ಸಾರಾಂಶ
ಕನ್ನಡಪ್ರಭ ವಾರ್ತೆ ತರೀಕೆರೆ
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಂಜೀವಿನಿ ಒಕ್ಕೂಟವು ಸಹಕಾರಿಯಾಗಿದೆ ಎಂದು ಶಾಸಕ ಜಿ. ಎಚ್.ಶ್ರೀನಿವಾಸ್ ಅವರ ಪತ್ನಿ ವಾಣಿ ಶ್ರೀನಿವಾಸ್ ಹೇಳಿದರು.ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಡೆದ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು ಸಭೆಯ ವರದಿ ಮಂಡನೆಯ ಬಗ್ಗೆ ಪ್ರಶಂಸೆ ನೀಡಿ ಎಲ್ಲರಿಗೂ ಶುಭ ಹಾರೈಸಿದರು.
ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಬಾವಿಕೆರೆ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಮಹಿಳೆಯರು ಸಮುದಾಯ ಬಂಡವಾಳ ನಿಧಿಯನ್ನು ಸದುಪಯೋಗ ಪಡಿಸಿಕೊಂಡು, ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾಸಿಕ ಸಂತೆಯಲ್ಲಿ ಮಾರಾಟ ಮಾಡಲು ವ್ಯವಸ್ಥೆಯನ್ನು ಕಲ್ಪಿಸಿರುವುದರಿಂದ ಸ್ವಸಹಾಯ ಸಂಘದ ಮಹಿಳೆಯರಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಕಾರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಚಿಕ್ಕಮಗಳೂರು ಜಿಪಂ ಜಿಲ್ಲಾ ಕಾರ್ಯಕ್ರಮಕ ವ್ಯವಸ್ಥಾಪಕ ರಾಜೇಂದ್ರ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಮಹಿಳೆಯರು ಒಕ್ಕೂಟದ ವ್ಯಾಪ್ತಿಗೆ ಬರುವಂತೆ ಹಾಗೂ ಸಂಜೀವಿನಿ ಯೋಜನೆಯಲ್ಲಿ ದೊರೆಯುವ ಸಮುದಾಯ ಬಂಡವಾಳ ನಿಧಿ, ದುರ್ಬಲ ವರ್ಗದವರ ನಿಧಿ, ಪ್ರಧಾನ ಮಂತ್ರಿ ಕಿರು ಆಹಾರ ಉದ್ಯಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಮುಂತಾದ ಯೋಜನೆಗಳನ್ನು ಸದುಪಯೋಗಿಸಿಕೊಳ್ಳುವ ಬಗ್ಗೆ ಹಾಗೂ ಸಂಜೀವಿನಿ ಯೋಜನೆಯ ಉದ್ದೇಶ ಸಾಕಾರಗೊಳಿಸಲು ಒಕ್ಕೂಟ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಈ ವೇಳೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಷಡಕ್ಷರಿ ಮಾತನಾಡಿದರು. ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ತಾರಾದೇವಿ ಅವರು ಸಮಾರಂಭದ ಅಧ್ಯಕ್ಷತೆಯ ವಹಿಸಿದ್ದರು.ಸಭೆಯಲ್ಲಿ ಒಕ್ಕೂಟದ ಆಡಿಟ್ ವರದಿ, ಜಮಾ ಖರ್ಚು ಹಾಗೂ ಮುಂದಿನ ಆರ್ಥಿಕ ವರ್ಷದ ಯೋಜನಾ ವರದಿಯನ್ನು ಮಂಡಿಸಲಾಯಿತು.
ಬಾವಿಕೆರೆ ಗ್ರಾಪಂ ಸದಸ್ಯರು, ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯರಾದ ಗಣೇಶ್ ಟಿ.ಎಸ್, ಶಿಕ್ಷಕಿ ವಸಂತ ಕುಮಾರಿ, ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕರಾದ ನರೇಶ್ ಕುಮಾರ್ ಸೇರಿ ಅನೇಕರು ಇದ್ದರು.