ಆಟೋ ಗ್ಯಾಸ್ ದರ ಮತ್ತೆ ಹೆಚ್ಚಳ ಖಂಡಿಸಿ ಆಟೋ ಚಾಲಕರು ಶುಕ್ರವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರಬರಾಜು ಕೊರತೆಯ ನಡುವೆ ಆಟೋ ಗ್ಯಾಸ್ ದರ ನಗರದ ಕೆಲವು ಖಾಸಗಿ ಬಂಕ್‌ಗಳಲ್ಲಿ 20 ರು.ವರೆಗೆ ಏರಿಕೆಯಾಗಿದ್ದು, ಆಟೋ ಚಾಲಕರಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ. ಈ ನಡುವೆ ಗ್ಯಾಸ್ ಅಲಭ್ಯತೆ ಮತ್ತು ದರ ಏರಿಕೆ ಖಂಡಿಸಿ ಆಟೋ ಚಾಲಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ಮುಖಂಡ ಬಿ.ಎನ್.ಯೋಗಾನಂದ, ಆಟೋ ಚಾಲಕರು ದಿನನಿತ್ಯ ದುಡಿಮೆ ಮೇಲೆ ತಮ್ಮ ಬದುಕನ್ನು ಕಂಡು ಕೊಂಡಿರುತ್ತಾರೆ. ಬಂಕ್‌ನ ಮಾಲೀಕರು ಸರಬರಾಜು ಕೊರತೆಯನ್ನು ಬಂಡವಾಳ ಮಾಡಿಕೊಂಡು ಮನಬಂದಂತೆ ಎಲ್ಪಿಜಿ ದರ ಏರಿಸುತ್ತಿರುವುದು ಸರಿಯಲ್ಲ. ಹೀಗೆ ಮುಂದುವರೆದರೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಏಕರೂಪ ಬೆಲೆಯನ್ನು ನಿಗದಿಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ದರ ಹೆಚ್ಟಳ ಫಲಕ

ಯುದ್ಧದ ಕಾರಣದಿಂದ ಎಲ್ಪಿಜಿ ಸರಬರಾಜು ಸಮಸ್ಯೆಯಾಗಿ ಕಂಪನಿಗಳು ದರ ಹೆಚ್ಚಿಸಿವೆ. ಹೀಗಾಗಿ, ಅನಿವಾರ್ಯವಾಗಿ ದರ ಹೆಚ್ಚಿಸಲಾಗಿದೆ ಎಂದು ಶೇಷಾದ್ರಿಪುರದ ಖಾಸಗಿ ಆಟೋ ಗ್ಯಾಸ್ ಬಂಕ್‌ನಲ್ಲಿ ದರ ಹೆಚ್ಚಳದ ಫಲಕವನ್ನು ಅಳವಡಿಸಲಾಗಿತ್ತು. ನಗರದ ಅನೇಕ ಬಂಕ್‌ಗಳಲ್ಲಿ ಗ್ಯಾಸ್ ಸಮಸ್ಯೆ ಶುಕ್ರವಾರವೂ ಮುಂದುವರಿದಿತ್ತು. ನಗರದಲ್ಲಿ ಪ್ರತಿ ಕೇಜಿಗೆ ಗರಿಷ್ಠ 120 ರು.ವರೆಗೆ ಮಾರಾಟವಾಗುತ್ತಿದೆ.