ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿ.ವಿ.ವಿ ಸಂಘದ ಪಿ.ಎಮ್.ಎನ್.ಎಮ್ ದಂತ ಮಹಾವಿದ್ಯಾಲಯ ರಾಜ್ಯದ ಪ್ರತಿಷ್ಠಿತ ಡೆಂಟಲ್ ಕಾಲೇಜು ಎನ್ನುವ ಗೌರವಕ್ಕೆ ಪಾತ್ರವಾಗಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಗತ್ಯವಾದ ಎಲ್ಲ ಸೌಕರ್ಯ ಒದಗಿಸಲಾಗಿದೆ. ಡೆಂಟಲ್ ಆಸ್ಪತ್ರೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿಂದಿನ ರೂವಾರಿ ಹಾಗೂ ಉತ್ತರ ಕರ್ನಾಟಕದಲ್ಲಿ ವೈದ್ಯಕೀಯ ಸಂಸ್ಥೆಗಳ ಸಾಮ್ರಾಜ್ಯ ನಿರ್ಮಾಣ ಮಾಡಿದ ಶ್ರೇಯಸ್ಸು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠರಿಗೆ ಸಲ್ಲುತ್ತದೆ ಎಂದು ಬಿ.ವಿ.ವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಹೇಳಿದರು.ಬಿ.ವಿ.ವಿ ಸಂಘದ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಬಿ.ಡಿ.ಎಸ್ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜವಾಬ್ದಾರಿ ಸಂಸ್ಥೆಗೆ ಸೇರಿದ್ದು. ಪಾಲಕರು ಚಿಂತೆ ಮಾಡುವ ಅಗತ್ಯವಿಲ್ಲ. ಡೆಂಟಲ್ ಕಾಲೇಜಿನಲ್ಲಿ ಶಿಸ್ತು, ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಕುರಿತಾದ ಕಾಳಜಿಗೆ ಮಹತ್ವ ನೀಡಲಾಗುತ್ತಿದೆ. ಓದಿಗೆ ಪ್ರಾಮುಖ್ಯತೆ ನೀಡಿ ವೃತ್ತಿಯಲ್ಲಿ ಶ್ರೇಷ್ಠವಾದದ್ದನ್ನು ಸಾಧಿಸಿ ಎಂದು ನುಡಿದರು.ಅತಿಥಿಯಾಗಳಾದ ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ (ಚಿತ್ತರಗಿ) ವಸತಿ ನಿಲಯದ ಮತ್ತು ಕ್ರೀಡಾ ಸೌಲಭ್ಯಗಳ ಕುರಿತು ಹೇಳಿದರು. ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ ಅತಿಥಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ಸ್ವಾಗತಿಸಿ ಕಾಲೇಜಿನ ಬೆಳವಣಿಗೆ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಪ್ರಥಮ ವರ್ಷದ ಎಲ್ಲ ವಿಭಾಗಗಳ ಮುಖ್ಯಸ್ಥರಿಂದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ವಿಭಾಗಗಳ ಪರಿಚಯ ಮಾಡಿಕೊಡಲಾಯಿತು. ಡಾ.ಜ್ಯೋತಿ ಪಟ್ಟಣಶೆಟ್ಟಿ ಮತ್ತು ಡಾ.ಭೀಮಪ್ಪ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮ ತಿಳಿಸಿದರು. ಡಾ.ಭಾಗ್ಯಶ್ರೀ ವನಕಿ ನಿರೂಪಿಸಿ, ಡಾ.ಮಹೇಶ ಹಿರೇಗೌಡರ ವಂದಿಸಿದರು. ವೈದ್ಯ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ, ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.