ಸಾರಾಂಶ
ಗೇರಿಲ್ಲಾ ಯುದ್ಧ ತಂತ್ರದ ರೂವಾರಿಯಾಗಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಚಿಲುಮೆ
ಕುಷ್ಟಗಿ: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ದೇಶಕ್ಕಾಗಿ ಮಡಿದ ರಾಯಣ್ಣ ಶೌರ್ಯದ ಪ್ರತೀಕ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಗೇರಿಲ್ಲಾ ಯುದ್ಧ ತಂತ್ರದ ರೂವಾರಿಯಾಗಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಚಿಲುಮೆ ಎಂದರು.
ಕಿತ್ತೂರು ಚೆನ್ನಮ್ಮನ ಬಲಗೈ ಬಂಟನಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿದ ಮೊದಲ ಕ್ರಾಂತಿ ಕಿಡಿ ಸಂಗೊಳ್ಳಿ ರಾಯಣ್ಣ. ಇಂತಹ ಮಹಾನ್ ಹೋರಾಟಗಾರನ ದೇಶಪ್ರೇಮ ಇಂದಿನ ಯುವಕರಲ್ಲಿ ಒಡಮೂಡಬೇಕು. ರಾಯಣ್ಣನ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಸಮಾಜದಲ್ಲಿ ಎಲ್ಲರೊಂದಿಗೆ ಸಾಮರಸ್ಯದ ಬದುಕು ನಡೆಸಬೇಕು ಎಂದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಬಾದಿಮನಾಳದ ಕನಕಗುರು ಪೀಠ ಶಾಖಾಮಠದ ಶಿವಸಿದ್ದೇಶ್ವರ ಶ್ರೀಗಳು ವಹಿಸಿದ್ದರು, ಬಿಜಕಲ್ ಗ್ರಾಪಂ ಅಧ್ಯಕ್ಷ ಸಂಗಪ್ಪ ತೆಗ್ಗಿನಮನಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಕೆ.ಮಹೇಶ,ಲಾಡಸಾಬ್ ಕೊಳ್ಳಿ, ಭರಮಗೌಡ ಬ್ಯಾಲಿಹಾಳ, ರವಿಕುಮಾರ ಹಗೇದಾಳ ಸೇರಿದಂತೆ ಟಕ್ಕಳಕಿ ಗ್ರಾಮದ ಗುರು ಹಿರಿಯರು ಪ್ರಮುಖರು ಭಾಗವಹಿಸಿದ್ದರು.
ಸಿಸಿ ರಸ್ತೆ ಕಾಮಗಾರಿಗೆ ಚಾಲನೆ:ಶಾಸಕ ದೊಡ್ಡನಗೌಡ ಪಾಟೀಲ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ಹೆಸರೂರು ಹಾಗೂ ಟಕ್ಕಳಕಿ ಗ್ರಾಮದಲ್ಲಿ ಮಂಜೂರಾಗಿರುವ ಸಿಸಿ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೋಟಿಹಾಳ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಮುಖಂಡರು ಭಾಗವಹಿಸಿದ್ದರು.