ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಸಂಗನಾಳ ಗ್ರಾಮದಲ್ಲಿ ನಡೆದ ದಲಿತನ ಹತ್ಯೆ ಖಂಡಿಸಿ ಕೊಪ್ಪಳ ಜಿಲ್ಲಾ ದಲಿತ ದಮನಿತರ ದೌರ್ಜನ್ಯ ವಿರೋಧಿ ಒಕ್ಕೂಟ ಕೊಪ್ಪಳ ಡಿಸಿ ಕಚೇರಿಯಿಂದ ಸಂಗನಾಳ ಚಲೋ ಕಾರ್ಯಕ್ರಮದ ಅಡಿ ಜಾಗೃತಿ ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಲಾಯಿತು.ಸುಮಾರು 40 ಕಿಮೀ ದೂರದ ಈ ಪಾದಯಾತ್ರೆಯಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸುತ್ತಾ ಸಾಗಲಾಗುತ್ತದೆ.
ಮೊದಲ ದಿನವಾದ ಮಂಗಳವಾರ ಬರೋಬ್ಬರಿ 18 ಕಿಮೀ ಕ್ರಮಿಸಿ, ಭಾನಾಪುರ ಗ್ರಾಮದಲ್ಲಿ ವಾಸ್ತವ್ಯ ಹೂಡಲಾಗಿದೆ.ಬುಧವಾರ ಬೆಳಗ್ಗೆ ಭಾನಾಪುರದಿಂದ ಸಂಗನಾಳ ಗ್ರಾಮಕ್ಕೆ ಪಾದಯಾತ್ರೆಯ ಮೂಲಕ ತೆರಳಲಿದ್ದಾರೆ. ಸಂಗನಾಳ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ಸೌರ್ಹಾದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಧಿಕಾರಿಗಳ ಅವಶ್ಯಕತೆ ಇದೆ:ಈ ಹಿಂದೆ ಸಹ ಇಡೀ ರಾಜ್ಯಾದ್ಯಂತ ವಿವಿಧ ಕಡೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಆಯಾ ಗ್ರಾಮಕ್ಕೆ ಭೇಟಿ ನೀಡಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಿದ್ದರು. ಘಟನೆಗೆ ಕಾರಣರಾದವರ ವಿರುದ್ಧ ಸಾಕಷ್ಟು ಕಾನೂನು ಕ್ರಮ ಜರುಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾನೂನಿನ ಕುರಿತು ಭಯ ಇರುವಂತೆ ನೋಡಿಕೊಳ್ಳುವ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣಕ್ಕಾಗಿಯೇ ಈಗಲೂ ಸಹ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಹೋರಾಟಗಾರ ಅಂಬಣ್ಣ ಅರೋಲಿಕರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಮಂಗಳವಾರ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಆರಂಭಗೊಂಡ ಸಂಗನಾಳ ಚಲೋ ಜಾಥಾ ಕ್ಕೆ ಚಾಲನೆ ನೀಡಿ ಮಾತನಾಡಿದರು.ದಲಿತರ ಮೇಲೆ ದೌರ್ಜನ್ಯಗಳು ಈ ಹಿಂದಿಗಿಂತ ಈ ಕಾಲದಲ್ಲಿ ಹೆಚ್ಚಾಗಿವೆ. ಇದನ್ನು ಕಾನೂನಿನ ಮೂಲಕವೇ ತಡೆಗಟ್ಟಬೇಕಿದೆ. ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವ ಕಟ್ಟುನಿಟ್ಟಾದ ಅಧಿಕಾರಿಗಳ ಅವಶ್ಯಕತೆ ಇದೆ. ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೆ ಕಾನೂನು ಕ್ರಮ ಕೈಗೊಂಡರೆ ಖಂಡಿತವಾಗಿಯೂ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.ಹೋರಾಟಗಾರ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿದರು.
ಮೊದಲ ದಿನದ ಕಾಲನಡಿಗೆ ಜಾಥಾವು ಜಿಲ್ಲಾಧಿಕಾರಿಗಳ ಕಚೇರಿಯಿಂದ ತೆರಳಿ ಭಾನಾಪುರವನ್ನು ತಲುಪಿತು. ನಾಳೆ ಬೆಳಗ್ಗೆಯಿಂದ ಸಂಗನಾಳದವರೆಗೆ ಜಾಥಾ ನಡೆಯಲಿದೆ. ಜಾಥಾದಲ್ಲಿ ಕೊಪ್ಪಳದ ವಿವಿಧ ಪ್ರಗತಿಪರ ಸಂಘಟನೆಗಳು ಭಾಗಿಯಾಗಿವೆ.ಈ ಸಂದರ್ಭ ಹೋರಾಟಗಾರರಾದ ಟಿ. ರತ್ನಾಕರ್, ಶುಕ್ರಜ ತಾಲ್ಕೇರಿ, ಸಂಘಟಕರಾದ ಬಸವರಾಜ ಸೂಳಿಭಾವಿ, ಮುತ್ತು ಬಿಳಿಯಲಿ, ಶ್ರೀಪಾದ ಭಟ್, ಶಶಿಕಲಾ ಮಠ, ಸಲೀಮಾ ಜಾನ, ಜನಾರ್ದನ, ಎಂ.ಆರ್. ಬೇರಿ, ಗೌರಿ ಗೋನಾಳ, ಮರಿಯಮ್ಮ, ಆನಂದ ಶಿಂಗಾಡಿ, ಖಾಸೀಮ್ ಸರ್ದಾರ, ಡಿ.ಎಂ. ಬಡಿಗೇರ್, ಡಿ.ಎಚ್. ಪೂಜಾರ್, ನಜೀರ್ ಮೂಲಿಮನಿ, ಮುತ್ತು ಹಾಲಕೇರಿ ಸೇರಿದಂತೆ ಇತರರಿದ್ದರು.