ಸಾರಾಂಶ
ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಗ್ರಾಪಂ ಆಸ್ತಿಯನ್ನು ಸಾರ್ವಜನಿಕವಾಗಿ ಸ್ಮಶಾನಕ್ಕೆ ಹಸ್ತಾಂತರಿಸಿದ ಮಸಣಮಠ ಎಂಬ ಹೆಸರಿನ 128 ಸರ್ವೇ ನಂಬರ್ 8 ಎಕರೆ 27 ಗುಂಟೆ ಆಸ್ತಿಯ ಪಹಣಿಯಲ್ಲಿ ಶಾಸಾನ ಬಗ್ಗೆ ವಕ್ಫ್ ಆಸ್ತಿ ಎಂದು ನಮೂದಾಗಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ರೈತರ, ಮಠಗಳ, ಶಾಲೆಗಳ, ಸ್ಮಶಾನ ಭೂಮಿಗಳ ಆಸ್ತಿಗಳ ಪಹಣಿಯಲ್ಲಿ ಕಂಡು ಬರುತ್ತಿರುವ ವಕ್ಪ್ ಆಸ್ತಿ ದಾಖಲಾತಿ ಈಗ ಬೈಲಹೊಂಗಲ ತಾಲೂಕಿನಲ್ಲೂ ಸದ್ದು ಮಾಡುತ್ತಿದೆ.ತಾಲೂಕಿನ ಸಂಗೊಳ್ಳಿ ಗ್ರಾಮದ ಗ್ರಾಪಂ ಆಸ್ತಿಯನ್ನು ಸಾರ್ವಜನಿಕವಾಗಿ ಸ್ಮಶಾನಕ್ಕೆ ಹಸ್ತಾಂತರಿಸಿದ ಮಸಣಮಠ ಎಂಬ ಹೆಸರಿನ 128 ಸರ್ವೇ ನಂಬರ್ 8 ಎಕರೆ 27 ಗುಂಟೆ ಆಸ್ತಿಯ ಪಹಣಿಯಲ್ಲಿ ಶಾಸಾನ ಬಗ್ಗೆ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಗ್ರಾಮದ ನಾಗರಿಕರೋರ್ವರು ಉತಾರ ತಗೆಸಿ ನೋಡಿದಾಗ ಈ ಮಾಹಿತಿ ಬಹಿರಂಗವಾಗಿದೆ.
ಈ ಕುರಿತು ತಹಸೀಲ್ದಾರ ಹಣಮಂತ ಶಿರಹಟ್ಟಿ ಅವರನ್ನು ಸಂಪರ್ಕಿಸಿದಾಗ, ಗೆಜೆಟ್‌ನಲ್ಲಿ ಈ ರೀತಿ ಆಗಿರಬಹುದು. ಇಲ್ಲಿಯವರೆಗೆ ನಮ್ಮ ಕಚೇರಿಯಿಂದ ಯಾವುದೇ ನೊಟೀಸ್ ನೀಡಿ ವಕ್ಪ್ ಆಸ್ತಿ ಎಂದು ದಾಖಲಾತಿ ಮಾಡಿಲ್ಲ ಎಂದು ತಿಳಿಸಿದ್ದಾರೆ.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಪಂ ಸದಸ್ಯ ಬಸವರಾಜ ಕೊಡ್ಲಿ, ವಕೀಲ ಉಮೇಶ ಲಾಳ ವರು, ಕೂಡಲೇ ಸ್ಮಶಾನ ಭೂಮಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ತೆಗೆಯಬೇಕು. ಇಲ್ಲದಿದ್ದರೆ ಗ್ರಾಮಸ್ಥರು ತಹಸೀಲ್ದಾರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ರೈತರ ನೆಮ್ಮದಿ ಹಾಳು ಮಾಡಿರುವ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ದಾಖಲು ವಿರುದ್ಧ ನ.11 ರಂದು ಬೆಳಗ್ಗೆ 10ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೃಹತ್ ಪ್ರತಿತ್ನೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಸಂಗೊಳ್ಳಿ ಗ್ರಾಮದ ಸ್ಮಶಾನ ಭೂಮಿ ಕಬಳಿಸಲು ಯತ್ನಿಸುತ್ತಿರುವದು ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ತಿಳಿಸಿದ್ದಾರೆ.