ಸಾರಾಂಶ
ದೇಶದ ಹಲವು ದೇವಾಲಯಗಳು ಸರ್ಕಾರದ ಕಪಿಮುಷ್ಟಿಯಲ್ಲಿವೆ. ಅಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿಲ್ಲ. ಭಕ್ತರಿಂದ ಬಂದ ಕಾಣಿಕೆಗಳನ್ನು ಸರ್ಕಾರ ಸರಿಯಾದ ರೀತಿಯಲ್ಲಿ ಸದ್ವಿನಿಯೋಗ ಮಾಡುತ್ತಿಲ್ಲ. ಹೀಗಾಗಿ ಸನಾತನ ಬೋರ್ಡ್ ಅಗತ್ಯವಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ದೇಶದಲ್ಲಿ ಸನಾತನ ಬೋರ್ಡ್ ಅಗತ್ಯವಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಹೇಳಿದರು. ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಶ್ರೀಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿ, ದೇಶದ ಹಲವು ದೇವಾಲಯಗಳು ಸರ್ಕಾರದ ಕಪಿಮುಷ್ಟಿಯಲ್ಲಿವೆ. ಅಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಭಕ್ತರಿಂದ ಬಂದ ಕಾಣಿಕೆಗಳನ್ನು ಸರ್ಕಾರ ಸರಿಯಾದ ರೀತಿಯಲ್ಲಿ ಸದ್ವಿನಿಯೋಗ ಮಾಡುತ್ತಿಲ್ಲ. ಹೀಗಾಗಿ ಸನಾತನ ಬೋರ್ಡ್ ಅಗತ್ಯವಿದೆ ಎಂದು ಪೇಜಾವರ ಶ್ರೀಗಳು ಪುನರುಚ್ಚರಿಸಿದರು.
ಆಶೀರ್ವಚನ ಮುನ್ನ ಆಗಮಿಸಿದ ಶ್ರೀಗಳನ್ನು ಶ್ರೀ ಹೊಳೆ ಆಂಜನೇಯ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ಪ್ರದೀಪಆಚಾರ್ಯ, ಸಹ ಅರ್ಚಕ ಸುರೇಶ ಆಚಾರ್ಯ ಹಾಗೂ ಅರ್ಚಕ ವೃಂದ ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಪೂರ್ಣ ಕುಂಭ ಸ್ವಾಗತ ನೀಡಿದರು.ನಂತರ ಪೇಜಾವರ ಶ್ರೀಗಳು ಶ್ರೀ ಹೊಳೆ ಆಂಜನೇಯ ಸ್ವಾಮಿ ಮೂಲ ವಿಗ್ರಹಕ್ಕೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇಗುಲದಲ್ಲಿ ಪ್ರಸಾದ ಸ್ವೀಕರಿಸಿ ತೆರಳಿದರು.
ಇಂದು ರತ್ನಮಾಂಗಲ್ಯ ಸಾಮಾಜಿಕ ನಾಟಕಮಳವಳ್ಳಿ: ತಾಲೂಕಿನ ಮಾದಹಳ್ಳಿಯಲ್ಲಿ ತಿರುಪತಿ ತಿರುಮಲ ಯಾತ್ರಾ ಪ್ರಯುಕ್ತ ಏ.19ರಂದು ರತ್ನ ಮಾಂಗಲ್ಯ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ. ಶ್ರೀ ಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಗ್ರಾಮದ ಮಾರಮ್ಮನ ರಂಗ ಮಂದಿರದಲ್ಲಿ ಎನ್.ಎಸ್.ಜ್ಯೋಷಿ ವಿರಚಿತ ಹಾಗೂ ಎಂ.ಟಿ.ಉಜ್ಜನೀಗೌಡ ನಿರ್ದೇಶನದಲ್ಲಿ ಏ.19ರ ರಾತ್ರಿ 9ಗಂಟೆಗೆ ನಾಟಕ ಪ್ರದರ್ಶನಗೊಳ್ಳಲಿದೆ.ಇಂದು ಕುಂದುಕೊರತೆ ಸಭೆ
ಮಳವಳ್ಳಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏ.19ರಂದು ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಸಭೆ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಭೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಉದ್ಘಾಟಿಸಲಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ ಪಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗಿಯಾಗಿ ತಮ್ಮ ಕುಂದು ಕೊರತೆಗಳು ಇದ್ದಲ್ಲಿ ಅಹವಾಲುಗಳನ್ನು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.