ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಂಘ ಪರಿವಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸೋದನ್ನು ಮೊದಲು ನಿಲ್ಲಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ತಾಕೀತು ಮಾಡಿದರು.

- ಬಾಯಿ ಚಪಲಕ್ಕೆ ಸಂಘ ಪರಿವಾರ-ಮೋದಿ ಟೀಕೆಗೆ ಗರಂ - - -

ದಾವಣಗೆರೆ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಂಘ ಪರಿವಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸೋದನ್ನು ಮೊದಲು ನಿಲ್ಲಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ತಾಕೀತು ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕೈದು ಸಲ ಶಾಸಕರಾದರೂ ಇಂದಿಗೂ ಸಚಿವರಾಗದ ಅದೆಷ್ಟೋ ಹಿರಿಯರು ಕಾಂಗ್ರೆಸ್ಸಿನಲ್ಲಿದ್ದರೂ, ಎಐಸಿಸಿ ಅಧ್ಯಕ್ಷರ ಮಗನೆಂಬ ಕಾರಣಕ್ಕೆ ನಿಮ್ಮನ್ನು ಸಚಿವನಾಗಿ ಮಾಡಿದ್ದಾರೆ. ಮೊದಲು ನಿಮ್ಮ ಸ್ವಂತ ಶಕ್ತಿ ತೋರಿಸಿ ಎಂದರು.

ಗೃಹ ಮಂತ್ರಿಯಾಗಿ ನಿನ್ನ ಸ್ವಂತ ಶಕ್ತಿ ತೋರಿಸಪ್ಪ. ದೀನ ದಲಿತರಿಗೆ ಸ್ಥಾನಮಾನ, ಅವಕಾಶ ಸಿಗಲೆಂದು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಮೀಸಲಾತಿ ಜಾರಿಗೆ ತಂದರು. ಖರ್ಗೆ ಕುಟುಂದವರಾದ ನಿಮಗೇ ಯಾಕೆ ಮೀಸಲಾತಿ? ಬೇರೆ ದಲಿತರಿಗೆ ನಿಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟು, ನೀವು ಬೇರೆ ಯಾವುದಾದರೂ ಸಾಮಾನ್ಯ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು, ಗೆದ್ದು ತೋರಿಸಿ ಎಂದು ಸವಾಲು ಹಾಕಿದರು.

ಮೋದಿ ಪ್ರೆಸ್ ಮೀಟ್ ಮಾಡುವುದಿಲ್ಲವೆಂದು ಟೀಕಿಸುತ್ತೀರಿ? ಈ ಹಿಂದೆ ಐಟಿ ಬಿಟಿ ಸಚಿವನಾಗಿ, ಈಗ ಗೃಹ ಸಚಿವರಾಗಿ ನಿಮ್ಮ ಸಾಧನೆ ಏನು? ನಿಮ್ಮ ಹಿಂದಿನ ಇಲಾಖೆಯ ಸಾಧನೆ ಬಗ್ಗೆ ಒಂದು ಸುದ್ದಿಗೋಷ್ಠಿ ಮಾಡಿ, ನಿಮ್ಮ ಸಾಧನೆ ಹೇಳಿ ನೋಡೋಣ. ಕಲುಬುರಗಿ ಜಿಲ್ಲೆ, ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿ ಬಗ್ಗೆಯಾದರೂ ಸಾರ್ವಜನಿಕವಾಗಿ ಹೇಳಿ ಎಂದು ಕುಟುಕಿದರು.

ಕೆಲ ದಿನಗಳ ಹಿಂದಷ್ಟೇ 10-12 ವಿದ್ಯಾರ್ಥಿನಿಯರು ಶಾಲೆ ಮೇಲ್ಚಾವಣಿ ಕುಸಿದು ಬಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಮ್ಮದೇ ಕ್ಷೇತ್ರದ ಈ ಘಟನೆ ಬಗ್ಗೆ ಒಂದಿಷ್ಟು ಮಾತನಾಡಿ. ಆಸ್ಪತ್ರೆಗೆ ದಾಖಲಾಗಿರುವ ಆ ಗಾಯಾಳು ಮಕ್ಕಳ ಕುರಿತು ಮಾತನಾಡಿ. ಸಂಘ ಪರಿವಾರವನ್ನು ಟೀಕಿಸುವ ಪ್ರಿಯಾಂಕ್ ಖರ್ಗೆಯವರೇ ಸಂಘದಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಅಂತೆಲ್ಲಾ ಇರುವುದಿಲ್ಲ. ಅದರಲ್ಲಿ ಇರುವುದೆಲ್ಲರೂ ಸ್ವಯಂ ಸೇವಕರು. ನೀವು, ನಿಮ್ಮ ತಂದೆ ಏನಾದರೂ ಸಂಘಕ್ಕೆ ದೇಣಿಗೆ ಕೊಟ್ಟಿದ್ದೀರಾ? ದೇಣಿಗೆ ನೀಡಿದ್ದಕ್ಕೆ ರಸೀದಿಯೇನಾದರೂ ಇದೆಯಾ? ಸಂಘದ ಬಗ್ಗೆ ಪೂರ್ಣ ಅರಿಯದೇ, ಹಗುರ ಮಾತನಾಡಬೇಡಿ ಎಂದು ತಾಕೀತು ಹೇಳಿದರು.

ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಕಟ್ಟಡ ಕುಸಿತ, ಅನಾಹುತಗಳ ಸಂಭವಿಸಿದರೆ ಎಲ್ಲರಿಗಿಂತ ಮೊದಲು ಅಲ್ಲಿ ಹಾಜರಾಗಿ ಸಂಕಷ್ಟಕ್ಕೀಡಾದವರನ್ನು ರಕ್ಷಿಸುವುದು, ಗಾಯಾಳುಗಳ ನೆರವಿಗೆ ನಿಲ್ಲುವುದೇ ಸಂಘ ಪರಿವಾರ ಮತ್ತು ಸಂಘದ ಸ್ವಯಂ ಸೇವಕರು. ಹೀಗೆ ಮುಂಚೂಣಿಯಲ್ಲಿ ನಿಂತು ಸೇವಾ ಕಾರ್ಯ ಮಾಡುವ ಸಂಘದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಯಶವಂತ ರಾವ್‌ ಜಾಧವ್ ತಿಳಿಸಿದರು.

- - -

-15ಕೆಡಿವಿಜಿ12: ಯಶವಂತ ರಾವ್ ಜಾಧವ್.