ಸಾರಾಂಶ
ವಿ.ಎಂ. ನಾಗಭೂಷಣ
ಸಂಡೂರು: ಸಂಡೂರಿನ ಗುಡ್ಡ-ಬೆಟ್ಟ, ಅರಣ್ಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು, ದಿನಂಪ್ರತಿ ಪ್ರವಾಸಿಗರ ಸಂಖ್ಯೆ ಭಾರೀ ಹೆಚ್ಚಳವಾಗಿದೆ.ಚಳಿಗಾಲದ ಕೊನೆಯಲ್ಲಿ ಹಾಗೂ ಬೇಸಿಗೆಯ ಆರಂಭದಲ್ಲಿ ಎಲೆಗಳನ್ನು ಉದುರಿಸಿಕೊಂಡು ಬೋಳಾಗುವ ಇಲ್ಲಿನ ಬೆಟ್ಟಗುಡ್ಡಗಳಲ್ಲಿನ ಗಿಡಮರಗಳು ವಸಂತ ಋತುವಿನಲ್ಲಿ ಚಿಗುರೊಡೆಯಲು ಆರಂಭಿಸುತ್ತವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿನ ಗುಡ್ಡ-ಬೆಟ್ಟ, ಅರಣ್ಯ ಹೊಸ ಚೈತನ್ಯ ಪಡೆದುಕೊಳ್ಳುತ್ತವೆ.
ಸೆಪ್ಟಂಬರ್ ಹೊತ್ತಿಗೆ ಇಲ್ಲಿನ ಗುಡ್ಡಬೆಟ್ಟಗಳಲ್ಲಿನ ಅರಣ್ಯ ಹಸಿರಿನಿಂದ ಕಂಗೊಳಿಸುತ್ತದೆ. ಅಲ್ಲಲ್ಲಿ ಉಂಟಾಗುವ ನೀರಿನ ಝರಿಗಳು, ಬೆಟ್ಟಗಳನ್ನು ಸೀಳಿಕೊಂಡು ಸಾಗುವ ನಾರಿಹಳ್ಳ ಗುಡ್ಡಗಳ ಶಿಖರಾಗ್ರಗಳನ್ನು ಮುತ್ತಿಕ್ಕುತ್ತಾ ಸಾಗುವ ಮೋಡಗಳು, ಇಲ್ಲಿನ ಅರಣ್ಯದಲ್ಲಿ ಹೆಚ್ಚಾಗಿ ಕಂಡು ಬರುವ ನವಿಲುಗಳ ಕೂಗು ಪ್ರಕೃತಿ ಆರಾಧಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ."ಸೀ ಸಂಡೂರ್ ಇನ್ ಸೆಪ್ಟಂಬರ್ " ಇದು ಸಂಡೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಜನಜನಿತವಾಗಿರುವ ವಾಕ್ಯ. ಗಣಿ ನಾಡು ಸಂಡೂರಿಗೆ ಈ ಖ್ಯಾತಿ ಬರಲು ಕಾರಣ ಇಲ್ಲಿನ ಸಮೃದ್ಧ ನಿಸರ್ಗ ಸೌಂದರ್ಯ. ಸೆಪ್ಟಂಬರ್, ಅಕ್ಟೋಬರ್‌ನಲ್ಲಿ ಅತಿಹೆಚ್ಚು ಪ್ರವಾಸಿಗರು ಬಂದು ಹೋಗುತ್ತಾರೆ.
ವೀಕ್ಷಣಾ ಗೋಪುರ ನಿರ್ಮಾಣ:ಸಂಡೂರಿಗೆ ಬರುವ ಪ್ರವಾಸಿಗರಿಗೆ ಇಲ್ಲಿನ ನಿಸರ್ಗದ ಸೊಬಗನ್ನು ನೋಡಿ ಕಣ್ಮನ ತುಂಬಿಕೊಳ್ಳಲು ಅನುಕೂಲವಾಗಲೆಂದು ಸಂಡೂರು ಹೊರವಲಯದ ಧರ್ಮಾಪುರದ ಬಳಿಯಲ್ಲಿ ಅರಣ್ಯ ಇಲಾಖೆಯವರು ಪಗೋಡ ಮಾದರಿಯಲ್ಲಿ ಪ್ರಕೃತಿ ವೀಕ್ಷಣಾ ಗೋಪುರ ನಿರ್ಮಿಸಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿ ಮಹಾತ್ಮ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ವೀಕ್ಷಣಾ ಗೋಪುರ ಹತ್ತಿದರೆ ಸಂಡೂರು ಹಾಗೂ ಸುತ್ತಲಿನ ಸುಂದರ ನಿಸರ್ಗ ಸೌಂದರ್ಯ ಕಣ್ತುಂಬಿಕೊಳ್ಳಬಹುದು.
ಅರಣ್ಯ ಇಲಾಖೆಯವರು ತಾಲೂಕಿನ ನಾಲ್ಕು ಅರಣ್ಯ ವಲಯಗಳಲ್ಲಿ ಟ್ರೆಕ್ಕಿಂಗ್ ಮಾರ್ಗ ಗುರುತಿಸಿ ಸಂಡೂರಿನ ಅನ್ವೇಷಣೆ ಎಂಬ ಯೋಜನೆ ರೂಪಿಸಿದ್ದಾರೆ. ಪ್ರತಿ ವರ್ಷ ರಾಜ್ಯದ ವಿವಿದ ಕಡೆಗಳಿಂದ ಚಾರಣಿಗರು, ಪ್ರಕೃತಿ ಆರಾಧಕರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು, ಚಾರಣಕ್ಕಾಗಿ ಆಗಮಿಸುತ್ತಾರೆ.ಸಂಡೂರಿನ ಸುತ್ತಮುತ್ತ ಹಲವು ಪೌರಾಣಿಕ ಹಾಗೂ ಐತಿಹಾಸಿಕ ತಾಣಗಳಾದ ಶ್ರೀಕುಮಾರಸ್ವಾಮಿ ದೇವಸ್ಥಾನ, ೨೪ x ೭ ತರಹ ವರ್ಷದ ೩೬೫ ದಿನವೂ ಬೆಟ್ಟದ ಮೇಲಿಂದ ಹರಿಯುವ ನೀರಿನ ಝರಿ ಹೊಂದಿರುವ ದೇಗುಲಗಳಿವೆ. ಶ್ರೀಹರಿಶಂಕರ, ನವಿಲುಸ್ವಾಮಿ ದೇವಸ್ಥಾನ, ಭೀಮತೀರ್ಥ, ಭೈರವತೀರ್ಥ, ತಿಮ್ಮಪ್ಪನ ದೇವಸ್ಥಾನ ಹಾಗೂ ಹಲವು ಐತಿಹಾಸಿಕ ಸ್ಮಾರಕಗಳಿವೆ. ರಾಮಘಡ, ನಾರಿಹಳ್ಳ ಜಲಾಶಯಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ಇವು ಪ್ರೇಕ್ಷಣೀಯ ತಾಣಗಳಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಇಲ್ಲಿನ ನಿಸರ್ಗ ಸೌಂದರ್ಯದಿಂದಾಗಿ ಸಿನಿಮಾ ಹಾಗೂ ಧಾರಾವಾಹಿ ನಿರ್ಮಾಪಕರು ಚಲನಚಿತ್ರ ಹಾಗೂ ಧಾರಾವಾಹಿಗಳ ನಿರ್ಮಾಣಕ್ಕಾಗಿ ಸಂಡೂರಿನತ್ತ ಮುಖಮಾಡತೊಡಗಿದ್ದಾರೆ.ಸಂಡೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಸೂಕ್ತ ಸ್ಥಳವಾಗಿದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದರೆ ಇದೊಂದು ಪ್ರಮುಖ ಪ್ರವಾಸಿ ಕೇಂದ್ರವಾಗಲಿದೆ.