ಸಾರಾಂಶ
ಭಾರತದ ಇತಿಹಾಸದಲ್ಲಿ ಅತ್ಯಂತ ಶೌರ್ಯ, ಧೈರ್ಯ, ಸ್ವಾಭಿಮಾನ, ಸಂಸ್ಕೃತಿ, ಸಂಸ್ಕಾರ ಮತ್ತು ಸಾಹಸಗಳಿಗೆ ಹೆಸರಾದ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ಕಥೆ ಕೇಳುತ್ತಿದ್ದರೆ ನಮ್ಮಲ್ಲಿ ಉತ್ಸಾಹ ಉಕ್ಕಿ ಹರಿಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾರತದ ಇತಿಹಾಸದಲ್ಲಿ ಅತ್ಯಂತ ಶೌರ್ಯ, ಧೈರ್ಯ, ಸ್ವಾಭಿಮಾನ, ಸಂಸ್ಕೃತಿ, ಸಂಸ್ಕಾರ ಮತ್ತು ಸಾಹಸಗಳಿಗೆ ಹೆಸರಾದ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ಕಥೆ ಕೇಳುತ್ತಿದ್ದರೆ ನಮ್ಮಲ್ಲಿ ಉತ್ಸಾಹ ಉಕ್ಕಿ ಹರಿಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಭಾನುವಾರ ತಾಲೂಕಿನ ನಿಲಜಿ ಗ್ರಾಮದಲ್ಲಿ ನೂತನ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿಯ ಪ್ರಾಣ ಪ್ರತಿಷ್ಠಾಪಣೆ ಹಾಗೂ ಮೂರ್ತಿಯ ಲೋಕಾರ್ಪಣೆಗೊಳಿಸಿ ಮಾತನಾಡಿ, ಶಿವಾಜಿಯ ಹಿರಿಯ ಮಗ ಸಂಭಾಜಿ ಮಹಾರಾಜ ಬಾಲ್ಯದಿಂದಲೇ ಪಟ್ಟ ಕಷ್ಟ ಕಲ್ಪನಾತೀತ. ಅವರ ಆಯುಷ್ಯವೂ ದೊಡ್ಡದೇನಿಲ್ಲ. ಆದಾಗ್ಯೂ ತಂದೆಯ ಹಾದಿಯಲ್ಲೇ ನಡೆಯುವ ಮೂಲಕ ಹಿಂದು ರಾಷ್ಟ್ರ, ಹಿಂದು ಧರ್ಮ ರಕ್ಷಣೆಗೆ ಹೋರಾಡಿದ ಧೀರ ಅವರು. ಅಂತಹ ಮಹಾನ್ ವ್ಯಕ್ತಿಯ ಮೂರ್ತಿ ಗ್ರಾಮದಲ್ಲಿ ಪ್ರತಿಷ್ಠಾಪನೆಯಾಗಿರುವುದು ಹೆಮ್ಮೆಯ ಸಂಗತಿ. ಮುಂದಿನ ಪೀಳಿಗೆಗೆ ಅವರ ಆದರ್ಶ ಮಾರ್ಗದರ್ಶಕವಾಗಲಿ ಎಂದು ಹೇಳಿದರು.
ರಾಜಹಂಸಗಡದಲ್ಲಿ 2 ವರ್ಷದ ಹಿಂದೆ ₹50 ಲಕ್ಷ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ವಿಶ್ವದ ಬೇರೆ ಬೇರೆ ಕಡೆಗಳಿಂದ ರಾಜಹಂಸಗಡ ನೋಡಲು, ಮಹಾರಾಜರ ಮೂರ್ತಿ ನೋಡಲು ಜನರು ಬರುತ್ತಿದ್ದಾರೆ. ಮಹಾರಾಜರ ಇತಿಹಾಸ, ಸಂಸ್ಕೃತಿ ಅಜರಾಮರಗೊಳಿಸಲು ನಾವೆಲ್ಲ ಸೇರಿ ಕೆಲಸ ಮಾಡಬೇಕಿದೆ. ನಿಲಜಿ ಗ್ರಾಮದಲ್ಲಿ ಇಂದು ದೀಪಾವಳಿ ಹಬ್ಬದಂತೆ ಗೋಚರಿಸುತ್ತಿದೆ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ನಿಲಜಿ ಅಲೌಕಿಕ ಮಂದಿರದ ಶಿವಾನಂದ ಗುರೂಜಿ, ರಮಾಕಾಂತ ಕೊಂಡೂಸ್ಕರ್, ಸುದರ್ಶನ ಶಿಂಧೆ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಜಯವಂತ ಬಾಳೇಕುಂದ್ರಿ ಇತರರು ಇದ್ದರು.