ಸಂಗೊಳ್ಳಿ ರಾಯಣ್ಣ, ರೈತ ಹೋರಾಟಗಾರ ಬಸಪ್ಪ ಮೂರ್ತಿ ಭಗ್ನ

| Published : Sep 19 2024, 01:53 AM IST

ಸಂಗೊಳ್ಳಿ ರಾಯಣ್ಣ, ರೈತ ಹೋರಾಟಗಾರ ಬಸಪ್ಪ ಮೂರ್ತಿ ಭಗ್ನ
Share this Article
  • FB
  • TW
  • Linkdin
  • Email

ಸಾರಾಂಶ

ಅಶೋಕ ಕಾಲವಾಡ 5 ವರ್ಷದ ಹಿಂದೆ ಇದೇ ಗ್ರಾಮದ ಕಲ್ಮೇಶ್ವರ ಮೂರ್ತಿಯ ತಲೆಯ ಭಾಗ ತುಂಡರಿಸಿದ್ದ ಮತ್ತು ದುರ್ಗಾದೇವಿಯ ತ್ರಿಶೂಲ ಕದ್ದು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ. ಇದೀಗ ಮತ್ತೆ ಸಂಗೊಳ್ಳಿ ರಾಯಣ್ಣ ಹಾಗೂ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ಮೂರ್ತಿ ಭಗ್ನಗೊಳಿಸಿದ್ದಾನೆ.

ನವಲಗುಂದ:

ತಾಲೂಕಿನ ಅಳಗವಾಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಯ ಖಡ್ಗ ಹಿಡಿದ ಬಲಗೈ ಹಾಗೂ ರೈತ ಹೋರಾಟಗಾರ ಬಸಪ್ಪ ಲಕ್ಕುಂಡಿ ಅವರ ಪುತ್ಥಳಿಯನ್ನು ಅದೇ ಗ್ರಾಮದ ಮಾನಸಿಕ ಅಸ್ವಸ್ಥನೋರ್ವ ಮಂಗಳವಾರ ತಡರಾತ್ರಿ ಭಗ್ನಗೊಳಿಸಿರುವ ಘಟನೆ ನಡೆದಿದೆ.

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್‌ ಸರ್ವಗಾವಲು ಹಾಕಲಾಗಿದೆ. ಮಾನಸಿಕ ಅಸ್ವಸ್ಥ ಅಶೋಕ ಕಾಲವಾಡ (34) ಮೂರ್ತಿಗಳನ್ನು ವಿರೂಪಗೊಳಿಸಿರುವ ವಿಷಯ ಗ್ರಾಮದಲ್ಲಿ ಹಬ್ಬುತ್ತಿದ್ದಂತೆ ಗ್ರಾಮಕ್ಕೆ ಆಗಮಿಸಿ ಪೊಲೀಸರು ಮೂರ್ತಿಗೆ ಬಿಳಿಬಟ್ಟೆ ಸುತ್ತಿ ಮುಚ್ಚಿದ್ದಾರೆ. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೋಕಾಕ ನೇತೃತ್ವದಲ್ಲಿ ಪುತ್ಥಳಿ ಎದುರು ಪ್ರತಿಭಟನೆ ಸಹ ನಡೆಯಿತು.

ಅಶೋಕ 5 ವರ್ಷದ ಹಿಂದೆ ಇದೇ ಗ್ರಾಮದ ಕಲ್ಮೇಶ್ವರ ಮೂರ್ತಿಯ ತಲೆಯ ಭಾಗ ತುಂಡರಿಸಿದ್ದ ಮತ್ತು ದುರ್ಗಾದೇವಿಯ ತ್ರಿಶೂಲ ಕದ್ದು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ. ಇದೀಗ ಮತ್ತೆ ಸಂಗೊಳ್ಳಿ ರಾಯಣ್ಣ ಹಾಗೂ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ಮೂರ್ತಿ ಭಗ್ನಗೊಳಿಸಿದ್ದಾನೆ. ಗ್ರಾಮಕ್ಕೆ ಹೆಚ್ಚುವರಿ ವರಿಷ್ಠಾಧಿಕಾರಿ ನಾರಾಯಣ ಬರಮನಿ, ಡಿವೈಎಸ್ಪಿ ನಾಗರಾಜ, ಸಿಪಿಐ ರವಿಕುಮಾರ ಕಪ್ಪತನವರ, ಪಿಎಸ್‌ಐ ಜನಾರ್ದನ ಪಿ., ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಮೂರ್ತಿ ಕೊಡಿಸುವ ಭರವಸೆ:

ಅಶೋಕ ವಿರೂಪಗೊಳಿಸಿರುವ ಮೂರ್ತಿಯ ಜಾಗದಲ್ಲಿಯೇ ಮತ್ತೆ ಮೂರ್ತಿ ಪ್ರತಿಷ್ಠಾಪಿಸಲು ಬೇಕಾದ ಮೂರ್ತಿ ಕೊಡಿಸುವುದಾಗಿ ಆತನ ಕುಟುಂಬಸ್ಥರು ಗ್ರಾಮಸ್ಥರು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಸುರೇಶ ಗೋಕಾಕ, ಐದು ವರ್ಷದ ಹಿಂದೇ ರಾಯಣ್ಣನ ಪುತ್ಥಳಿ ಸ್ಥಾಪಿಸಲಾಗಿತ್ತು. ಇದೀಗ ಆ ಮೂರ್ತಿ ಭಗ್ನಗೊಂಡಿರುವುದು ಬೇಸರವನ್ನುಂಟು ಮಾಡಿದೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದೆ ಇರಲಿ ಎಂದು ಹೇಳಿದರು.

ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಭಗ್ನಗೊಂಡಿರುವ ಮೂರ್ತಿ ತೆರವುಗೊಳಿಸಿ ಶೀಘ್ರ ಹೊಸ ಮೂರ್ತಿ ಪ್ರತಿಷ್ಠಾಪಿಸಬೇಕು. ಜತೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಉದ್ಯಾನದ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ನಾರಾಯಣ ಬರಮನಿ ಮಾತನಾಡಿ, ಈ ಕೃತ್ಯವೆಸಗಿದ ವ್ಯಕ್ತಿಯನ್ನು ಬಂಧಿಸಿದ್ದು ಅವನ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಪುತ್ಥಳಿ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಪುತ್ಥಳಿ ಮರುಸ್ಥಾಪನೆಗೆ ಗ್ರಾಮಸ್ಥರು ಎಂದು ಸಮಯ ನೀಡುತ್ತಾರೋ ಅಂದು ಮರುಸ್ಥಾಪನೆಗೆ ಇಲಾಖೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಈ ವೇಳೆ ತಹಸೀಲ್ದಾರ್ ಸುಧೀರ ಸಾವಕಾರ, ಶಂಕರ ಅಂಬ್ಲಿ, ರಘುನಾಥ ನಡುವಿನಮನಿ, ಕುಮಾರ ಲಕ್ಕನ್ನವರ, ವಿಕ್ರಮ್ ಕುರಿ, ಪ್ರಕಾಶ ಗೊಂದಲೆ ಸೇರಿದಂತೆ ಗ್ರಾಮಸ್ಥರು, ವಿವಿಧ ಕನ್ನಡಪರ ಸಂಘಟನೆಗಳು ಹಾಜರಿದ್ದರು.