ರಾಮನಗರ: ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದಲ್ಲಿ ನಡೆದಿದ್ದ ಸುಶೀಲಮ್ಮ ಕೊಲೆ ಪ್ರಕರಣವನ್ನು ಬೇಧಿಸಿರುವ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ

ರಾಮನಗರ: ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದಲ್ಲಿ ನಡೆದಿದ್ದ ಸುಶೀಲಮ್ಮ ಕೊಲೆ ಪ್ರಕರಣವನ್ನು ಬೇಧಿಸಿರುವ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಗಬಸವನದೊಡ್ಡಿ ಗ್ರಾಮದ ಗಿರಿಜಾ ಮತ್ತು ಎಸ್.ವಿ.ಮಹೇಶ್ ಬಂಧಿತರು. ಇವರಿಬ್ಬರು ಕೊಲೆ ಮಾಡಿ ಮೃತಳ ಮೈಮೇಲಿದ್ದ ಚಿನ್ನಾಭರಣ ದೋಚಿ ಮಾರಾಟ ಮಾಡಿ ಅದರಿಂದಲೇ ಮತ್ತೆ ಹೊಸದಾಗಿ 5.45 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ಅಮಾನತು ಪಡಿಸಿಕೊಂಡಿದ್ದಾರೆ.

ಸುಶೀಲಮ್ಮ ಗ್ರಾಮದ ಗಿರಿಜಾ ಅವರಿಗೆ ಕೊಟ್ಟಿದ್ದ 20 ಸಾವಿರ ರುಪಾಯಿ ಸಾಲದ ಹಣ ಕೇಳಲು ಮನೆಗೆ ಹೋಗಿದ್ದರು. ಇದನ್ನು ಎದುರು ಮನೆಯ ರೇಣುಕಮ್ಮ ನೋಡಿದ್ದರು. ಅದಾದ ಬಳಿಕ ಸುಶೀಲಮ್ಮ ಮನೆಗೆ ವಾಪಸ್ಸಾಗಿರಲಿಲ್ಲ.

ಸುಶೀಲಮ್ಮ ಪುತ್ರ ಮಹದೇವಯ್ಯ ತಾಯಿ ಸುಶೀಲಮ್ಮ ಕಾಣೆಯಾಗಿದ್ದಾರೆಂದು ಜೂನ್ 16ರಂದು ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೂನ್ 21ರಂದು ಮಧಾಹ್ನ 3.30ರ ಸಮಯದಲ್ಲಿ ರೈಲ್ವೆ ಟ್ರ್ಯಾಕ್ ಪಕ್ಕದ ದಿಬ್ಬದ ಬಳಿ ಸುಶೀಲಮ್ಮನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ದೊರಕಿತ್ತು.

ಸುಶೀಲಮ್ಮನವರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯದ ಸರ, ಕಿವಿಯೋಲೆ, ಮೂಗುತಿ, ಕರಡಿಗೆ ಇಲ್ಲದಿರುವುದನ್ನು ನೋಡಿ ಅನುಮಾನಗೊಂಡ ಮಹದೇವಯ್ಯ, ಗಿರಿಜಾ ಮೇಲೆ ಶಂಕೆ ವ್ಯಕ್ತಪಡಿಸಿದ್ದರು.

ತನಿಖೆಗಿಳಿದ ಪೊಲೀಸರು ಗಿರಿಜಾ ಮತ್ತು ಎಸ್.ವಿ.ಮಹೇಶನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸುಶೀಲಮ್ಮ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮೈಮೇಲಿದ್ದ ಚಿನ್ನದ ಒಡವೆಗಳನ್ನು ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಒಡವೆಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಖರೀದಿಸಿದ್ದ 10 ಗ್ರಾಂ ತೂಕದ 2 ಜೊತೆ ಓಲೆ, 30 ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರ ಮತ್ತು ಆರೋಪಿ ಆಲೋವೇರಾ ಪಾಟ್‌ನಲ್ಲಿ ಮುಚ್ಚಿಟ್ಟಿದ್ದ ಸುಶೀಲಮ್ಮನ ತಾಳಿಯನ್ನು ಪೊಲೀಸರು ಅಮಾನತು ಪಡಿಸಿಕೊಂಡಿದ್ದಾರೆ.