ಜಗಳೂರು ತಾಲೂಕಿನ ಅತ್ಯಂತ ಹಿಂದುಳಿದ ಹೋಬಳಿ ಕೇಂದ್ರಗಳಲ್ಲಿ ಒಂದಾದ ಅಣಬೂರು ಗ್ರಾಮಕ್ಕೆ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಅಣಗೂರು ಗ್ರಾಮದ ಮುಖಂಡ ರೇಣುಕೇಶ್ ಒತ್ತಾಯಿಸಿದ್ದಾರೆ.

- ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ: ಗ್ರಾಮ ಮುಖಂಡ ರೇಣುಕೇಶ್‌ - - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಅತ್ಯಂತ ಹಿಂದುಳಿದ ಹೋಬಳಿ ಕೇಂದ್ರಗಳಲ್ಲಿ ಒಂದಾದ ಅಣಬೂರು ಗ್ರಾಮಕ್ಕೆ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಅಣಗೂರು ಗ್ರಾಮದ ಮುಖಂಡ ರೇಣುಕೇಶ್ ಒತ್ತಾಯಿಸಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣಬೂರು ಭಾಗದ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು.

25 ಕಿಮೀ ದೂರ:

ಅಣಬೂರು ಗ್ರಾಮದಿಂದ ತುರ್ತು ಚಿಕಿತ್ಸೆಗೆ ಜಗಳೂರು ಅಥವಾ ದಾವಣಗೆರೆಗೆ ಹೋಗಬೇಕಿದೆ. ಹತ್ತಿರದ ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವೂ ಸುಮಾರು 25 ಕಿ.ಮೀ. ದೂರದಲ್ಲಿದೆ. ತುರ್ತು ಸಂದರ್ಭ ಚಿಕಿತ್ಸೆ ಲಭಿಸದೇ ಜನರಿಗೆ ಪ್ರಾಣಾಪಾಯ ಉಂಟಾಗುತ್ತಿದೆ. ಅಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಆರೋಗ್ಯ ಚಿಕಿತ್ಸೆಗಾಗಿ ಜನರು ಪರದಾಡುವಂತಾಗಿದೆ ಎಂದರು.

ವನ್ಯಜೀವಿಗಳ ಹಾವಳಿ:

ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸಾವಿತ್ರಮ್ಮ ಮಾತನಾಡಿ, ಅಣಬೂರು ಗುಡ್ಡಗಾಡು ಪ್ರದೇಶವಾಗಿದ್ದು, ಕರಡಿ ಹಾಗೂ ಕಾಡುಹಂದಿಗಳ ದಾಳಿ ನಿರಂತರವಾಗಿದೆ. ವಿಷಜಂತುಗಳು ಕಚ್ಚಿದಾಗ ಪ್ರಾಥಮಿಕ ಚಿಕಿತ್ಸೆ ಸಿಗದೇ ಜನರು ಪ್ರಾಣ ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೇ ತೀವ್ರ ತೊಂದರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದಾಖಲೆಗಳಿದ್ದರೂ ಮಂಜೂರಾತಿ ಇಲ್ಲವೇಕೆ?:

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸೋಮಣ್ಣ ಮಾತನಾಡಿ, ಆಸ್ಪತ್ರೆ ನಿರ್ಮಾಣಕ್ಕಾಗಿ 2 ಎಕರೆ ಜಮೀನು ಮೀಸಲಿಡಲಾಗಿದೆ. ಸರ್ಕಾರಕ್ಕೆ ಸಲ್ಲಿಸಬೇಕಾದ ₹1 ಲಕ್ಷವನ್ನು ಠೇವಣಿ ಮಾಡಲಾಗಿದೆ. ದಾಖಲೆಗಳು ಈಗಾಗಲೇ ಜಿಲ್ಲಾಧಿಕಾರಿಗಳ ಹಂತಕ್ಕೆ ತಲುಪಿಸಲಾಗಿದೆ. ಮಾಜಿ ಶಾಸಕ ಟಿ. ಗುರುಸಿದ್ದನಗೌಡರ ಕಾಲದಿಂದಲೂ ಈ ಬೇಡಿಕೆ ಇದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ರಾಜಶೇಖರ್ , ಮಂಜುನಾಥ್, ಬಾಬು ರಾಜೇಂದ್ರ ಪ್ರಸಾದ್, ಸಿದ್ದಮ್ಮನಹಳ್ಳಿ ಉಮೇಶ್, ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.

- - -

-10ಜೆಜಿಎಲ್1:

ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅಣಗೂರು ಗ್ರಾಮದ ಮುಖಂಡ ರೇಣುಕೇಶ್ ಇತರರು ಮಾತನಾಡಿದರು.