ಸಾರಾಂಶ
ನಮ್ಮ ಸಣ್ಣ ಸಮಾಜದ ಮಹಿಳೆಯರ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಕಾರ್ಯ ಮಾಡುತ್ತಿರುವ ಸಂಭವ ಇರುವುದರಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ನಮಗೆ ರಕ್ಷಣೆ ನೀಡುವ ಕಾರ್ಯ ಮಾಡಬೇಕು
ಲಕ್ಷ್ಮೇಶ್ವರ: ಆದರಳ್ಳಿ ಗವಿಮಠದ ಪೀಠಾಧಿಪತಿ ಕುಮಾರ ಮಹಾರಾಜ ಸ್ವಾಮಿಗಳು ಭೋವಿ ಸಮಾಜವನ್ನು ನಿಂದಿಸುವ ಕಾರ್ಯ ಮಾಡುವ ಮೂಲಕ ನಮ್ಮ ಸಮಾಜಕ್ಕೆ ಅಗೌರವ ತೋರಿಸಿದ್ದಾರೆ.ಗ್ರಾಮದಲ್ಲಿನ ಲಂಬಾಣಿ ಮತ್ತು ಭೋವಿ ಸಮಾಜದ ಜನರು ನಾವುಗಳು ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದು, ಈಗ ಕುಮಾರ ಸ್ವಾಮಿಗಳು ಲಂಬಾಣಿ ಸಮಾಜದವರನ್ನು ಎತ್ತಿಕಟ್ಟುವ ಮೂಲಕ ಎರಡು ಸಮಾಜಗಳ ನಡುವೆ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿರುವುದು ಖಂಡನೀಯ ಎಂದು ಭೋವಿ ಸಮಾಜದ ತಾಲೂಕಾಧ್ಯಕ್ಷ ಮಲ್ಲೇಶ ವಡ್ಡರ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರಳ್ಳಿ ಗ್ರಾಮದಲ್ಲಿ ಕಳೆದ 2-3 ದಿನಗಳ ಹಿಂದೆ ಲಂಬಾಣಿ ಹಾಗೂ ಭೋವಿ ಸಮಾಜದ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು. ಅದನ್ನು ಗ್ರಾಮದ ಎರಡು ಸಮಾಜದ ಹಿರಿಯರು ಸೇರಿಕೊಂಡು ಬಗೆಹರಿಸಿಕೊಳ್ಳಲಾಗಿತ್ತು. ಆದರೆ ಈ ನಡುವೆ ಸ್ವಾಮೀಜಿಗಳು ವಿಡಿಯೋ ಮತ್ತು ಆಡಿಯೋ ಒಂದನ್ನು ಬಿಡುಗಡೆ ಮಾಡಿ ಭೋವಿ ಸಮಾಜದ ಯುವಕರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಲ್ಲದೆ,ಈ ಕುರಿತು ಭಾನುವಾರ ಬೆಳಗ್ಗೆ 10 ಗಂಟೆಗೆ ಗ್ರಾಮದ ಗವಿಮಠದಲ್ಲಿ ಲಂಬಾಣಿ ಸಮಾಜದ ಹಿರಿಯರು ಹಾಗೂ ಯುವಕರ ಸಭೆ ಸೇರಿಸುವ ಕಾರ್ಯ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ ವಿಡಿಯೋದಲ್ಲಿ ಭೋವಿ ಸಮಾಜದ ಯುವಕರ ಸೊಕ್ಕು ಬಾಳ ಆಗೈತಿ ಅದನ್ನು ಹೇಗೆ ಮಣಿಸಬೇಕು ಎಂದು ನಮಗೆ ಗೊತ್ತು ಎಂದು ನಮಗೆ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ನಮಗೆ ಜೀವಿಸಲು ಭಯವಾಗುತ್ತಿದೆ. ನಮ್ಮ ಸಣ್ಣ ಸಮಾಜದ ಮಹಿಳೆಯರ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಕಾರ್ಯ ಮಾಡುತ್ತಿರುವ ಸಂಭವ ಇರುವುದರಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ನಮಗೆ ರಕ್ಷಣೆ ನೀಡುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ನಾಗವ್ವ ವಡ್ಡರ, ಗ್ರಾಪಂ ಮಾಜಿ ಅಧ್ಯಕ್ಷ ಹೊನ್ನಪ್ಪ ವಡ್ಡರ, ಉಮೇಶ ವಡ್ಡರ, ಸಿದ್ದಪ್ಪ ವಡ್ಡರ, ಷಣ್ಮುಖಪ್ಪ ವಡ್ಡರ, ರಮೇಶ ವಡ್ಡರ, ತಿಪ್ಪವ್ವ ಗಾಂಜಿ, ಕಲ್ಮೇಶ ವಡ್ಡರ, ಸಿದ್ದಪ್ಪ ವಡ್ಡರ, ಚೆನ್ನಪ್ಪ ವಡ್ಡರ ಸೇರಿದಂತೆ ಅನೇಕರು ಇದ್ದರು.