- ನನ್ನನ್ನು ಹಿಂದಿನಿಂದಲೂ ತಮ್ಮ ಮನೆ ಮಗನಂತೆ ಕಂಡಿದ್ದಾರೆ: ಕಾಂಗ್ರೆಸ್ ಅಭ್ಯರ್ಥಿ ಮನದಾಳ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ವಿಧಾನಸಭೆಯ ಕಳೆದ ಚುನಾವಣೆಯಲ್ಲಿ ಅಜ್ಜ ದಿವಂಗತ ಶಾಮನೂರು ಶಿವಶಂಕರಪ್ಪ, ತಂದೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಕಳೆದ ಲೋಕಸಭೆ ಚುನಾವಣೆಯಲ್ಲಿ ತಾಯಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಬರಿಗಾಲಲ್ಲಿ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್ ಪಕ್ಷದ ಸಮರ್ಥ ಎಂ.ಶಾಮನೂರು ಈಗ ದಕ್ಷಿಣ ಕ್ಷೇತ್ರ ಅಭ್ಯರ್ಥಿಯಾಗಿದ್ದಾರೆ. ತಮ್ಮ ನಂಬಿಕೆಯಂತೆ ಭಾನುವಾರ ಬೆಳಗ್ಗೆಯಿಂದ ಬರಿಗಾಲಿನಲ್ಲಿಯೇ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.ನಗರದ ದಕ್ಷಿಣ ಕ್ಷೇತ್ರದ ಕುರುಬರ ಕೇರಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪಾಲಿಕೆ ಮಾಜಿ ಸದಸ್ಯ ಜಿ.ಟಿ.ಪ್ರಕಾಶ, ಜಮ್ಮನಹಳ್ಳಿ ನಾಗರಾಜ ಇತರರ ನಿವಾಸಕ್ಕೆ ಪಕ್ಷದ ಅಭ್ಯರ್ಥಿ ಸಮರ್ಥ ಎಂ. ಶಾಮನೂರು ಪಕ್ಷದ ಮುಖಂಡರು, ಬೆಂಬಲಿಗರು, ಯುವ ಮುಖಂಡರು, ಕಾರ್ಯಕರ್ತರ ಸಮೇತ ತೆರಳಿ, ಬೆಂಬಲ ಕೋರಿ, ಮತಯಾಚಿಸಿದರು.
ತಮ್ಮ ನಿವಾಸಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರುಗೆ ಕುರುಬ ಸಮಾಜದ ಮುಖಂಡರು, ಪಕ್ಷದ ಮುಖಂಡರು ಹಾರ ಹಾಕಿ, ಸನ್ಮಾನಿಸಿದರು. ಇದೇ ವೇಳೆ ಸಮರ್ಥ ಬೆಂಬಲಿಗರು, ಕಾರ್ಯಕರ್ತರು ಜೈಕಾರ ಕೂಗಿದರು.ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದೇನೆ. ಅಭ್ಯರ್ಥಿಯಾಗುವ ಮುಂಚಿನಿಂದಲೂ ಎಲ್ಲರೂ ತಮ್ಮ ಮನೆ ಮಗ ಅಂತಾ ಒಪ್ಪಿಕೊಂಡಿದ್ದಾರೆ. ನಾನು ಈ ಎಲ್ಲರ ಮನೆಗೆ ಆಗಾಗ ಬರುತ್ತಿರುತ್ತೇನೆ. ಈ ಎಲ್ಲರೂ ನಮ್ಮ ಮನೆಗೆ ಬರುತ್ತಿರುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ನಾವು ಚುನಾವಣೆ ಮಾಡುತ್ತೇವೆ ಎಂದರು.
ಚುನಾವಣೆ ಸಂದರ್ಭದಲ್ಲಿ ಆಕಾಂಕ್ಷಿಗಳು ಇರುವುದು ಸಹಜ. ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಚುನಾವಣೆ ಮಾಡುತ್ತೇನೆ. ಕ್ಷೇತ್ರದ ಎಲ್ಲಾ ಕಡೆಗೂ ನಾನು ಹೋಗಿ ಮತಯಾಚಿಸುತ್ತೇನೆ. ಮಾ.23ರಂದು ದುಗ್ಗಮ್ಮ ದೇವಸ್ಥಾನ, ಹಜರತ್ ಷಾವಲಿ ದರ್ಗಾದಲ್ಲಿ ಪೂಜೆ ಸಲ್ಲಿಸಿ, ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಾಮಪತ್ರ ಸಲ್ಲಿಸಲು ತೆರಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭ ಯುವ ಮುಖಂಡರಾದ ಆರ್.ಟಿ.ಪ್ರಶಾಂತ, ಶಂಭು ಉರೇಕೊಂಡಿ, ರಾಘವೇಂದ್ರ ಗೌಡ ಇತರರು ಇದ್ದರು.
- - --22ಕೆಡಿವಿಜಿ6, 7.ಜೆಪಿಜಿ:
ದಾವಣಗೆರೆ ಕುರುಬರ ಕೇರಿಯಲ್ಲಿ ಕುರುಬ ಸಮಾಜದ ಮುಖಂಡರ ಮನೆಗೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ. ಶಾಮನೂರು ಭೇಟಿ ನೀಡಿದ ವೇಳೆ ಜಮ್ನಳ್ಳಿ ನಾಗರಾಜ, ಮಂಜುನಾಥ ತಕ್ಕಡಿ, ಚಂದ್ರು ದೀಟೂರು, ಜಿ.ಟಿ.ಪ್ರಕಾಶ ಇತರರು ಸನ್ಮಾನಿಸಿದರು.