ಸಾರಾಂಶ
ಹೊಸಪೇಟೆ: ಹಂಪಿ ಕಮಲ ಮಹಲ್ ಆವರಣದಲ್ಲಿ ಶ್ರೀಗಂಧದ ಮರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಹಂಪಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತರಿಂದ ₹6000 ನಗದು, ₹3 ಲಕ್ಷ ಬೆಲೆ ಬಾಳುವ ಒಂದು ಬೊಲೆರೋ ವಾಹನ, ₹62 ಸಾವಿರ ಬೆಲೆ ಬಾಳುವ ಎರಡು ಬೈಕ್ ಮತ್ತು ಮೂರು ಮೊಬೈಲ್ ಸೆಟ್ ಮತ್ತು ಐದು ಸಾವಿರ ರು. ಬೆಲೆ ಬಾಳುವ 2 ಕೆಜಿ ಶ್ರೀಗಂಧದ ಮರದ ತುಂಡನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದ ನಿವಾಸಿಗಳಾದ ಗಾಳೆಪ್ಪ ಅಲಿಯಾಸ್ ಗಾಳಿ (20), ಕೆ. ಲೋಕೇಶ್ ಅಲಿಯಾಸ್ ತಬ್ಕ (20), ಲಕ್ಷ್ಮಣ ಅಲಿಯಾಸ್ ಲಚ್ಚಿ (21) ಮತ್ತು ಹುಲುಗಪ್ಪ ಅಲಿಯಾಸ್ ಹುಲುಗ (26) ಬಂಧಿತರು. 2023ರ ನವೆಂಬರ್ 24ರ ರಾತ್ರಿ ಹಂಪಿಯ ಕಮಲ್ ಮಹಲ್ ಸ್ಮಾರಕದ ಆವಣರದಲ್ಲಿದ್ದ ಶ್ರೀಗಂಧದ ಮರವನ್ನು ತುಂಡರಿಸಿ ಕಳವು ಮಾಡಲಾಗಿತ್ತು.
ಹಂಪಿ ಸ್ಮಾರಕದ ಬಳಿಯೇ ಕಳ್ಳತನ ನಡೆದಿರುವುದು ಜನರಲ್ಲಿ ಅಚ್ಚರಿ ಮೂಡಿಸಿತ್ತು. ಜತೆಗೆ ಪೊಲೀಸರಿಗೆ ಈ ಪ್ರಕರಣ ತಲೆನೋವು ತಂದಿತ್ತು. ಸಿಸಿ ಕ್ಯಾಮೆರಾ ಕೂಡ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೂ ಪ್ರಕರಣವನ್ನು ಪೊಲೀಸರು ಸವಾಲಾಗಿ ಸ್ವೀಕರಿಸಿದ್ದರು. ವೈಜ್ಞಾನಿಕ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಲೆಗೆ ಬೀಳಿಸಿದ್ದಾರೆ.
ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಟಿ. ಮಂಜುನಾಥ, ಹಂಪಿ ಸಿಪಿಐ ಶಿವರಾಜ್ ಎಸ್. ಇಂಗಳೆ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಿವಕುಮಾರ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿ ಸಂಜೀವ್ ಸಿಂಗ್, ಶರಣಪ್ಪ, ಕೆಂಚಪ್ಪ ಕೆ., ಮಾರುತಿ, ತಿಮ್ಮಪ್ಪ, ಜಗದೀಶ್, ರಾಜಶೇಖರ್, ಸಿಡಿಆರ್ ಘಟಕದ ಸಿಬ್ಬಂದಿ ಕುಮಾರ ನಾಯ್ಕ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.