ದೇಶವನ್ನು ಸಂರಕ್ಷಿಸಿಕೊಳ್ಳುವ ಸಂಕಲ್ಪ ಜಾಥಾ ಪ್ರಾರಂಭ: ಡಾ.ರಮೇಶ್ ಬೆಲ್ಲಂಕೊಂಡ

| Published : Apr 03 2024, 01:32 AM IST

ದೇಶವನ್ನು ಸಂರಕ್ಷಿಸಿಕೊಳ್ಳುವ ಸಂಕಲ್ಪ ಜಾಥಾ ಪ್ರಾರಂಭ: ಡಾ.ರಮೇಶ್ ಬೆಲ್ಲಂಕೊಂಡ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಲೋಕಸಭಾ ಚುನಾವಣೆ ಪ್ರಜಾತಂತ್ರ ವ್ಯವಸ್ಥೆಯಡಿ ಇರಬೇಕಾ, ಸರ್ವಾಧಿಕಾರಕ್ಕೆ ಒಳಗಾಗಬೇಕಾ ಎಂಬುದನ್ನು ನಿರ್ಧರಿಸುವುದಾಗಿದೆ. ಸಂವಿಧಾನ ವಿರೋಧಿ, ಧರ್ಮಾಂಧ ಬಿಜೆಪಿಯನ್ನು ಸೋಲಿಸುವುದು ಮುಖ್ಯ. ಬಣ್ಣ ಬಣ್ಣದ ಕನಸುಗಳ ಮಹಾಪೂರ ಹರಿಸಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ತನ್ನ ನಿಜ ಬಣ್ಣ ತೋರಿಸಿಕೊಂಡಿದೆ. ಭಾರತ ಅವನತಿ ಅಂಚಿಗೆ ಬಂದು ನಿಂತಿದೆ. ದೇಶವನ್ನು ಸಂರಕ್ಷಿಸಿಕೊಳ್ಳುವ ಸಂಕಲ್ಪ ಜಾಥಾ ಪ್ರಾರಂಭವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತ ಅವನತಿ ಅಂಚಿಗೆ ಬಂದು ನಿಂತಿದೆ. ದೇಶವನ್ನು ಸಂರಕ್ಷಿಸಿಕೊಳ್ಳುವ ಸಂಕಲ್ಪ ಜಾಥಾ ಪ್ರಾರಂಭವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ರಮೇಶ್ ಬೆಲ್ಲಂಕೊಂಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಲೋಕಸಭಾ ಚುನಾವಣೆ ಪ್ರಜಾತಂತ್ರ ವ್ಯವಸ್ಥೆಯಡಿ ಇರಬೇಕಾ, ಸರ್ವಾಧಿಕಾರಕ್ಕೆ ಒಳಗಾಗಬೇಕಾ ಎಂಬುದನ್ನು ನಿರ್ಧರಿಸುವುದಾಗಿದೆ. ಸಂವಿಧಾನ ವಿರೋಧಿ, ಧರ್ಮಾಂಧ ಬಿಜೆಪಿಯನ್ನು ಸೋಲಿಸುವುದು ಮುಖ್ಯ ಎಂದರು.

ಬಣ್ಣ ಬಣ್ಣದ ಕನಸುಗಳ ಮಹಾಪೂರ ಹರಿಸಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ತನ್ನ ನಿಜ ಬಣ್ಣ ತೋರಿಸಿಕೊಂಡಿದೆ. ದೇಶದ ಪರಿಸ್ಥಿತಿ ಅಧೋಗತಿಗೆ ತಂದಿಟ್ಟಿದೆ. ಜನ ಸಾಮಾನ್ಯರ ಬದುಕನ್ನು ಪಾತಾಳಕ್ಕೆ ತುಳಿದಿದೆ. ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ, ಭ್ರಷ್ಟಾಚಾರ, ಕಂಪನಿಗಳ ಲೂಟಿ, ಸಾಮಾನ್ಯರ ಸುಲಿಗೆ, ಕರ್ನಾಟಕಕ್ಕೆ ಅನ್ಯಾಯ, ಹೆಚ್ಚಿರುವ ಹಿಂಸೆ, ದಮನ, ದೌರ್ಜನ್ಯ ಧಾರ್ಮಿಕ ದೇಷ ಇವೆಲ್ಲವೂ ಈ ಸರ್ಕಾರದ ಬಳುವಳಿಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬರಲು ಬೇಕಾದ ಸಾಧನೆ ಮಾಡದೆ ಜಾತಿ, ಜಾತಿಗಳ ನಡುವೆ ಜಗಳ ಹಚ್ಚುವ, ಧರ್ಮ ಧರ್ಮಗಳ ನಡುವೆ ದ್ವೇಷ ಬೆಳೆಸುವ, ದೇಶವನ್ನು ಭಾವೋದ್ರೇಕಗೊಳಿಸಿ ಮತಗಳನ್ನು ಕಬಳಿಸುವ ತಂತ್ರಗಾರಿಕೆ ಮಾರ್ಗಗಳನ್ನು ಹುಡುಕುತ್ತಿದೆ ಎಂದು ಆರೋಪಿಸಿದರು.

ಈ ಚುನಾವಣೆಯ ಮುನ್ನ ಪುಲ್ವಾಮದಂತಹ ಮತ್ತೊಂದು ನೀಚ ಷಡ್ಯಂತ್ರ ರೂಪಿಸುವ ಎಲ್ಲಾ ಸಾಧ್ಯತೆಗಳೂ ಇವೆ. ನಾಗರೀಕರಾಗಿ ನಾವು ಜಾಗೃತರಾಗಬೇಕಿದೆ. ಜನರನ್ನೂ ಜಾಗೃತಗೊಳಿಸಬೇಕಿದೆ ಎಂದರು.

ಬಿಜೆಪಿ 400 ಮುಟ್ಟುವುದಿರಲಿ, 200 ತಲುಪುವುದೂ ಕಷ್ಟವಿದೆ. ಜನಸಾಮಾನ್ಯರನ್ನು ಸಂಕಷ್ಟಗಳ ಕೂಪಕ್ಕೆ ತಳ್ಳಿರುವ ಬಿಜೆಪಿಗೆ ಜನ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ಎ.ಎಲ್. ಕೆಂಪೂಗೌಡ, ಆರ್. ನಾಗೇಶ್, ಬಿ.ಟಿ. ವಿಶ್ವನಾಥ್, ಗುರುಪ್ರಸಾದ್ ಕೆರಗೋಡು, ಕೃಷ್ಣೇಗೌಡ, ಪೂರ್ಣಿಮಾ, ಸಿದ್ದರಾಜು ಇದ್ದರು.