ಜನಶಿಕ್ಷಣ ಟ್ರಸ್ಟ್‌, 7 ಸಾಧಕರಿಗೆ ಸಂದೇಶ ಪ್ರಶಸ್ತಿ ಪ್ರದಾನ

| Published : Feb 12 2024, 01:32 AM IST

ಸಾರಾಂಶ

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಯುವ ಜನತೆ ಸಾಹಿತ್ಯ, ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಮಕ್ಕಳಿಗೆ ಪೋಷಕರ ಪ್ರೋತ್ಸಾಹ ಅಗತ್ಯ. ಸಂದೇಶ ಪ್ರಶಸ್ತಿಗಳು ಸಾಧನೆ ಮಾಡಲು ಯುವ ಜನಾಂಗ ಹಾಗೂ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೇರಣೆ ನೀಡಲಿ ಎಂದು ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಏಳು ಮಂದಿ ಸಾಧಕರಿಗೆ ಸಂದೇಶ ಪ್ರಶಸ್ತಿ ಮತ್ತು ಜನಶಿಕ್ಷಣ ಟ್ರಸ್ಟ್‌ಗೆ ಸಂದೇಶ ವಿಶೇಷ ಪ್ರಶಸ್ತಿಯನ್ನು ಪ್ರತಿಷ್ಠಾನದ ಆವರಣದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.ಸಂದೇಶ ಸಾಹಿತ್ಯ ಪ್ರಶಸ್ತಿಯನ್ನು ಪ್ರೊ.ಬಿ.ಎ. ವಿವೇಕ್ ರೈ (ಕನ್ನಡ), ವಲೇರಿಯನ್ ಕ್ವಾಡ್ರಸ್ (ಕೊಂಕಣಿ), ಮುದ್ದು ಮೂಡುಬೆಳ್ಳೆ (ತುಳು), ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ಅಬ್ದುಸ್ಸಲಾಮ್ ಪುತ್ತಿಗೆ, ಕೊಂಕಣಿ ಸಂಗೀತ ಪ್ರಶಸ್ತಿಯನ್ನು ಆಲ್ವಿನ್ ಡಿಕುನ್ಹಾ, ಕಲಾ ಪ್ರಶಸ್ತಿಯನ್ನು ಕೆ. ಚಂದ್ರನಾಥ ಆಚಾರ್ಯ ಅವರಿಗೆ ಪ್ರದಾನ ಮಾಡಲಾಯಿತು. ವಿಶೇಷ ಪ್ರಶಸ್ತಿಯನ್ನು ಜನ ಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ ಅವರಿಗೆ ಪ್ರದಾನ ಮಾಡಲಾಯಿತು. ಶಿಕ್ಷಣ ಪ್ರಶಸ್ತಿಯನ್ನು ಹುಚ್ಚಮ್ಮ ಚೌದ್ರಿಯವರ ಪರವಾಗಿ ಚಿನ್ನಪ್ಪ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಯುವ ಜನತೆ ಸಾಹಿತ್ಯ, ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಮಕ್ಕಳಿಗೆ ಪೋಷಕರ ಪ್ರೋತ್ಸಾಹ ಅಗತ್ಯ. ಸಂದೇಶ ಪ್ರಶಸ್ತಿಗಳು ಸಾಧನೆ ಮಾಡಲು ಯುವ ಜನಾಂಗ ಹಾಗೂ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೇರಣೆ ನೀಡಲಿ ಎಂದು ಶುಭ ಹಾರೈಸಿದರು.ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಮಹಾ ಧರ್ಮಾಧ್ಯಕ್ಷ ರೈ.ರೇ.ಡಾ. ಪೀಟರ್ ಮಚಾದೋ ಮಾತನಾಡಿ, ಮುಂದಿನ ಜನಾಂಗಕ್ಕೆ ಸಂಸ್ಕೃತಿಯನ್ನು ತಲುಪಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.ಮಂಗಳೂರು ಬಿಷಪ್ ಅತಿ.ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಮಾತನಾಡಿ, ಸಮಾಜದಲ್ಲಿರುವ ಎಲ್ಲರೂ ಪರಸ್ಪರ ಬಂಧುತ್ವದಲ್ಲಿ ಜೀವಿಸಬೇಕಾದ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಸಂದೇಶ ಸಂಸ್ಥೆಯು ಪೂರಕ ಕೆಲಸ ಮಾಡುತ್ತಿದೆ ಎಂದರು.ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಬಳ್ಳಾರಿ ಧರ್ಮಾಧ್ಯಕ್ಷ ಅತಿ.ವಂ. ಡಾ. ಹೆನ್ರಿ ಡಿಸೋ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಪ್ರೊ. ವಿವೇಕ್ ರೈ ಅನಿಸಿಕೆ ವ್ಯಕ್ತಪಡಿಸಿದರು.ಆಯ್ಕೆ ಸಮಿತಿ ಅಧ್ಯಕ್ಷ ಚಿನ್ನಪ್ಪ ಗೌಡ ಶುಭಹಾರೈಸಿದರು. ಪ್ರತಿಷ್ಠಾನದ ನಿರ್ದೇಶಕ ವಂ.ಡಾ. ಸುದೀಪ್ ಪಾಲ್ ಸ್ವಾಗತಿಸಿದರು. ಸಂಸ್ಥೆಯ ಟ್ರಸ್ಟಿ ರಾಯ್ ಕ್ಯಾಸ್ಟೆಲಿನೊ ವಂದಿಸಿದರು. ಕನ್ಸೆಪ್ಟಾ ಫರ್ನಾಂಡಿಸ್ ನಿರೂಪಿಸಿದರು.