ಅಂತರ್‌ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಸಾಣೇಹಳ್ಳಿ ಸಜ್ಜು

| Published : Feb 02 2024, 01:00 AM IST

ಸಾರಾಂಶ

ಚಿಕ್ಕಮಗಳೂರು-ಚಿತ್ರದುರ್ಗ ಜಿಲ್ಲೆಗಳ ಪ್ರಥಮ ಅಂತರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಣೇಹಳ್ಳಿ ಶ್ರೀಮಠ ನವ ವಧುವಿನಂತೆ ಶೃಂಗಾರಗೊಂಡಿದೆ.

ವಿಶ್ವನಾಥ ಶ್ರೀರಾಂಪುರ

ಹೊಸದುರ್ಗ: ಚಿಕ್ಕಮಗಳೂರು-ಚಿತ್ರದುರ್ಗ ಜಿಲ್ಲೆಗಳ ಪ್ರಥಮ ಅಂತರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಣೇಹಳ್ಳಿ ಶ್ರೀಮಠ ನವ ವಧುವಿನಂತೆ ಶೃಂಗಾರಗೊಂಡಿದೆ.

ಫೆ. 2 ಮತ್ತು 3 ರಂದು ನಡೆಯಲಿರುವ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರನ್ನು ಸ್ವಾಗತಿಸಲು ಹಾಗೂ ಸಾಹಿತ್ಯಸಕ್ತರ ಕಣ್ಮನಗಳನ್ನು ತಣಿಸಲು ಇಡೀ ಸಾಣೇಹಳ್ಳಿ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರ, ತಳಿರು ತೋರಣ ಮತ್ತಿತರ ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಸಾಣೇಹಳ್ಳಿಯಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ. ಸಾಣೇಹಳ್ಳಿ ರಂಗಭೂಮಿ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಈಗ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಮತ್ತೊಂದು ಪ್ರಥಮಕ್ಕೆ ಸಾಕ್ಷಿಯಾಗುತ್ತಿರುವುದು ವಿಶೇಷ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ರಾಷ್ಟ್ರ, ನಾಡ ಹಾಗೂ ಪರಿಷತ್ತಿನ ಧ್ವಜಾರೋಹಣದೊಂದಿಗೆ ಪ್ರಾರಂಭಗೊಳ್ಳಲಿರುವ ಸಮ್ಮೇಳನ ಪ್ರಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಕೃತಿಗಳ ಮೆರವಣಿಗೆ ಹಾಗೂ ಪಾದಯಾತ್ರೆ ಕುವೆಂಪು ಮಹಾದ್ವಾರದ ಮೂಲಕ ತರಾಸು ಮಹಾಮಂಟಪಕ್ಕೆ ತೆರ‍ಳಲಿದೆ. ಅಲ್ಲಿ ನಿರ್ಮಿಸಲಾಗಿರುವ ಅಲ್ಲಮ ಪ್ರಭು ವೇದಿಕೆಯಲ್ಲಿ ಅಂತ್ಯಗೊಂಡು ನಂತರ ಕಸಾಪ ಮಾಜಿ ಅಧ್ಯಕ್ಷ ಗೋ.ರು. ಚನ್ನಬಸಪ್ಪ ಅವರಿಂದ ಸಮ್ಮೇಳನ ಉದ್ಘಾಟನೆ ಗೊಳ್ಳಲಿದೆ. ಒಟ್ಟು 8 ವಿವಿಧ ಗೋಷ್ಠಿಗಳು ನಡೆಯಲಿದ್ದು ಇದರಲ್ಲಿ ಮಠಾಧೀಶರು, ಜನಪ್ರತಿನಿಧಿಗಳು ಸಾಹಿತಿಗಳು, ಚಿಂತಕರು, ವಿದ್ವಾಂಸರು ಭಾಗವಹಿಸಲಿದ್ದಾರೆ.

ತಾರಾಸು ಮಂಟಪ:

ಸಾಣೇಹಳ್ಳಿ ಶ್ರೀಮಠದಲ್ಲಿ ದೇವಮಂದಿರಗಳಿಲ್ಲ. ರಂಗಮಂದಿರಗಳ ಸಮುಚ್ಚಯವೆ ಇದೆ. ಗ್ರೀಕ್ ಮಾದರಿ ಶಿವಕುಮಾರ ಬಯಲು ರಂಗಮಂದಿರ ನಾಲ್ಕು ಸಾವಿರ ಪ್ರೇಕ್ಷಕರನ್ನು ಒಳಗೊಳ್ಳುವಂತಿದೆ. ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರ ಒಂದು ಸಾವಿರ ಪ್ರೇಕ್ಷಕರಿಗೆ ಆಸನಗಳನ್ನು ಹೊಂದಿದ್ದು ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದು ತರಾಸು ಮಹಾಮಂಟಪವಾಗಿ ಬಳಕೆಯಾಗುತ್ತಿದೆ. ಇದರೊಳಗಡೆ ಅಲ್ಲಮ ಪ್ರಭು ವೇದಿಕೆ ವಿನೂತನವಾಗಿ ವಿನ್ಯಾಸಗೊಂಡಿದೆ. ಇದಲ್ಲದೆ ಹೆಚ್ಚಿನ ಸಾಹಿತ್ಯಾಸಕ್ತರು ಬಂದರೆ ಅವರು ಕಾರ್ಯಕ್ರಮ ನೋಡಲು ಅನುಕೂಲವಾಗುವಂತೆ. ಶಿವಕುಮಾರ ರಂಗಮಂದಿರದಲ್ಲಿ ಎಲ್ ಇ ಡಿ ಪರದೆಯೊಂದಿಗೆ ಒಂದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಚಿತ್ರಕಲಾ ಪ್ರದರ್ಶನ:

ಸಾಹಿತ್ಯ ಸಮ್ಮೇಳನದಲ್ಲಿ ಶಿವಸಂಚಾರ ಕಲಾವಿದರಾದ ನಾಗರಾಜು, ದ್ರಾಕ್ಷಿಯಣಿ ಕೆ, ಜ್ಯೋತಿ ಕೆ ಮತ್ತು ಶರಣ್ ಕುಮಾರ್ ತಂಡ ಹಾಗೂ ಸಾಣೇಹಳ್ಳಿ ಅಕ್ಕನಬಳಗದವರಿಂದ ಕನ್ನಡಗೀತೆ, ಭಾವಗೀತೆ, ಜನಪದಗೀತೆ, ವಚನಗೀತೆ ಮತ್ತು ರಂಗಗೀತೆಗಳ ರಸದೌತಣ ದೊರೆಯಲಿದೆ. ಅಂತರಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯರ ಬದುಕು-ಬರಹ-ಸಾಧನೆಯನ್ನು ಪರಿಚಯಿಸುವ ಭಾವಚಿತ್ರಗಳ ಚಿತ್ರಕಲಾಪ್ರದರ್ಶನವು 80x30 ವಿಸ್ತಾರದ ಪ್ರದರ್ಶನ ಮಳಿಗೆಯಲ್ಲಿ ಸಿದ್ಧಗೊಂಡಿದ್ದು ನೋಡುಗರಿಗೆ ಪೂರ್ಣ ಮಾಹಿತಿ ಒದಗಿಸಲಿದೆ.

ಪ್ರದರ್ಶನ ಮತ್ತು ಮಾರಾಟಮಳಿಗೆ:

ಪುಸ್ತಕ , ಮಹಿಳಾ ಸ್ವ ಸಹಾಯ ಸಂಘಗಳ ಉತ್ಪನ್ನ , ಆಯುರ್ವೇದ, ಔಷಧಗಳು, ಸಾವಯವ ಉತ್ಪನ್ನಗಳು, ಗಡಿಯಾರ, ವಸ್ತ್ರಾಲಯ ಮಳಿಗೆಗಳು ತೆರೆಯಲಿದ್ದು ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಸಾಗರ, ರಾಣೇಬೆನ್ನೂರು, ದಾವಣಗೆರೆ, ಚಳ್ಳಕೆರೆ, ಹೊಸದುರ್ಗ ಮತ್ತಿತರ ಕಡೆಯಿಂದ ಮಾರಾಟಗಾರರು ಮತ್ತು ಪ್ರದರ್ಶನಕಾರರು ಭಾಗವಹಿಸಲಿದ್ದಾರೆ.

ಸಾಹಿತ್ಯಸಾಕ್ತರಿಗೆ ವಸತಿ ಸೌಲಭ್ಯ ಒದಗಿಸುವಲ್ಲಿ ಗುರುಶಾಂತೇಶ್ವರ ಅತಿಥಿಗೃಹ, ವಿಶ್ವಬಂಧು ಯಾತ್ರಿ ನಿವಾಸ, ಡಿ ದೇವರಾಜು ಅರಸು ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ, ಅಕ್ಕಮಹಾದೇವಿ ವಿದ್ಯಾರ್ಥಿನಿಲಯ, ಶಿವಕುಮಾರ ಬಾಲಕರ ವಿದ್ಯಾರ್ಥಿನಿಲಯ, ಶಿವಕುಮಾರಸ್ವಾಮೀಜಿ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮತ್ತು ಗುರುಪಾದೇಶ್ವರ ಪ್ರೌಢಶಾಲೆಗಳು ಸಜ್ಜುಗೊಂಡಿವೆ.

ಬೆಳಗಿನ ಉಪಹಾರ, ಮಧ್ಯಾಹ್ನ ಪ್ರಸಾದ, ಸಂಜೆಯ ಲಘು ಉಪಹಾರ ಮತ್ತು ರಾತ್ರಿಯ ಪ್ರಸಾದಕ್ಕೆ ಶುಚಿ- ರುಚಿ ಮತ್ತು ಆರೊಗ್ಯಕರವಾದ ದೇಶೀಯ ತಿನಿಸುಗಳು ಸಿದ್ದವಾಗಿವೆ.

ಮುಂಗಡವಾಗಿ ನೋಂದಾಯಿಸಲ್ಪಟ್ಟವರಿಗೆ ಬ್ಯಾಗ್, ಕೊಬ್ಬರಿ, ಪೆನ್, ಪ್ಯಾಡ್, ಶ್ರೀಗಳ ಪುಸ್ತಕದ ಕೊಡುಗೆಯಿರುತ್ತದೆ. ತಮ್ಮ ರಸೀದಿ ತೋರಿಸಿ ಪಡೆಯುವುದು.

ಸಾಂಸ್ಕೃತಿಕ ಸಂಜೆ: 2ರ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಸಂಜೆಯಲ್ಲಿ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳಿಂದ ಮಲ್ಲಗಂಬ, ವಚನ ನೃತ್ಯ ಹಾಗೂ ನಾಡಿನ ಪ್ರಸಿದ್ಧ ಕಲಾ ತಂಡಗಳಿಂದ ಜನಪದ ನೃತ್ಯ, ಗೀತಗಾಯನ, ರಂಗಗೀತೆ, ಕಂಸಾಳೆ, ವೀರಗಾಸೆ, ಚೌಡಿಕೆ, ಲಂಬಾಣಿ ನೃತ್ಯ ಮುಂತಾದ ಕಲಾಪ್ರಕಾರಗಳ ಕಲರವ ಇರುತ್ತದೆ.