ಇಂದಿನಿಂದ ಕೂಡ್ಲಿ ಸಂಗಮೇಶ್ವರ ಜಾತ್ರಾ ಮಹೋತ್ಸವ

| Published : Mar 29 2025, 12:37 AM IST

ಸಾರಾಂಶ

ಪಟ್ಟಣದ ಸಮೀಪದ ಹಿತಿಹಾಸ ಪ್ರಸಿದ್ಧ ತುಂಗಭದ್ರಾ ಸಂಗಮ ಶ್ರೀ ಕ್ಷೇತ್ರ ಕೂಡ್ಲಿಯಲ್ಲಿ ಶ್ರೀ ಸಂಗಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮಾ.29ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.

ಅರಹತೊಳಲು ಕೆ.ರಂಗನಾಥ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಪಟ್ಟಣದ ಸಮೀಪದ ಹಿತಿಹಾಸ ಪ್ರಸಿದ್ಧ ತುಂಗಭದ್ರಾ ಸಂಗಮ ಶ್ರೀ ಕ್ಷೇತ್ರ ಕೂಡ್ಲಿಯಲ್ಲಿ ಶ್ರೀ ಸಂಗಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮಾ.29ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.ಶಿವಮೊಗ್ಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಕೂಡ್ಲಿ ಸಂಗಮವೂ ಒಂದು. ಯುಗಾದಿ ಹಬ್ಬ ಬಂತೆಂದರೆ ಇಡೀ ಕೂಡ್ಲಿಗೆ ಜೀವಕಳೆ ಬರುವುದು. ಜಿಲ್ಲೆಯ ಲಕ್ಷಾಂತರ ಭಕ್ತರು ಜಾತ್ರೆಗೆ ಸೇರುವುದು ಮೊದಲಿನಿಂದಲೂ ಇರುವ ವಾಡಿಕೆ. ಯುಗಾದಿಯ ಸಂವತ್ಸರದಂದು ತುಂಗಾಭದ್ರಾ ನದಿಗಳ ಸಂಗಮ ಶ್ರೀ ಕ್ಷೇತ್ರ ಕೂಡ್ಲಿ ಗ್ರಾಮದ ಶ್ರೀ ಸಂಗಮೇಶ್ವರ ಸ್ವಾಮಿಯ ರಥೋತ್ಸವ ಆದ ಬಳಿಕ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆ ಬಹಳ ವಿಶಿಷ್ಟತೆಯಿಂದ ಕೂಡಿರುತ್ತದೆ. ಯುಗಾದಿ ಅಮವಾಸೆಯಿಂದ ಪ್ರಾರಂಭವಾಗುವ ಜಾತ್ರೆ ಮಾರನೆಯ ದಿನ ಚಂದ್ರ ದರ್ಶನ, ನಂತರ ಒಂದು ದಿನ ನಡೆಯುತ್ತದೆ.ಕೂಡ್ಲಿಯ ಸುತ್ತಮುತ್ತಲಿನ ಹೊಳೆಹೊನ್ನೂರು, ಭದ್ರಾಪುರ, ಸಿದ್ಲೀಪುರ, ಡಣಾಯಕಪುರ, ಕೊಡಮಗ್ಗಿ, ನಾಗಸಮುದ್ರ, ಮಂಗೋಟೆ, ಮಲ್ಲಾಪುರ, ಆನವೇರಿ, ಮೈದೊಳಲು, ಮಲ್ಲಿಗೇನಹಳ್ಳಿ, ಹನುಮಂತಾಪುರ, ಅರಹತೊಳಲು, ಕಲ್ಲಿಹಾಳ್, ಅರಬಿಳಚಿ, ಅರಕೆರೆ, ಬೈರನಹಳ್ಳಿ, ಎಮ್ಮೆಹಟ್ಟಿ, ಕೆರೆ ಬೀರನಹಳ್ಳಿ, ಅಗಸನಹಳ್ಳಿ, ಹೊಳೆ ಬೈರನಹಳ್ಳಿ, ಯಡೇಹಳ್ಳಿ, ಅಶೋಕನಗರ, ದಾನವಾಡಿ, ಚಂದನಕೆರೆ ಸೇರಿದಂತೆ ಜಿಲ್ಲೆಯ ನೂರಾರು ಹಳ್ಳಿಗಳ ಜನರು ಜಾತ್ರೆಗೆ ಬರುವರು. ಯುಗಾದಿ ಅಮವಾಸೆಯ ದಿನ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆಂದು ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚು. 60ಕ್ಕೂ ಹೆಚ್ಚು ಗ್ರಾಮಗಳ ದೇವರುಗಳು ಉತ್ಸವ ಸಮೇತ ಯುಗಾದಿ ಚಂದ್ರ ದರ್ಶನಕ್ಕಾಗಿ ಕೋಡ್ಲಿಗೆ ಬರುವುದು ಆದಿಯಿಂದಲೂ ನಡೆದುಕೊಂಡ ಬಂದಿರುವ ಸಂಪ್ರದಾಯವಾಗಿದೆ. ಹೀಗೆ ಬರುವ ದೇವರುಗಳಿಗೆ ಸೂಕ್ತ ಸ್ಥಳದಲ್ಲಿ ನೆಲೆಗೊಳಿಸಲು ಅಗತ್ಯವಾದ ಸ್ಥಳಾವಕಾಶವನ್ನು ಕಲ್ಪಿಸಲಾಗಿರುತ್ತದೆ. ಜೊತೆಗೆ ಉತ್ಸವ ಮೂರ್ತಿಗಳೊಂದಿಗೆ ಬರುವ ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.ಕೂಡ್ಲಿಯಲ್ಲಿ ಚಂದ್ರ ದರ್ಶನ ಪಡೆದ ದೇವರ ಉತ್ಸವ ಮೂರ್ತಿಗಳು ಮಾರನೆಯ ದಿನ ಜಾತ್ರೆ ಮುಗಿಸಿಕೊಂಡು ಸಂಜೆ ವೇಳೆಗೆ ಸ್ವ ಗ್ರಾಮಗಳಿಗೆ ಹಿಂತಿರುಗುತ್ತವೆ. ಭಕ್ತರು ಟ್ರಾಕ್ಟರ್, ಟಿಲ್ಲರ್, ಎತ್ತಿನ ಗಾಡಿ, ಬೈಕ್, ಕಾರು ಸೇರಿದಂತೆ ಹಲವಾರು ವಾಹನಗಳಲ್ಲಿ ಕುಟುಂಬ ಸಮೇತ ಬರುವರು. ಕೂಡ್ಲಿಯ ಸುತ್ತಮುತ್ತಲಿನ ಗ್ರಾಮಗಳಷ್ಟೇ ಅಲ್ಲದೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಜನರು ಆಗಮಿಸುತ್ತಾರೆ. ಸ್ಥಳ ಮಹಾತ್ಮೆ:

ದಕ್ಷಿಣ ಭಾರತದ ವಾರಣಾಸಿ ಎಂದೇ ಪ್ರಸಿದ್ಧವಾಗಿರುವ ಕೂಡ್ಲಿಯು ದಕ್ಷಿಣ ಭಾರತದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ತುಂಗಾ ಮತ್ತು ಭದ್ರಾ ಎಂಬ ಎರಡು ಪವಿತ್ರ ನದಿಗಳ ಸಂಗಮವಾಗಿದೆ. ಇತಿಹಾಸ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಹಲವಾರು ದೇವಾಲಯಗಳನ್ನು ಹೊಂದಿದೆ.ಪ್ರಮುಖ ದೇವಾಲಯಗಳು:ಜಗದ್ಗುರು ಶ್ರೀ ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ, 8ನೇ ಶತಮಾನದ ಸಂಗಮೇಶ್ವರ ದೇವಾಲಯ, ರಾಮೇಶ್ವರ ದೇವಾಲಯ, ಶ್ರೀ ಚಿಂತಾಮಣಿ ನರಸಿಂಹ ದೇವಾಲಯ, ಶೃಂಗೇರಿ ವೇದಿಕಿ ದೇವಾಲಯ, ವಿಶ್ವಕರ್ಮ ದೇವಾಲಯ, ಶ್ರೀ ಮದ್ವಾಚಾರ್ಯ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠ ಸೇರಿದಂತೆ ಇನ್ನೂ ಅನೇಕ ಚಿಕ್ಕಪುಟ್ಟ ದೇವಾಲಯಗಳು ಇವೆ.

ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಯುಗಾದಿ ಹಬ್ಬದ ಪ್ರಯುಕ್ತ ಕುಸ್ತಿ ಪಂದ್ಯಾವಳಿ ನಡೆಸಬೇಕಿತ್ತು. ಆದರೆ ಪಟ್ಟಣದ ಪಂಚಾಯಿತಿಗೆ ಆಡಳಿತ ಮಂಡಳಿ ಇಲ್ಲದ ಕಾರಣ ಯಾರೂ ಮುಂದಾಳತ್ವ ವಹಿಸಿಕೊಳ್ಳಲು ಮುಂದೆ ಬಂದಿಲ್ಲ. ಕೂಡ್ಲಿ ಜಾತ್ರೆ ನಡೆದರೆ ಹೊಳೆಹೊನ್ನೂರಲ್ಲಿ ಕುಸ್ತಿ ಜೋರಾಗೇ ನಡೆಯುತ್ತಿತ್ತು. ಆದರೆ ಉಸ್ತುವಾರಿಯ ಸಮಸ್ಯೆ ಮತ್ತು ಸರಿಯಾದ ಸ್ಥಳಾವಕಾಶ ಇಲ್ಲದ ಕಾರಣ ಕುಸ್ತಿಯನ್ನು ನಡೆಸುತ್ತಿಲ್ಲ.

- ಆರ್.ಉಮೇಶ್, ಮಾಜಿ ಗ್ರಾಪಂ ಹಾಗೂ ಕುಸ್ತಿ ಸಮಿತಿ ಅಧ್ಯಕ್ಷ. ಹೊಳೆಹೊನ್ನೂರು.

ಕೂಡ್ಲಿ ಇತಿಹಾಸ ಪ್ರಸಿದ್ಧ ಜಾತ್ರೆಗೆ ಸಾವಿರಾರು ಜನ ಸೇರುವುದರಿಂದ ಸರಿಯಾದ ಬಂದೋಬಸ್ತ್ ನ ಅವಶ್ಯಕತೆ ಇದೆ. ಆದ್ದರಿಂದ 45 ಜನ ಪೊಲೀಸ್ ಸಿಬ್ಬಂದಿ ಮತ್ತು ಒಂದು ಡಿಆರ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಸರ್ವಸನ್ನದ್ಧವಾಗಿದೆ.

- ಆರ್.ಎಲ್.ಲಕ್ಷ್ಮೀಪತಿ, ಸಿಪಿಐ ಹೊಳೆಹೊನ್ನೂರು, ಪೊಲೀಸ್ ಠಾಣೆ.