ಸಾರಾಂಶ
ಮುಕ್ತ 510 ಕೆ.ಜಿ. ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶ್ರೀ ವಿಷ್ಣು ಅಡ್ಕ ಪ್ರಥಮ ಸ್ಥಾನ ಗಳಿಸಿದರೆ, ಶ್ರೀ ವಿಷ್ಣು ಸಂಪ್ಯ ದ್ವಿತೀಯ ಸ್ಥಾನ ಪಡೆಯಿತು. ಅಡೂರು ಫ್ರೆಂಡ್ಸ್ ತಂಡ ತೃತೀಯ ಸ್ಥಾನ ಹಾಗೂ ಶ್ರೀ ಮಹಾವಿಷ್ಣು ಬಳಗ ಸಂಪಾಜೆ ನಾಲ್ಕನೇ ಸ್ಥಾನ ಪಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನೆಹರು ಯುವ ಕೇಂದ್ರ ಕೊಡಗು ಜಿಲ್ಲೆ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾ ಯುವ ಒಕ್ಕೂಟ ಮಡಿಕೇರಿ ಹಾಗೂ ಸಂಪಾಜೆಯ ಪಯಸ್ವಿನಿ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದ ಕೀಲಾರು ಗದ್ದೆಯಲ್ಲಿ ಆಯೋಜಿಸಲಾದ ಕೆಸರು ಗದ್ದೆ ಕ್ರೀಡಾಕೂಟವನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸತ್ಯನಾರಾಯಣ ಭಟ್ ಉದ್ಘಾಟಿಸಿದರು.ಹಿರಿಯ ನಾಗರಿಕರ ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆದರ್ಶ್ ಫ್ರೆಂಡ್ಸ್ ಚೆಡವು ತಂಡ ಪ್ರಶಸ್ತಿಗಳಿಸಿತು. ಶ್ರೀ ಮಹಾವಿಷ್ಣು ಬಳಗ ಸಂಪಾಜೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಮುಕ್ತ 510 ಕೆ.ಜಿ. ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶ್ರೀ ವಿಷ್ಣು ಅಡ್ಕ ಪ್ರಥಮ ಸ್ಥಾನ ಗಳಿಸಿದರೆ, ಶ್ರೀ ವಿಷ್ಣು ಸಂಪ್ಯ ದ್ವಿತೀಯ ಸ್ಥಾನ ಪಡೆಯಿತು. ಅಡೂರು ಫ್ರೆಂಡ್ಸ್ ತಂಡ ತೃತೀಯ ಸ್ಥಾನ ಹಾಗೂ ಶ್ರೀ ಮಹಾವಿಷ್ಣು ಬಳಗ ಸಂಪಾಜೆ ನಾಲ್ಕನೇ ಸ್ಥಾನ ಪಡೆಯಿತು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಆದರ್ಶ ಫ್ರೆಂಡ್ಸ್ ಚೆಡವು ಪ್ರಥಮ ಸ್ಥಾನ ಪಡೆದರೆ, ಪಯಸ್ವಿನಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಾಲಿಬಾಲ್ ಟೂರ್ನಿಯಲ್ಲಿ ಆದರ್ಶ್ ಫ್ರೆಂಡ್ಸ್ ಪ್ರಥಮ ಸ್ಥಾನ, ಪಯಸ್ವಿನಿ ಸಂಪಾಜೆ ದ್ವಿತೀಯ ಸ್ಥಾನ ಪಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಯಸ್ವಿನಿ ಯುವಕ ಸಂಘ ಅಧ್ಯಕ್ಷ ತೀರ್ಥ ಪ್ರಸಾದ್ ದುಗ್ಗಳ ವಹಿಸಿದ್ದರು. ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲೋಕ ನಾಯಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಜಯಕುಮಾರ್ ಚಿದ್ಕಾರ್, ನವೀನ್ ಕೊಯನಾಡು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ಭೂಸೇನೆಯ ಬಿಪಿನ್ ದೇವಜನ ಅವರನ್ನು ಸನ್ಮಾನಿಸಲಾಯಿತು.