ಹಿಂದಿನ ಸರ್ಕಾರದಲ್ಲಿ ಬೀದರ್ ಕ್ಷೇತ್ರಕ್ಕೆ ಅಂಗವಿಕಲರಿಗಾಗಿ 2503 ಮನೆ ಮಂಜೂರು ಮಾಡಿಸಲಾಗಿತ್ತು. ಇನ್ನೂ 5000ಕ್ಕೂ ಹೆಚ್ಚು ಅಂಗವಿಕಲರು ಮನೆ ಇಲ್ಲದೆ ಕಷ್ಟದಲ್ಲಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಅಂಗವಿಕಲರಿಗೆ ಮನೆ ಮಂಜೂರು ಮಾಡಬೇಕೆಂದು ಜೆಡಿಎಸ್ ಮುಖಂಡ ಸೂರ್ಯಕಾಂತ್ ನಾಗಮಾರಪಳ್ಳಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಹಿಂದಿನ ಸರ್ಕಾರದಲ್ಲಿ ಬೀದರ್ ಕ್ಷೇತ್ರಕ್ಕೆ ಅಂಗವಿಕಲರಿಗಾಗಿ 2503 ಮನೆ ಮಂಜೂರು ಮಾಡಿಸಲಾಗಿತ್ತು. ಇನ್ನೂ 5000ಕ್ಕೂ ಹೆಚ್ಚು ಅಂಗವಿಕಲರು ಮನೆ ಇಲ್ಲದೆ ಕಷ್ಟದಲ್ಲಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಅಂಗವಿಕಲರಿಗೆ ಮನೆ ಮಂಜೂರು ಮಾಡಬೇಕೆಂದು ಜೆಡಿಎಸ್ ಮುಖಂಡ ಸೂರ್ಯಕಾಂತ್ ನಾಗಮಾರಪಳ್ಳಿ ಒತ್ತಾಯಿಸಿದರು.ಮಹಾನಗರ ಪಾಲಿಕೆ ಕಚೇರಿ ಎದುರು ಗುರುವಾರ ಬೀದರ್ ಜಿಲ್ಲಾ ಅಂಗವಿಕಲರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಧರಣಿಗೆ ಬೆಂಬಲಿಸಿ ಮಾತನಾಡಿ, ಬೀದರ್ ಕ್ಷೇತ್ರದಲ್ಲಿರುವ ಅಂಗವಿಕಲರಿಗೆ ತಕ್ಷಣ ಮನೆ ಮಂಜೂರು ಮಾಡಬೇಕು. ಅಂಗವಿಕಲರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳಿವೆ. ನೇಮಕಾತಿಯಲ್ಲಿ ಶೇ. 3ರಷ್ಟು ಮೀಸಲಾತಿ ನೀಡಬೇಕು ಎಂಬ ಕಡ್ಡಾಯ ನಿಯಮವೂ ಇದೆ. ಎಲ್ಲ ವರ್ಗದ ನೇಮಕಾತಿಯಲ್ಲಿ ಈ ಆದೇಶ ಪಾಲನೆ ಕಡ್ಡಾಯವಾಗಿದೆ. ಆದಾಗ್ಯೂ ಮನೆ ಮಂಜೂರಾತಿ, ನೇಮಕಾತಿ ಸೇರಿದಂತೆ ಎಲ್ಲ ವಿಷಯಗಳಲ್ಲಿ ವಿಶೇಷಚೇತನರನ್ನು ನಿರ್ಲಕ್ಷಿಸಲಾಗುತ್ತಿದೆ. ಅವರ ಸಮಸ್ಯೆಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಬೇಕು. ಸಮಸ್ಯೆಗಳನ್ನು ಪರಿಹರಿಸಬೇಕು. ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಅಂಗವಿಕಲರ ಸಮಸ್ಯೆ ಪರಿಹಾರಕ್ಕಾಗಿ ಹಿಂದಿನಿಂದಲೂ ಶ್ರಮಿಸುತ್ತಿದ್ದೇನೆ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್‌ನಿಂದಲೂ ಅಂಗವಿಕಲರಿಗೆ ವಿವಿಧ ಸೌಲಭ್ಯ ಒದಗಿಸಲಾಗಿದೆ. ಎಲೆಕ್ಟ್ರಿಕ್ ವೆಹಿಕಲ್, ಸ್ಟಿಕ್, ವ್ಹೀಲ್ ಚೇರ್ ಮುಂತಾದ ಸಾಧನ, ಸಲಕರಣೆಗಳನ್ನು ನೀಡಲಾಗಿದೆ ಎಂದು ಹೇಳಿದರು.ಜಿಲ್ಲಾ ಅಂಗವಿಕಲರ ಹಿತರಕ್ಷಣಾ ಸಮಿತಿಯ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂಗವಿಕಲರಿಗೆ ಮನೆ, ನಿವೇಶನ ಮಂಜೂರು ಮಾಡುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಶಾಹೀನ್ ನಗರದಲ್ಲಿರುವ ಶಾಹೀನ್ ಕಾಲೇಜಿನವರು ರಸ್ತೆಗೆ ತಂತಿ ಬಿಗಿದು ಬಂದ್ ಮಾಡಿದ್ದು, ಇದರಿಂದ ಅಂಗವಿಕಲ ದಂಪತಿ ತೀವ್ರ ಕಷ್ಟಕ್ಕೀಡಾಗಿದ್ದಾರೆ. ರಸ್ತೆ ತೆರವುಗೊಳಿಸಿ, ಅಂಗವಿಕಲ ದಂಪತಿಯ ಸಮಸ್ಯೆ ಪರಿಹರಿಸುವಂತೆ ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ರಸ್ತೆಗೆ ಬಿಗಿದಿರುವ ತಂತಿಯನ್ನು ತೆರವುಗೊಳಿಸಲಾಗಿಲ್ಲ ಎಂದು ಸಂಘದ ಅಧ್ಯಕ್ಷ ರಾಜಪ್ಪ ಎಂ. ಪಾತರಪಳ್ಳಿ ಆರೋಪಿಸಿದರು.ಬೇಡಿಕೆಗಳ ಮನವಿಪತ್ರವನ್ನು ಮಹಾನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಂಜುಕುಮಾರ ಬಿ. ಕೇರಿ, ರಾಜು, ಸಾಯಿ, ಬಸವರಾಜ, ಸಚಿನ್, ಮಣಿಕಂಠ, ಶ್ರೀನಿವಾಸ, ಸೂರ್ಯಾನ್, ಅರುಣ ದೇಶಪಾಂಡೆ, ಎಂಡಿ ಯುಸೂಫ್, ಸಂಗಮೇಶ್, ಅಂಜಲಿ, ಮಾಯಾ, ಸಂತೋಷ, ಬಸ್ಸು, ಬೆಂಜಮಿನ್, ಶಿವಕುಮಾರ, ಓಂಕಾರ ಮುಂತಾದವರು ಪಾಲ್ಗೊಂಡಿದ್ದರು.