿತ ಸಮುದಾಯದ ಕಾಲೋನಿಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಸಾಮರಸ್ಯದ ಸಂಕ್ರಾತಿ ಹಬ್ಬ ಆಚರಿಸಿದರು.

ಕಾರ್ಯಕ್ರಮಕ್ಕೆ ಜ.೧೪ರಂದು ವೇಣೂರಿನಲ್ಲಿ ಚಾಲನೆ ದೊರೆತಿದ್ದು, ಗುರುವಾರ ಗುಂಡೂರಿಯಲ್ಲಿ ಸಂಪನ್ನಗೊಂಡಿತು.

ದಲಿತ ಸಮುದಾಯದ ಕಾಲೋನಿಗಳಿಗೆ ಭೇಟಿ ನೀಡಿದ ಶಾಸಕರನ್ನು ಪಟಾಕಿ ಸಿಡಿಸಿ, ಚೆಂಡೆ, ವಾದ್ಯದೊಂದಿಗೆ ಜನರು ಸ್ವಾಗತಿಸಿದರು. ಮಹಿಳೆಯರು ಆರತಿ ಎತ್ತಿ ತಿಲಕವನ್ನು ನಿಟ್ಟು, ಹೂವಿನ ಮಾಲೆ ಹಾಕಿ ಬರಮಾಡಿಕೊಂಡರು.

ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶಾಸಕರು ಪುಷ್ಪರ್ಚಾನೆಗೈದರು. ಬಳಿಕ ಮಾತನಾಡಿದ ಅವರು ಜನರಿಗೆ ಸಾಮರಸ್ಯದ ಸಂಕ್ರಾತಿಯ ವಿಶೇಷತೆ ಸಾರುವ ಪ್ರಯತ್ನ ಮಾಡುತ್ತಿದ್ದೇನೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಏಕತೆ ಮೂಡಿಸಲು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಜೀವದ ಕೊನೆಯ ಉಸಿರಿರುವರೆಗೂ ದಲಿತ ಸಮಾಜದ ಬಂಧುಗಳ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ತಾಲೂಕಿನ ವೇಣೂರು, ಬಜಿರೆ, ಕರಿಮಣೇಲು, ಮೂಡುಕೋಡಿ, ಅಂಡಿಂಜೆ, ಕೊಕ್ರಾಡಿ, ಸಾವ್ಯ, ಪೆರಾಡಿ, ಮರೋಡಿ, ಕುತ್ಲೂರು, ನಾರಾವಿ, ಕೊಯ್ಯೂರು, ಕಳಿಯ, ಮಚ್ಚಿನ, ಪಾರೆಂಕಿ, ಕುಕ್ಕಳ, ಮಾಲಾಡಿ, ಸೋಣಂದೂರು, ಕುವೆಟ್ಟು,ಓಡಿಲ್ನಾಳ, ಶಿಶಿಲ, ಶಿಬಾಜೆ, ರೆಖ್ಯಾ, ಅರಸಿನಮಕ್ಕಿ, ಕಳೆಂಜ, ನಿಡ್ಲೆ, ಉಜಿರೆ ಕಲ್ಮಂಜ, ಮುಂಡಾಜೆ, ಪುದುವೆಟ್ಟು, ನೆರಿಯ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ಬಂದಾರು, ಕಣಿಯೂರು, ಉರುವಾಲು, ತಣ್ಣೀರುಪಂತ, ಪುತ್ತಿಲ, ಬಾರ್ಯ, ತೆಕ್ಕಾರು, ಕರಾಯ, ಇಳಂತಿಲ, ಮೊಗ್ರು, ನಿಟ್ಟಡೆ, ಕುಕ್ಕೇಡಿ, ಗರ್ಡಾಡಿ, ಪಡಂಗಡಿ, ನಾಲ್ಕೂರು, ತೆಂಕಕಾರಂದೂರು, ಪಿಲ್ಯ, ಸುಲ್ಕೇರಿ, ಸುಲ್ಕೇರಿಮೊಗ್ರು, ಲಾಯಿಲ, ನಡ, ಕನ್ಯಾಡಿ, ಇಂದಬೆಟ್ಟು, ಕಡಿರುದ್ಯಾವರ, ಮಲವಂತಿಗೆ, ಮಿತ್ತಬಾಗಿಲು, ನಾವೂರು, ಕೊಕ್ಕಡ ಪಟ್ರಮೆ, ಧರ್ಮಸ್ಥಳ, ಬೆಳಾಲು, ಬೆಳ್ತಂಗಡಿ ನಗರದಲ್ಲಿ ಈಗಾಗಲೇ ಸಾಮರಸ್ಯದ ಸಂಕ್ರಾತಿ ಆಚರಣೆ ನಡೆದಿದೆ. ಜ.೨೨ ರಂದು ಮೇಲಂತಬೆಟ್ಟು, ಸವಣಾಲು, ಶಿರ್ಲಾಲು-ಕರಂಬಾರು, ಅಳದಂಗಡಿ, ಕಾಶಿಪಟ್ಣ, ಬಡಕೋಡಿ, ಹೊಸಂಗಡಿ, ಆರಂಬೋಡಿ, ಗುಂಡೂರಿಯಲ್ಲಿ ನಡೆಯಿತು.

ದಲಿತರ ಸಂಕಷ್ಟಕ್ಕೆ ಸ್ಪಂದನೆ, ಸಂಸದ ಭಾಗಿ

ಜಾತಿ, ಜಾತಿ ನಡುವಿನ ವೈರುಧ್ಯ ದೂರ ಸರಿಸುವ ಪ್ರಯತ್ನದ ಸಲುವಾಗಿ ದಲಿತ ಸಮುದಾಯ ಮನೆಗಳಿಗೆ ಭೇಟಿ ನೀಡಿದ ಶಾಸಕರು ಅವರೊಂದಿಗೆ ಬೆರೆತು ಚಾ, ತಿಂಡಿ, ಊಟ ಸವಿದು, ಆ ಕುಟುಂಬಗಳ ಕಷ್ಟ ನೋವು, ಖಷಿಗಳಿಗೆ ಕಿವಿಯಾಗಿ ಆ ಕುಟುಂಬಗಳಿಗೆ ಉಡುಗೊರೆ ವಿತರಿಸಿದರು. ಶಾಸಕರೊಂದಿಗೆ ಅವರ ಪತ್ನಿ ಡಾ. ಸ್ವೀಕೃತಾ, ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೈ ಜೋಡಿಸಿದರು.