ಸಾರಾಂಶ
ಹಿರಿಯೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕೂಡ್ಲಹಳ್ಳಿ ಗ್ರಾಮದ ಶ್ರೀ ಸಂಗಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ರಥೋತ್ಸವ ಜಿಟಿಜಿಟಿ ಮಳೆಯ ನಡುವೆಯೂ ಸೋಮವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ವೇದಾವತಿ ಹಾಗೂ ಸುವರ್ಣಮುಖಿ ನದಿಯ ಸಂಗಮ ಕ್ಷೇತ್ರವಾಗಿರುವ ಕೂಡ್ಲಹಳ್ಳಿ ಸಂಗಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷವು ಶ್ರಾವಣ ಮಾಸದ ಕೊನೆಯ ಸೋಮವಾರ ಜಾತ್ರಾ ಮಹೋತ್ಸವ ವಿಶೇಷವಾಗಿ ನಡೆಯುತ್ತದೆ. ಅದರಂತೆ ಈ ವರ್ಷವು ಸೋಮವಾರ ವಿವಿಧ ಹೂವುಗಳಿಂದ ಅಲಂಕರಿಸಿದ ರಥಕ್ಕೆ ಸಂಗಮೇಶ್ವರ ದೇವರನ್ನು ಕರೆತಂದು ರಥದಲ್ಲಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಬಳಿಕ ರಥೋತ್ಸವವನ್ನು ಸಂಗಮೇಶ್ವರನ ಪಾದದ ಕಲ್ಲುಗಳ ಬಳಿ ಎಳೆದು ಕರೆತರಲಾಯಿತು. ಅನಂತರ ಗ್ರಾಮದ ಶ್ರೀಪಾರ್ಥಲಿಂಗೇಶ್ವರ ದೇವರ ಗಂಟೆಯೊಂದಿಗೆ ಸಂಗಮೇಶ್ವರ ಕಲ್ಲುಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಮಹಿಳೆಯರು ಸಂಗಮೇಶ್ವರ ದೇವರಿಗೆ ತಂಬಿಟ್ಟಿನ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.
ಬಳಿಕ ರಥೋತ್ಸವ ಸಂಗಮೇಶ್ವರನ ಸನ್ನಿಧಿಗೆ ಹಿಂತಿರುಗಿತು. ನೆರೆದಿದ್ದ ಸಾವಿರಾರು ಭಕ್ತರು ಸಂಗಮೇಶ್ವರ ರಥಕ್ಕೆ ಬಾಳೆ ಹಣ್ಣು, ಮಂಡಕ್ಕಿಯನ್ನು ಸೂರುಬಿಡುವ ಮೂಲಕ ಭಕ್ತಿ ಸಮರ್ಪಿಸಿದರು.ವಿವಿಧ ದೇವರುಗಳ ಗಂಗಾಪೂಜೆ:
ಕಡೆ ಶ್ರಾವಣ ಸೋಮವಾರ ಸಂಗಮೇಶ್ವರ ಜಾತ್ರೆ ಅಂಗವಾಗಿ ತಾಲೂಕಿನ ಹತ್ತಾರು ಗ್ರಾಮಗಳಿಂದ ವಿವಿಧ ದೇವರುಗಳನ್ನು ಕ್ಷೇತ್ರಕ್ಕೆ ಕರೆತಂದು ಎರಡು ನದಿಗಳ ಸಂಗಮದ ಹೊಳೆಯಲ್ಲಿ ಗಂಗಾಪೂಜೆ ನೆರವೇರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರು ನದಿಯಲ್ಲಿ ಸ್ನಾನ ಮಾಡಿಕೊಂಡು ಗಂಗಾಪೂಜೆ ಕೈಗೊಂಡು ದೇವರ ದರ್ಶನ ಪಡೆದರು.ತಾಲೂಕಿನ ವಿವಿಧ ಭಾಗಗಳಿಂದ ಟ್ರ್ಯಾಕ್ಟರ್, ಆಟೋ, ಕಾರು, ಬೈಕ್ ಸೇರಿದಂತೆ ವಿವಿಧ ವಾಹನಗಳಲ್ಲಿ ಜನರು ಜಾತ್ರೆಗೆ ಆಗಮಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್, ಚಿದಂಬರಂ ಗೌಡ, ಡಿ.ಸಿ.ಪಾತಲಿಂಗಪ್ಪ, ಮೋಹನ್ ಕೃಷ್ಣ, ಡಾ.ಈರಗಾರ್ ಪಾತಲಿಂಗಪ್ಪ, ಕೆ.ತಿಪ್ಪೇಸ್ವಾಮಿ, ದಿನೇಶ್, ಚಿದಾನಂದ ಸ್ವಾಮಿ, ಮುಜರಾಯಿ ಇಲಾಖೆ ಅಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.ಕೊಠಡಿಗಳ ನಿರ್ಮಾಣಕ್ಕೆ ಒತ್ತಾಯ
ವೇದಾವತಿ ಮತ್ತು ಸುವರ್ಣಮುಖಿ ಎರಡು ನದಿಗಳು ಸಂಗಮವಾಗುವ ಸ್ಥಳದಲ್ಲಿ ಐತಿಹಾಸಿಕ ಶ್ರೀ ಕ್ಷೇತ್ರ ಕೂಡ್ಲಹಳ್ಳಿ ಸಂಗಮೇಶ್ವರನ ದೇವಾಲಯವಿದ್ದು, ಎರಡು ನದಿಗಳು ಇರುವುದರಿಂದ ಮಹಿಳೆಯರು ಹೆಚ್ಚಾಗಿ ಗಂಗಾಪೂಜೆಗೆ ಆಗಮಿಸುವುದು ವಿಶೇಷವಾಗಿದೆ. ಗಂಗಾಪೂಜೆಗೂ ಮುನ್ನ ಸ್ನಾನ ಮಾಡಿದ ಬಳಿಕ ಮಹಿಳೆಯರು ಬಯಲಲ್ಲೇ ಬಟ್ಟೆ ಬದಲಿಸುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಬಟ್ಟೆ ಬದಲಿಸುವ ಕೊಠಡಿಗಳನ್ನು ನಿರ್ಮಾಣ ಮಾಡಬೇಕು. ಮಳೆಗಾಲದಲ್ಲಿ ಜಾತ್ರೆ ನಡೆಯುತ್ತಿರುವುದರಿಂದ ದೂರದ ಊರಿನಿಂದ ಜಾತ್ರೆಗೆ ಆಗಮಿಸುವ ಭಕ್ತರಿಗೆ ಉಳಿದುಕೊಳ್ಳಲು ಕೊಠಡಿಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಜಾತ್ರೆಗೆ ಬಂದಿದ್ದ ಮಹಿಳಾ ಭಕ್ತರೊಬ್ಬರು ಒತ್ತಾಯಿಸಿದರು.