17 ರಂದು ಸಂಗೊಳ್ಳಿ ಉತ್ಸವ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

| Published : Jan 14 2024, 01:31 AM IST

ಸಾರಾಂಶ

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂಂದ ಜ.17 ರಂದು ಆಚರಿಸಲ್ಪಡುತ್ತಿರುವ ಸಂಗೊಳ್ಳಿ ಉತ್ಸವದ ಅಂಗವಾಗಿ ಸಂಗೊಳ್ಳಿ ಗ್ರಾಮದಲ್ಲಿ ಉತ್ಸವ ಹಾಗೂ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರಾಕ್‌ ಗಾರ್ಡನ್‌, ಸೈನಿಕ ವಸತಿ ಶಾಲೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂಂದ ಜ.17 ರಂದು ಆಚರಿಸಲ್ಪಡುತ್ತಿರುವ ಸಂಗೊಳ್ಳಿ ಉತ್ಸವದ ಅಂಗವಾಗಿ ಸಂಗೊಳ್ಳಿ ಗ್ರಾಮದಲ್ಲಿ ಉತ್ಸವ ಹಾಗೂ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರಾಕ್‌ ಗಾರ್ಡನ್‌, ಸೈನಿಕ ವಸತಿ ಶಾಲೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ಉತ್ಸವವನ್ನುಅದ್ಧೂರಿಯಾಗಿ ಆಚರಿಸಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದಾಗ ಮುಖ್ಯಮಂತ್ರಿಗಳು ಉತ್ಸವ ಆಚರಣೆಗೆ ₹1 ಕೋಟಿ ಹಣವನ್ನು ಮತ್ತು ಹಿಂದಿನ ವರ್ಷದ ಉತ್ಸವದ ಬಾಕಿ ಹಣ ₹50 ಲಕ್ಷ ಬಿಡುಗಡೆ ಮಾಡಿ ಉತ್ಸವ ಉದ್ಘಾಟನೆಗೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ, ದೇಶಪ್ರೇಮ ಅಜರಾಮರವಾಗಿರಲು ಹಾಗೂ ನಾಡಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ₹150 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೈನಿಕ ವಸತಿ ಶಾಲೆ, ಯೋಜನೆಗೆ ಹಾಗೂ ರಾಯಣ್ಣನ ಜೀವನ ಚರಿತ್ರೆ ಮತ್ತು ಅವರ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ರೂಪ-ರೇಷೆಗಳನ್ನು ಬಿಂಬಿಸುವ ರಾಕ್‌ ಗಾರ್ಡನ್‌ ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುದಾನ ನೀಡಿದ್ದು ಇತಿಹಾಸವಾಗಿದೆ. ಸೈನಿಕ ವಸತಿ ಶಾಲೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ರಾಕ್‌ ಗಾರ್ಡನ್‌ ನಿರ್ಮಾಣದಿಂದ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿ ಗ್ರಾಮವು ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ, ಮುಖ್ಯ ಸಚೇತಕ ಅಶೋಕ ಪಟ್ಟಣ, ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜಿಲ್ಲೆಯ ಲೋಕಸಭಾ, ರಾಜ್ಯಸಭಾ ಸದಸ್ಯರು ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು ಹಾಜರಿರುವರು. ಶಾಸಕ ಮಹಾಂತೇಶ ಎಸ್‌ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಉತ್ಸವದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನೀರಿಕ್ಷೆಯಿದ್ದು, ಜಾನಪದ, ಕುಸ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು. ಈ ಉತ್ಸವಕ್ಕೆ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಹಾಗೂ ನಾಡಿನ ಜನತೆ ಜ.17 ಹಾಗೂ 18 ರಂದು ಜರುಗಲಿರುವ ಸಂಗೊಳ್ಳಿ ಉತ್ಸವದಲ್ಲಿ ಪಾಲ್ಗೊಂಡು ಉತ್ಸವಕ್ಕೆ ಶೋಭೆ ತರಲು ವಿನಂತಿಸಿದರು.

ಬಾಕ್ಸ್......

ಸ್ವಚ್ಛ ಸರ್ವೇಕ್ಷಣ-2023ರಲ್ಲಿ ಪುರಸಭೆಗೆ ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ ಸ್ಥಾನ: ಶಾಸಕ ಮಹಾಂತೇಶ ಹರ್ಷಬೈಲಹೊಂಗಲ: ಸ್ವಚ್ಛ ಸರ್ವೇಕ್ಷಣ-2023ರಲ್ಲಿ ಪಟ್ಟಣದ ಪುರಸಭೆ ರಾಜ್ಯಕ್ಕೆ 2ನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸುವುದರಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯವಾಗಿದ್ದು, ಮುಂದಿನ ದಿನಮಾನಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ದೊರಕಿಸಿಕೊಳ್ಳುವಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ (ನಗರ) ಅಡಿಯಲ್ಲಿ ನಡೆಸುವ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಬೈಲಹೊಂಗಲ ಪುರಸಭೆ ರಾಜ್ಯಕ್ಕೆ 2ನೇ ಸ್ಥಾನ ಲಭಿಸಿದ್ದು, ಜಿಲ್ಲೆಗೆ ಪ್ರಥಮ ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ದಕ್ಷಿಣ ವಿಭಾಗದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಮಟ್ಟದಲ್ಲಿ 09 ನೇ ರ್‍ಯಾಂಕ್‌ , ರಾಷ್ಟ್ರಮಟ್ಟದಲ್ಲಿ 518 ರ್‍ಯಾಂಕ್‌ ಲಭಿಸಿದೆ ಎಂದರು.

ಕಳೆದ ವರ್ಷದ ಸಮೀಕ್ಷೆಯಲ್ಲಿ ದೇಶದ ದಕ್ಷಿಣ ವಿಭಾಗದಲ್ಲಿ 15ನೇ ರ್‍ಯಾಂಕ್‌ ಪಡೆದಿದ್ದ ಪುರಸಭೆ ಈ ಬಾರಿ 9ನೇ ರ್‍ಯಾಂಕ್‌ ಪಡೆದಿದ್ದು,ಇದಕ್ಕೆ ಪುರಸಭೆ ಆಡಳಿತ ಮಂಡಳಿಯ ಸದಸ್ಯರ ಸಹಕಾರ, ಸಿಬ್ಬಂದಿ ವರ್ಗ, ಪೌರಕಾರ್ಮಿಕರು ಮುಖ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ವಚ್ಛತೆಯ ಬಗ್ಗೆ ವಹಿಸಿದ ಕ್ರಮ ಹಾಗೂ ನಗರದ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಶುಚಿತ್ವಕ್ಕೆ ನೀಡಿದ ಸಹಕಾರ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.