ಸನಾತನ ಹಿಂದೂ ಧರ್ಮ, ಸಂಸ್ಕೃತಿ ಯಾರಿಗೂ ಕೇಡು ಬಯಸಲ್ಲ: ನಿಶ್ಚಲಾನಂದನಾಥ ಸ್ವಾಮೀಜಿ

| Published : Nov 17 2025, 12:45 AM IST

ಸನಾತನ ಹಿಂದೂ ಧರ್ಮ, ಸಂಸ್ಕೃತಿ ಯಾರಿಗೂ ಕೇಡು ಬಯಸಲ್ಲ: ನಿಶ್ಚಲಾನಂದನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಸನಾತನ ಧರ್ಮ, ಸಂಸ್ಕೃತಿಯ ಬಗ್ಗೆ ಕೆಲವರು ಅವಹೇಳನಕಾರಿಯಾಗಿ, ತುಚ್ಚವಾಗಿ ಮಾತನಾಡುತ್ತಾರೆ. ದೇಶದ ಬಗ್ಗೆ ಹೋರಾಟ ನಡೆಸುವವರ ಬಗ್ಗೆ ಹಗುವಾಗಿ ಮಾತನಾಡುತ್ತಾರೆ. ನಮ್ಮ ಹಿಂದೂ ಧರ್ಮ, ಸಂಸ್ಕೃತಿ ಬೇರೆ ಯಾವ ಧರ್ಮ, ಸಂಸ್ಕೃತಿಗೂ ಕೇಡು ಬಯಸುವ ಕೆಲಸ ಮಾಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಭಾರತೀಯ ಸನಾತನ ಹಿಂದೂ ಧರ್ಮ, ಸಂಸ್ಕೃತಿ ಯಾರಿಗೂ ಕೇಡು ಬಯಸಲ್ಲ. ಬದಲಾಗಿ ಜನರಿಗೆ ಧರ್ಮದ ಪ್ರಜ್ಞೆ ಬೆಳೆಸಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುತ್ತಿದೆ ಎಂದು ಬೆಂಗಳೂರಿನ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಕೃಷ್ಣನಗರದ ಶ್ರೀಬಾಲಶನೇಶ್ವರ ಭಕ್ತ ಮಂಡಳಿ ವತಿಯಿಂದ ಕಡೇ ಕಾರ್ತಿಕ ಮಾಸದ ಅಂಗವಾಗಿ ನಡೆದ ಶ್ರೀನಿವಾಸ ಕಲ್ಯಾಣ, ಗುರುವಂದನೆ ಹಾಗೂ ಲಕ್ಷ ದೀಪೋತ್ಸವದಲ್ಲಿ ದಿವ್ಯಸಾನಿಧ್ಯ ವಹಿಸಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.

ಭಾರತೀಯ ಸನಾತನ ಧರ್ಮ, ಸಂಸ್ಕೃತಿಯ ಬಗ್ಗೆ ಕೆಲವರು ಅವಹೇಳನಕಾರಿಯಾಗಿ, ತುಚ್ಚವಾಗಿ ಮಾತನಾಡುತ್ತಾರೆ. ದೇಶದ ಬಗ್ಗೆ ಹೋರಾಟ ನಡೆಸುವವರ ಬಗ್ಗೆ ಹಗುವಾಗಿ ಮಾತನಾಡುತ್ತಾರೆ. ನಮ್ಮ ಹಿಂದೂ ಧರ್ಮ, ಸಂಸ್ಕೃತಿ ಬೇರೆ ಯಾವ ಧರ್ಮ, ಸಂಸ್ಕೃತಿಗೂ ಕೇಡು ಬಯಸುವ ಕೆಲಸ ಮಾಡುತ್ತಿಲ್ಲ. ಜನರಿಗೆ ಧಾರ್ಮಿಕ ಪ್ರಜ್ಞೆಯ ಜತೆಗೆ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಿದೆ ಎಂದರು.

ಭಾರತೀಯರಲ್ಲಿ ನಂಬಿಕೆಯೇ ಪ್ರಧಾನವಾಗಿದೆ. ತಂದೆ-ತಾಯಿ ಮಕ್ಕಳನ್ನು ನಂಬುತ್ತಾರೆ, ಮಕ್ಕಳು ತಂದೆ-ತಾಯಿ ನಂಬುತ್ತಾರೆ, ಸೊಸೆ ಅತ್ತೆ ಮಾವನನ್ನು ನಂಬುತ್ತಾರೆ. ಹೀಗೆ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ಬಲವಾಗಿದೆ. ನಮ್ಮ ಜನರು ಭಕ್ತಿಯ ಮೂಲಕ ದೇವರನ್ನು ನೋಡುವ ಪ್ರಯತ್ನ ಮಾಡುತ್ತಾರೆ ಎಂದರು.

ಕೆಲವರು ತಮ್ಮ ಮನಸ್ಸಿನಲ್ಲಿ ದೇವರನ್ನು ಪ್ರಾರ್ಥಿಸಿಕೊಂಡರೆ ರೈತಾಪಿ ವರ್ಗದವರು ತಮ್ಮ ಕಾಯಕದಲ್ಲಿ ದೇವರನ್ನು ನೋಡುತ್ತಿದ್ದಾರೆ, ಇದು ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರವಾಗಿದೆ ಎಂದರು.

ಮಕ್ಕಳಿಗೆ ವಿದ್ಯೆ ಜತೆಗೆ ವಿವೇಕವನ್ನು ಕಲಿಸುವ ಕೆಲಸ ಮಾಡಬೇಕು. ಕೇವಲ ವಿಷಯಾಧಾರಿತ ಶಿಕ್ಷಣದಿಂದಲೇ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಮಕ್ಕಳಿಗೆ ವಿವೇಕದ ಜತೆಗೆ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸದೆ ಹೋದರೆ ಸಂಸಾರ, ಮನೆತನ, ಸಮಾಜ ಯಾವುದಕ್ಕೂ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ವಿದ್ಯೆ ವಿವೇಕ ತರಬೇಕು. ವಿವೇಕ ವಿದ್ಯೆಯ ಮೂಲ ಉದ್ದೇಶವಾಗಿರಬೇಕು, ಅಂತಹ ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಿಗೂ ಫಲಕೊಡದೆ ಇರುವುದಿಲ್ಲ ಎಂದರು.

ಚಿತ್ರ ನಿರ್ದೇಶಕ ಎಸ್.ನಾರಾಯಣ್ ಮಾತನಾಡಿ, ಹಿಂದೆ ಗುರುಕುಲದಲ್ಲಿ ನೀಡುತ್ತಿದ್ದ ಸಂಸ್ಕಾರಯುತ ಶಿಕ್ಷಣ ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ನೀಡಬೇಕಾಗಿದೆ. ಮೌಲ್ಯಗಳಿದ್ದ ಶಿಕ್ಷಣದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಪಾಂಡವಪುರಕ್ಕೂ ನನಗೂ ನಂಟಿದೆ. ನಾನು ಇಲ್ಲಿ ಚಿತ್ರೀಕರಣ ಮಾಡಿದ ಎಲ್ಲಾ ಸಿನಿಮಗಳು ಗೆದ್ದಿವೆ. ಒಂದು ಕಾಲದಲ್ಲಿ ನನಗೆ ಇದು ತವರು ಮನೆಯಂತಾಗಿತ್ತು. ನಾನು ತೆಗೆದಿರುವ ಪ್ರತಿಯೊಂದು ಚಿತ್ರದಲ್ಲೂ ಮೌಲ್ಯ, ಸಂಸ್ಕೃತಿ, ಸಂಸ್ಕಾರದ ಜತೆಗೆ ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದೇವೆ ಎಂದರು.

ಇದೇ ವೇಳೆ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿಗಳಿಗೆ ಗುರುವಂದನಾ ನೆರವೇರಿಸಲಾಯಿತು. ಶ್ರೀನಿವಾಸ ಕಲ್ಯಾಣ ನಡೆಸಿ ಮದುವೆ ಆಗದವರಿಗೆ ಕಂಕಣ ಕಟ್ಟಿಸಿದರು. ಹಲವು ಮಹಿಳೆಯರಿಗೆ ಮಡಿಲು ಅಕ್ಕಿ ವಿತರಿಸಲಾಯಿತು. ಕಾರ್ಯಕ್ರಮಕ್ಕು ಮುನ್ನ ಸ್ವಾಮಿಜಿ ಹಾಗು ಗಣ್ಯರನ್ನು ಪೂರ್ಣಕುಂಭದೊಂದಿಗೆ ವೇದಿಕೆಗೆ ಬರಮಾಡಿಕೊಂಡರು.

ಸಮಾರಂಭದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾ ಕುರುಬರ ಸಂಘ ಹಾಗೂ ಟಿಎಪಿಸಿಎಂಎಸ್ ನ ನಿರ್ದೇಶಕ ಹಾರೋಹಳ್ಳಿ ಕೃಷ್ಣ, ಧರ್ಮದರ್ಶಿ ರವಿತೇಜ, ಭಾಗ್ಯವತಿ ಎಸ್.ನಾರಾಯಣ, ಬೆಂಗಳೂರು ವೆಂಕಟೇಶ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಮಂಜುನಾಥ್, ಮುಖಂಡರಾದ ಧನ್ಯಕುಮಾರ್, ಹೊಸಕೋಟೆ ವಿಜಿಕುಮಾರ್, ರಾಜೇಶ್, ಚಂದ್ರಶೇಖರಯ್ಯ, ಕೆರೆತೊಣ್ಣರು ನಂಬಿ ನಾರಾಯಣ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್, ಸೇರಿದಂತೆ ಹಲವರು ಹಾಜರಿದ್ದರು.