ಟೆಂಡರ್ ಕರೆದ ದಿನದಿಂದ 90 ದಿನದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಅಂತಿಮ ಪಟ್ಟಿಯನ್ನು ಪ್ರಕಟಗೊಳಿಸಲು ಇಲಾಖೆ ವಿಳಂಬ ಮಾಡಿತ್ತು.
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಕಳೆದ ಮೂರು ವರ್ಷಗಳಿಂದ ತುಂಗಭದ್ರಾ ನದಿ ತೀರದ ಮರಳಿನ ಬ್ಲಾಕ್ ಟೆಂಡರ್ ಆಗದ ಹಿನ್ನೆಲೆಯಲ್ಲಿ ಜನರಿಗೆ ಸಕಾಲದಲ್ಲಿ ಮರಳು ಸಿಗದೇ ದುಬಾರಿ ಬೆಲೆಗೆ ಖರೀದಿ ಮಾಡುವ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ.ಹೂವಿನಹಡಗಲಿ ತಾಲೂಕಿನಲ್ಲಿ 6 ಮರಳಿನ ಬ್ಲಾಕ್, ಹರಪನಹಳ್ಳಿ ತಾಲೂಕಿನ ನಿಟ್ಟೂರು ಮತ್ತು ಕಡತಿ ಸೇರಿದಂತೆ ಒಟ್ಟು 8 ಮರಳಿನ ಬ್ಲಾಕ್‌ಗಳನ್ನು ಗುರುತಿಸಿ, ಮರಳಿನ ಗುಣಮಟ್ಟ ಸೇರಿದಂತೆ ಎಲ್ಲ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಹರವಿ-2, ಹಕ್ಕಂಡಿ-1, ಬನ್ನಿಮಟ್ಟಿ-1, ಕಂದಗಲ್ಲು ಪುರ-2, ಹರಪನಹಳ್ಳಿ ತಾಲೂಕಿನ ನಿಟ್ಟೂರು-1, ಕಡತಿ-1 ಮರಳಿನ ಬ್ಲಾಕ್‌ಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಗಸ್ಟ್ 14ರಂದು ಟೆಂಡರ್ ಕರೆದಿತ್ತು. ಟೆಂಡರ್ ಕರೆದ ದಿನದಿಂದ 90 ದಿನದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಅಂತಿಮ ಪಟ್ಟಿಯನ್ನು ಪ್ರಕಟಗೊಳಿಸಲು ಇಲಾಖೆ ವಿಳಂಬ ಮಾಡಿತ್ತು. ಇದರಿಂದ ಕೆಲವರು ಕೋರ್ಟ್ ಮೊರೆ ಹೋಗಿ ಟೆಂಡರ್ ಪ್ರಕ್ರಿಯೆಗೆ ತಡೆ ತಂದಿದ್ದಾರೆ. ಇದರಿಂದ ಟೆಂಡರ್ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಮಳೆಗಾಲ ಮುಗಿದಿದೆ. ಇದನ್ನೇ ಕಾಯುತ್ತಿರುವ ಮರಳು ದಂಧೆಕೋರರು ರಾಜಾರೋಷವಾಗಿ ಮರಳು ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ. ರಾತ್ರಿ ವೇಳೆ ಮರಳನ್ನು ಕಳ್ಳ ಸಾಗಾಣೆ ಮಾಡಲು ಕೆಲವರು ಹೊಸ ಲಾರಿಗಳನ್ನೇ ಖರೀದಿ ಮಾಡಿ ಸಿಕ್ಕ ಕಡೆಗಳಲ್ಲಿ ದುಬಾರಿ ಬೆಲೆಗೆ ಮರಳು ಮಾರಾಟ ಮಾಡುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ.ನೀರಲ್ಲಿನ ಮರಳನ್ನು ಎತ್ತಲು ದಂಧೆಕೋರರು ಬಿಹಾರಿಗಳನ್ನು ಕರೆ ತಂದಿದ್ದಾರೆ. ಕಬ್ಬಿಣದ ತೆಪ್ಪಗಳನ್ನು ಬಳಸಿಕೊಂಡು ಅಪಾಯದ ಸ್ಥಳಗಳಿಂದ, ಮರಳನ್ನು ಅಕ್ರಮವಾಗಿ ಸಂಗ್ರಹಿಸುವ ದಂಧೆ ಎಗ್ಗಿಲ್ಲದೇ ಸಾಗಿದೆ.
ತುಂಗಭದ್ರಾ ನದಿ ತೀರದಲ್ಲಿ ನಡೆಯುವ ಮರಳು ಅಕ್ರಮ ದಂಧೆ ತಡೆಯಲು ಸಾಕಷ್ಟು ಬಾರಿ ದಾಳಿ ಮಾಡಿದ್ದೇವೆ. ಕುರುವತ್ತಿ 10 ಲಾರಿಯಷ್ಟು ಮರಳನ್ನು ವಶಕ್ಕೆ ಪಡೆಸಿಕೊಂಡಿದ್ದೇವೆ. ಮರಳಿನ ಬ್ಲಾಕ್ ಟೆಂಡರ್ ಪ್ರಕ್ರಿಯೆ ಕುರಿತು ಕೆಲವೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಡಿ.4ರಂದು ಈ ಕುರಿತು ವಿಚಾರಣೆ ಇದೆ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರಿಯಾಜ್.