ಸಾಲು ಗಿಡ ನೆಡುವ ಕೆಲಸಕ್ಕೆ ಸಂಗಮ ಟ್ರಸ್ಟ್ ನೆರವು

| Published : Jan 03 2025, 12:32 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಚಿರಕನಹಳ್ಳಿ ಶಾಲೆಯಲ್ಲಿ ಸಾಲು ಮರ ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನಲ್ಲಿ ವರ್ಷ ಪೂರ್ತಿ ಗಿಡ ನೆಟ್ಟು ಸಾಲು ಮರ ಬೆಳೆಸುವ ಸಂಕಲ್ಪಕ್ಕೆ ಚಿತ್ರಕೂಟ ಬಳಗ, ಈಶ್ವರಿ ಸೋಷಿಯಲ್‌ ಟ್ರಸ್ಟ್‌ಗೆ ಹಾಲಹಳ್ಳಿ ಸಂಗಮ ಪ್ರತಿಷ್ಠಾನ ಸಹಕಾರ ಹಾಗೂ ನೆರವು ನೀಡಲಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ತಾಲೂಕಿನ ಚಿರಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಡ್ಡಗೆರೆ ಚಿತ್ರಕೂಟ ಬಳಗ, ಈಶ್ವರಿ ಸೋಷಿಯಲ್‌ ಟ್ರಸ್ಟ್‌ ಹಾಗೂ ಸಂಗಮ ಪ್ರತಿಷ್ಠಾನ ಸಹಯೋಗದಲ್ಲಿ ಸಾಲು ಮರ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರು ಹಾಕಿದ ಬಳಿಕ ಮಾತನಾಡಿದರು. ದೇಶದಲ್ಲಿ ಅಗಾಧವಾಗಿ ಜನಸಂಖ್ಯೆ ಏರುತ್ತಿದೆ. ಕಾಡು ನಶಿಸುತ್ತಿದೆ. ಕಾಡು ಉಳಿದರೆ ಮಾತ್ರ ಶುದ್ಧ ಗಾಳಿ ಸಿಗಲಿದೆ. ಹಾಗಾಗಿ ಪರಿಸರ ಉಳಿಯಬೇಕಾದರೆ ಗಿಡ ನೆಟ್ಟು ಬೆಳೆಸಿ, ಪೋಷಿಸುವುದು ಎಲ್ಲರ ಕೆಲಸ ಎಂದರು. ನಗರ ಪ್ರದೇಶದಲ್ಲಿ ಶುದ್ಧ ಗಾಳಿ ಸಿಗುತ್ತಿಲ್ಲ. ನಗರ ಪ್ರದೇಶದ ನಾಗರಿಕರು ಶುದ್ಧ ಗಾಳಿಗಾಗಿ ಆಕ್ಸಿಜನ್‌ ಬಾರ್‌ಗೆ ಹೋಗಿ ಹಣ ಕೊಟ್ಟು ಶುದ್ಧ ಗಾಳಿ ಕುಡಿಯು ತ್ತಿದ್ದಾರೆ ಅಂತ ಪರಿಸ್ಥಿತಿ ನಮಗೆ ಬರಬಾರದು ಎಂಬುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರು. ವಡ್ಡಗೆರೆ ಚಿತ್ರಕೂಟ ಬಳಗ, ಈಶ್ವರಿ ಸೋಷಿಯಲ್‌ ಟ್ರಸ್ಟ್‌ ಹಾಗೂ ಸಂಗಮ ಪ್ರತಿಷ್ಠಾನ ಸಾಲು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿವೆ. ಮುಂದಿನ ವರ್ಷದ ನಮ್ಮ ತಂದೆ ಎಚ್.ಎಸ್.ಮಹದೇವಪ್ರಸಾದ್‌ ಅವರ ಪುಣ್ಯಾರಾಧನೆಗೆ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸೋಣ ಎಂದರು. ಕಾಡು ನಶಿಸುತ್ತಿರುವ ಕಾರಣ ಕಾಡಿನಿಂದ ಹಳ್ಳಿಗೆ ಕಾಡು ಪ್ರಾಣಿಗಳು ಬರುತ್ತಿವೆ. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಗರ ಪ್ರದೇಶಗಳಿಗೂ ದಾಳಿ ಇಡುತ್ತಿವೆ. ಅದು ಆಹಾರದ ಕಾರಣಕ್ಕಾಗಿ ಎಂದರಲ್ಲದೆ ಕಾಡಿನಲ್ಲಿ ಆಹಾರ ಸಿಕ್ಕಿದ್ದರೆ ಪ್ರಾಣಿಗಳು ನಾಡಿಗೆ ಬರುತ್ತಿರಲಿಲ್ಲ ಎಂದರು. ಹಸಿರು ಪ್ರೇಮಿ, ಈಶ್ವರಿ ಸೋಷಿಯಲ್‌ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ವೆಂಕಟೇಶ್‌ ಹಾಗೂ ವಡ್ಡಗೆರೆ ಚಿತ್ರಕೂಟ ಬಳಗದ ಚಿನ್ನಸ್ವಾಮಿ ವಡ್ಡಗೆರೆ ಪರಿಸರ ಕುರಿತು ಮಾತನಾಡಿದರು. ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಯೂನಿಯನ್‌ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ಜಿಲ್ಲಾ ಯೂನಿಯನ್‌ ನಿರ್ದೇಶಕ ಜಿ.ಮಡಿವಾಳಪ್ಪ, ರೈತಸಂಘದ ಕುಂದಕೆರೆ ಸಂಪತ್ತು, ಮುಖಂಡರಾದ ಚಿರಕನಹಳ್ಳ ರವಿ, ವಡ್ಡಗೆರೆ ನಾಗಪ್ಪ, ಪ್ರಭುಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಡಾ.ಸರೋಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಸದಸ್ಯರು, ಗ್ರಾಪಂ ಸದಸ್ಯರು, ಚಿರಕನಹಳ್ಳಿ ಗ್ರಾಮಸ್ಥರು, ಮುಖ್ಯ ಶಿಕ್ಷಕರು, ಶಿಕ್ಷಕರು ಇದ್ದರು. ಪರಿಸರ ಉಳಿಸಿ ಬೆಳೆಸಬೇಕಾದದ್ದು ನಮ್ಮ ಕರ್ತವ್ಯಪರಿಸರ ಉಳಿಸಿ ಬೆಳೆಸಬೇಕಾದದ್ದು ಜಾತಿ, ಧರ್ಮ, ಪಕ್ಷ ಮೀರಿ ನಡೆಯಬೇಕಾದ ಕೆಲಸ. ಆದರೆ ಸ್ವಾರ್ಥ ಪ್ರಪಂಚದಲ್ಲಿ ಅದಾಗುತ್ತಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.ಪರಿಸರ ಉಳಿದರೆ ಮಾತ್ರ ಮಾನವ ಬದುಕಲು ಸಾಧ್ಯ. ಪರಿಸರ ಉಳಿಸುವ ಕೆಲಸಕ್ಕೆ ಪರಿಸರ ಪ್ರೇಮಿ ವೆಂಕಟೇಶ್‌ ಮುಂದಾಗಿದ್ದಾರೆ. ಅದು ಸ್ವಾರ್ಥವಿಲ್ಲದೆ ಎಂದರು. ಕಾಡು ಮತ್ತು ನಾಡು ಉಳಿಸುವ ಕೆಲಸಕ್ಕೆ ಸರ್ಕಾರ ಬದ್ಧವಾಗಿದೆ ನಾನು ಕೂಡ ಸಂಗಮ ಪ್ರತಿಷ್ಠಾನ ಆಶ್ರಯದಲ್ಲಿ ಪರಿಸರ ಉಳಿಸಿ,ಬೆಳೆಸುವ ಕೆಲಸಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.