ಸರ್ಕಾರಿ ನೌಕರರು ಭಯಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕು ಹಾಗೂ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಿ ನೆಮ್ಮದಿಯಾಗಿ ಜೀವನ ನಡೆಸಬೇಕು ಎಂಬುದು ನೌಕರರ ಸಂಘದ ಮುಖ್ಯ ಉದ್ದೇಶ

ಕನ್ನಡಪ್ರಭ ವಾರ್ತೆ ಚಡಚಣ

ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃದಲ್ಲಿ ಎನ್‌ಪಿಎಸ್ ತೊಲಗಿಸಿ ಒಪಿಎಸ್ ಜಾರಿ ಮಾಡಲು ಸಂಘ ನಿರಂತರ ಪ್ರಯತ್ನ ಮಾಡುತ್ತಿದೆ. ಅಗತ್ಯ ಬಿದ್ದರೆ ಹೋರಾಟ ಮಾಡಲು ಸಂಘ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಒಪಿಎಸ್ ಜಾರಿಯಾಗಲಿದೆ ಎಂದು ಚಡಚಣ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜ್ಜಗಿ ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಶನಿವಾರ ನಡೆದ ತಾಲೂಕಿನ ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ 2024 ರಲ್ಲಿ 7ನೇ ವೇತನ ಆಯೋಗ ಜಾರಿ, ಸರ್ಕಾರಿ ನೌಕರರ ಜೀವ ವಿಮಾ ಗಣಕೀಕರಣ, ಕ್ಯಾನ್ಸರ್‌ ಅಂತಹ ಗಂಭಿರ ಕಾಯಿಲೆಗಳಿಗೆ 6 ತಿಂಗಳ ವೇತನ ಸಹಿತ ರಜೆ, 1 ಲಕ್ಷ 35 ಸಾವಿರ ಮಹಿಳಾ ನೌಕರರಿಗೆ ಮಕ್ಕಳ ಆರೈಕೆಗಾಗಿ 6 ತಿಂಗಳು ವೇತನ ಸಹಿತ ರಜೆ, ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ಋತು ಚಕ್ರ ರಜೆ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹೀಗೆ ಅನೇಕ ನೌಕರರ ಹಿತ ಕಾಪಾಡುವ ಕಾರ್ಯ ಮಾಡುತ್ತಿದೆ ಎಂದ ಅವರು, ಸರ್ಕಾರಿ ನೌಕರರು ಭಯಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕು ಹಾಗೂ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಿ ನೆಮ್ಮದಿಯಾಗಿ ಜೀವನ ನಡೆಸಬೇಕು ಎಂಬುದು ನೌಕರರ ಸಂಘದ ಮುಖ್ಯ ಉದ್ದೇಶ ಎಂದರು.

ಜ್ಯೋತಿ ಬೆಳಗಿಸಿ ಮಾತನಾಡಿದ ತಾಲೂಕಿನ ದಂಡಾಧಿಕಾರಿ ಸಂಜಯ ಇಂಗಳೆ, ಚಡಚಣ ತಾಲೂಕು ಸರ್ಕಾರಿ ನೌಕರರ ಸಂಘ ಹಗಲಿರುಳು ನೌಕರರ ಸೇವೆ ಮಾಡುತ್ತಿದೆ. ಕರೋನಾ ಮಹಾಮಾರಿ ಸಂದರ್ಭದಲ್ಲಿ ನೌಕರರ ಸಂಘ ನೌಕರರ ಆರೋಗ್ಯ ಕಾಪಾಡುವುದರ ಜೊತೆಗೆ ಜನಸೇವೆ ಮಾಡುವ ಶ್ರೇಷ್ಠ ಕಾರ್ಯ ಮಾಡಿ ರಾಜ್ಯಕ್ಕೆ ಮಾದರಿ ಸಂಘ ಆಗಿದೆ ಎಂದರು.

ಶೀಘ್ರದಲ್ಲಿ ನೌಕರರ ಭವನ ನಿರ್ಮಾಣಕ್ಕೆ ಪಟ್ಟಣದಲ್ಲಿ ನಿವೇಶನ ಮಂಜರು ಮಾಡಲಾಗುವುದು ಎಂದು ಭರವಸೆ ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿ, ನೌಕರರ ಸಂಘದ 106 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಬಲಿಷ್ಠ ಹಾಗೂ ಕ್ರಿಯಾಶೀಲ ಅಧ್ಯಕ್ಷ ಸಿ.ಎಸ್ ಷಡಕ್ಷರಿಯವರ ನೇರ ಹಾಗೂ ದೃಢವಾದ ನಿರ್ಧಾರದಿಂದ ನೌಕರರ ಹಲವಾರು ವರ್ಷದ ಬೇಡಿಕೆಗಳು ಈಡೇರಿವೆ ಎಂದರು. ತಾಲೂಕು ಅಧ್ಯಕ್ಷ ಮಜ್ಜಗಿ ನೇತೃತ್ವದಲ್ಲಿ ಸಂಘ ಮಾಡುವ ನೌಕರರ ಪರವಾದ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು, ಪ್ರಾಥಮಿಕ ಶಿಕ್ಷಕರ ಟಿಇಟಿ ಪರೀಕ್ಷೆ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು. ಬಿಎಲ್‌ಓ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕೆಂದು ಒತ್ತಾಯ ಮಾಡಿದರು.

ಚಡಚಣ ತಾಲೂಕಿನಲ್ಲಿ ಅತ್ಯುತ್ತಮ ಸೇವೆ ಮಾಡಿದ ಸರಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ, ಪಪಂ ಅಭಿವೃದ್ಧಿ ಅಧಿಕಾರಿ ತಾವಸೆ, ವೈದ್ಯಧಿಕಾರಿ ಅಗರಖೇಡ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಸ್ ಸೋನಗಿ, ಕಾರ್ಯದರ್ಶಿ ಬಸವಂತ ಉಮರಾಣಿ, ನೌಕರರ ಸಂಘದ ಕಾರ್ಯದರ್ಶಿ ವಿಠ್ಠಲ ಕಾಂಬಳೆ, ಖಜಾಂಚಿ ವಿಠ್ಠಲ.ಕೋಳಿ, ಉಪಾಧ್ಯಕ್ಷ ಮುಕುಂದ ಅಡಕೆ, ಸಿದ್ದು ಬಾಲಗಾಂವ, ಸಲೀಮ್ ಮಕಾನದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಗೌರವಾಧ್ಯಕ್ಷ ಸುರೇಶ ಮಾವಿನಮರ, ಉಪಾಧ್ಯಕ್ಷ ಎಸ್ ಬಿ ಪಾಟೀಲ, ಪ್ರಾಥಮಿಕ ಶಾಲಾ ಪತ್ತಿನ ಉಪಾಧ್ಯಕ್ಷ ಎಸ್ ಜೆ ಪಾಟೀಲ ಹಾಗೂ ತಾಲ್ಲೂಕಿನ ನೌಕರರ ಸಂಘದ ವಿವಿಧ ಹಂತದ ಪದಾಧಿಕಾರಿಗಳು ಹಾಗೂ ನೌಕರರು ಭಾಗವಹಿಸಿದ್ದರು. ಶಿಕ್ಷಕ ಗುರು ಜೇವೂರ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ್ ಕುರ್ಲೆ ನಿರೂಪಿಸಿದರು. ಶಿಕ್ಷಕ ಸತೀಶ ಬಗಲಿ ವಂದನಾರ್ಪಣೆ ಮಾಡಿದರು.