ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಘಟನೆಯ ಕುರಿತು ಪ್ರಸ್ತಾಪಿಸಿದ ಅವರು, ತಮ್ಮ ಪುತ್ರನ ನಡೆಗೆ ಸ್ಪಷ್ಟನೆ ನೀಡುವ ಬದಲು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. “ನಾನು ಆಗಿದ್ದರೆ ಮಗನನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದೆ” ಎಂದು ಗಿರೀಶ್ ಹೇಳಿದರು. ನಗರದ ಅಭಿವೃದ್ಧಿ ಬಗ್ಗೆ ಮಾತನಾಡುವ ಸಮೀವುಲ್ಲಾ ಅವರ ಹೇಳಿಕೆಗಳನ್ನು ಪ್ರಶ್ನಿಸಿದ ಗಿರೀಶ್, “ಅವರದೇ ಸರ್ಕಾರ ಇರುವಾಗ ಇತರೆ ವಾರ್ಡ್‌ಗಳಲ್ಲಿ ಸ್ಪರ್ಧಿಸಿ ಜನರ ತೀರ್ಪು ಪಡೆಯಲಿ, ಆಗ ಯಾರು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ” ಎಂದು ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರಸಭೆ ಮಾಜಿ ಅಧ್ಯಕ್ಷ ಎಂ. ಸಮೀವುಲ್ಲಾ ವಿರುದ್ಧ ಮಾಜಿ ಅಧ್ಯಕ್ಷ ಗಿರೀಶ್ ತೀವ್ರ ವಾಗ್ದಾಳಿ ನಡೆಸಿ, ವೈಯಕ್ತಿಕ ಬೆಳವಣಿಗೆಗಾಗಿ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಗರದಲ್ಲಿ ಸಮೀವುಲ್ಲಾ ಪುತ್ರನಿಂದ ನಡೆದ ಹಲ್ಲೆ ಪ್ರಕರಣವು ಸಮೀವುಲ್ಲಾ ಕುಟುಂಬದ ದಬ್ಬಾಳಿಕೆಗೆ ಉದಾಹರಣೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಘಟನೆಯ ಕುರಿತು ಪ್ರಸ್ತಾಪಿಸಿದ ಅವರು, ತಮ್ಮ ಪುತ್ರನ ನಡೆಗೆ ಸ್ಪಷ್ಟನೆ ನೀಡುವ ಬದಲು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. “ನಾನು ಆಗಿದ್ದರೆ ಮಗನನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದೆ” ಎಂದು ಗಿರೀಶ್ ಹೇಳಿದರು. ನಗರದ ಅಭಿವೃದ್ಧಿ ಬಗ್ಗೆ ಮಾತನಾಡುವ ಸಮೀವುಲ್ಲಾ ಅವರ ಹೇಳಿಕೆಗಳನ್ನು ಪ್ರಶ್ನಿಸಿದ ಗಿರೀಶ್, “ಅವರದೇ ಸರ್ಕಾರ ಇರುವಾಗ ಇತರೆ ವಾರ್ಡ್‌ಗಳಲ್ಲಿ ಸ್ಪರ್ಧಿಸಿ ಜನರ ತೀರ್ಪು ಪಡೆಯಲಿ, ಆಗ ಯಾರು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ” ಎಂದು ಸವಾಲು ಹಾಕಿದರು.ನಗರಸಭೆಯನ್ನು ಆರ್ಥಿಕ ಲಾಭದ ಸಾಧನವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು. ನೂತನ ಲೇಔಟ್ ನಿರ್ಮಾಣದ ಸಂದರ್ಭದಲ್ಲಿ ಖಾತೆಗಳಿಗೆ ಹಣ ವಸೂಲಿ ಮಾಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಗಂಭೀರ ಆರೋಪಿಸಿದರು. ಶಾಸಕ ಶಿವಲಿಂಗೇಗೌಡ ಅವರ ರಾಜಕೀಯ ಭವಿಷ್ಯದೊಂದಿಗೆ ಸಮೀವುಲ್ಲಾ ಅವರ ರಾಜಕೀಯವೂ ಸಂಬಂಧಿಸಿದೆ ಎಂದು ಹೇಳಿದ ಗಿರೀಶ್, ಸಮುದಾಯದವರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಒಗ್ಗಟ್ಟಿನಿಂದ ಇರಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡ ರಮೇಶ್ ಮಾತನಾಡಿ, ನಗರದಲ್ಲಿ ಮೂಲಭೂತ ಸೌಲಭ್ಯಗಳು ಸಮೀವುಲ್ಲಾ ಬರುವ ಮೊದಲು ಇದ್ದವು, ನಂತರ ವಿಶೇಷ ಅಭಿವೃದ್ಧಿ ಕಂಡಿಲ್ಲ ಎಂದು ಆರೋಪಿಸಿದರು. “ಅಭಿವೃದ್ಧಿ ಎಂದರೆ ಅದು ಸಾರ್ವಜನಿಕರ ತೆರಿಗೆ ಹಣದಿಂದಲೇ ಆಗಿದೆ, ವೈಯಕ್ತಿಕ ಸಾಧನೆ ಅಲ್ಲ” ಎಂದು ಹೇಳಿದರು. ನಗರಸಭಾ ಸದಸ್ಯ ಹರ್ಷವರ್ಧನ್ ಮಾತನಾಡಿ, ನಗರಸಭೆಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಅವ್ಯವಹಾರಗಳು ನಡೆದರೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ನಗರಸಭೆಯನ್ನು ಕೆಲವರು ವ್ಯವಹಾರಿಕ ಕೇಂದ್ರವಾಗಿ ಬಳಸಿಕೊಂಡಿರುವ ಪರಿಸ್ಥಿತಿ ಕಂಡುಬಂದಿದ್ದು, ಆ ರೀತಿಯ ಪ್ರವೃತ್ತಿಗೆ ಇನ್ನು ತೆರೆ ಬೀಳಬೇಕು ಎಂದು ಹೇಳಿದರು.ನಗರಸಭೆ ಜನರ ಸೇವೆಗೆ ಇರುವ ಸಂಸ್ಥೆಯಾಗಿದ್ದು, ಅದನ್ನು ವೈಯಕ್ತಿಕ ಲಾಭಕ್ಕಾಗಿ ಬಳಸುವುದು ಸರಿಯಲ್ಲ. ಜನರು ನಮಗೆ ನೀಡಿರುವ ಜವಾಬ್ದಾರಿಯನ್ನು ಗೌರವಿಸಿ, ನಗರಾಭಿವೃದ್ಧಿ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡುವಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಇನ್ನಾದರೂ ಎಲ್ಲರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ನಗರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು. ಪಾರದರ್ಶಕತೆ ಹಾಗೂ ನಿಷ್ಠೆಯಿಂದ ಆಡಳಿತ ನಡೆಸಿದಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.ಈ ವೇಳೆ ಮುಖಂಡರಾದ ರಮೇಶ್ ನಾಯ್ಡು, ಕೋಟಿ, ರಮೇಶ್ ಹಾಗೂ ಕರವೇ ನಗರಾಧ್ಯಕ್ಷ ಸಂತೋಷ್ ಉಪಸ್ಥಿತರಿದ್ದರು.